ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಅನುಕಂಪ; ಇನ್ನೊಂದೆಡೆ ಯುವ ಮುಖ..!

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ
Last Updated 4 ಮೇ 2018, 12:42 IST
ಅಕ್ಷರ ಗಾತ್ರ

ವಿಜಯಪುರ: ಎರಡು ದಶಕಗಳಿಂದ ಚುನಾವಣೆ ಪ್ರಚಾರದಲ್ಲಿ ತೀವ್ರ ಚರ್ಚೆ ಗೀಡಾಗುತ್ತಿದ್ದ ವಿಷಯಕ್ಕೆ ಇದೀಗ ತಾರ್ಕಿಕ ಅಂತ್ಯ ಬಿದ್ದಿದೆ. ತಮ್ಮ ಅಧಿಕಾ ರದ ಕೊನೆ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಡಚಣ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಯೋಜನೆಯ ಸಾಧಕ–ಬಾಧಕ ಕುರಿತಂತೆ ಚಡಚಣ ಭಾಗದಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಪ್ರಸಕ್ತ ಚುನಾ ವಣೆಯಲ್ಲಿ ಇದು ಪರಿಣಾಮವನ್ನು ಬೀರಲಿದೆ.

‘ವರ್ಷದಲ್ಲಿ ಆರು ತಿಂಗಳಿಗೂ ಹೆಚ್ಚಿನ ಅವಧಿ ಭೀಮಾ ನದಿ ಬತ್ತಿರುತ್ತದೆ. ಇಂತಹ ಸನ್ನಿವೇಶದಲ್ಲಿ ಏತ ನೀರಾವರಿಗೆ ನೀರು ಯಾವ ಪ್ರಮಾಣದಲ್ಲಿ ಲಭ್ಯವಾಗಲಿದೆ ? ಎಂಬುದೇ ಈ ಭಾಗದ 42 ಹಳ್ಳಿಗಳ ಜನರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿರುವುದು ಒಂದೆಡೆ.

ಸರ್ಕಾರ ಸೂಕ್ತ ತಯಾರಿಯಿಲ್ಲದೆ ₹ 413 ಕೋಟಿ ಮೊತ್ತದ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆಯೇ? ಎಂಬ ಸಮರ್ಥನೆ ಇನ್ನೊಂದೆಡೆ. ಒಟ್ಟಾರೆ ಯೋಜನೆಯ ಸಾಫಲ್ಯತೆ ಬಗ್ಗೆ ಗೊಂದಲ ಮೂಡಿದೆ’ ಎನ್ನುತ್ತಾರೆ ನಾಗ ಠಾಣ ಮೀಸಲು ವಿಧಾನಸಭಾ ಕ್ಷೇತ್ರದ ಗಡಿ ಭಾಗದ ಟಾಕಳಿಯ ರಾಜಶೇಖರ ವಾಲಿ.

‘ಮೂರ್ನಾಲ್ಕು ವರ್ಸದಿಂದ ನಮ್ಮೂರಿನ ಕುಡಿಯೋ ನೀರಿನ ಸಮಸ್ಯೆ ಬಗೆಹರಿದಿಲ್ಲ. ಹಲ ಬಾರಿ ಮನವಿ ಮಾಡಿದ್ರೂ ಯಾರೊಬ್ರೂ ಸ್ಪಂದಿಸಲಿಲ್ಲ. ನಿತ್ಯ ನೀರಿಗಾಗಿ ತ್ರಾಸ್‌ ಪಡೋದ್‌ ತಪ್ಪಲಿಲ್ಲ. ವಾರದ ಹಿಂದಷ್ಟೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಗೊಂಡಿದೆ. ಆದ್ರೇ ಮನೆಗಳ ಬಳಿಗೆ ನಳ ಬರ್ತಿಲ್ಲ. ಏನಾರ ಮಾಡ್ರೀ. ನಮ್ಗ ನಳ ಬರೋಂಗ್‌ ಮಾಡ್ರೀ’ ಎಂದವರು ಐನಾಪುರ ಮಹಲ್‌ನ ಪರಶುರಾಮ ಚಾಂದಕವಠೆ.

‘ಕೈ’ ಬಲಪಡಿಸಿದ ಕಟಕದೊಂಡ: ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಅಭ್ಯರ್ಥಿಗಾಗಿ ಪರದಾಡುತ್ತಿದ್ದ ‘ಕೈ’ ಪಡೆಗೆ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಠ್ಠಲ ಕಟಕದೊಂಡರೇ ಬಲ ತುಂಬಿದ್ದು ಈ ಕ್ಷೇತ್ರದಲ್ಲಿನ ವಿಶೇಷ.

‘ನಂಗ ಯಾರೂ ಇಲ್ಲ. ಮಕ್ಕಳಿಬ್ರು ಸತ್ತರೂ ನಿಮ್ಮ ಸಲುವಾಗಿ ರಾಜಕೀಯದಲ್ಲಿರುವೆ. ಧೃತರಾಷ್ಟ್ರನ ಪ್ರೀತಿಗೆ ನಂಗ ಬಿಜೆಪಿಯವರು ಮೋಸ ಮಾಡಿದ್ರೂ. ಅನಿವಾರ್ಯವಾಗಿ ‘ಕೈ’ ಹಿಡಿದ್ವೀನಿ. ನೀವು ನನ್ನ ‘ಕೈ’ ಬಿಡಬ್ಯಾಡ್ರೀ...’ ಎನ್ನುವ ಮೂಲಕ ಕಟಕದೊಂಡ ಕ್ಷೇತ್ರಾದ್ಯಂತ ಅನುಕಂಪ ಗಿಟ್ಟಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಮತದಾರರು ಇದಕ್ಕೆ ಯಾವ ರೀತಿ ಮನ್ನಣೆ ನೀಡಲಿದ್ದಾರೆ ಎಂಬುದು ಗೋಪ್ಯವಾಗಿದೆ.

ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣ ಸಹ ಅನುಕಂಪದ ಆಧಾರದಲ್ಲಿ ಮತದಾರರ ಮನವೊಲಿಕೆಗೆ ಮುಂದಾಗಿ ದ್ದಾರೆ. ಹಿಂದಿನ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡ ಬಳಿಕವೂ ಕ್ಷೇತ್ರದಲ್ಲಿ ಸಂಚರಿಸಿ, ಕಾರ್ಯಕರ್ತರ ಒಡನಾಟದಲ್ಲಿದ್ದುದನ್ನೇ ಇದೀಗ ತಮಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಕೈ ಮುಗಿದು ಮತ ಬೇಡುತ್ತಿದ್ದಾರೆ.

‘ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನ್ನ ಪರ ಹೆಚ್ಚಿನ ಒಲವು ವ್ಯಕ್ತವಾಗಿದ್ದಕ್ಕೆ ಟಿಕೆಟ್‌ ಸಿಕ್ಕಿದೆ. ಯುವಕರಿಗೆ, ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂಬುದು ಬಿಜೆಪಿ ಆಶಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಧನೆ, ಯಡಿಯೂರಪ್ಪ ಬೆಂಬಲಿಸಬೇಕು ಎಂಬ ತುಡಿತ ನನಗೆ ವರವಾಗಲಿದೆ’ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಗೋಪಾಲ ಕಾರಜೋಳರಿದ್ದಾರೆ.

ಎಡಗೈ–ಬಲಗೈ

ದಲಿತ ಸಮುದಾಯದೊಳಗಿನ ಎಡಗೈ–ಬಲಗೈ ಪ್ರಾಬಲ್ಯದ ಹಣಾಹಣಿ ಕ್ಷೇತ್ರದಲ್ಲಿ ಗುಪ್ತಗಾಮಿನಿಯಾಗಿದೆ. ಎಡಗೈ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ, ತನ್ನ ಸಂಪ್ರದಾಯಬದ್ಧ ಮತದಾರರಾದ ಬಲಗೈ ಒಲವು ಗಳಿಸಿಕೊಂಡು ಕ್ಷೇತ್ರ ‘ಕೈ’ ವಶಪಡಿಸಿಕೊಳ್ಳುವ ಹುನ್ನಾರ ಕಾಂಗ್ರೆಸ್‌ನದ್ದಾಗಿದೆ.

ಎಡಗೈ ಸಮುದಾಯದ ನಾಯಕ ಗೋವಿಂದ ಕಾರಜೋಳ, ಪುತ್ರನನ್ನು ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ತಮ್ಮ ಜತೆಗೆ ಆತನನ್ನು ಗೆಲ್ಲಿಸಿಕೊಳ್ಳುವ ಕಸರತ್ತು ನಡೆಸಲಾರಂಭಿಸಿದ್ದಾರೆ. ‘ಹೊಂದಾಣಿಕೆ’ ರಾಜಕಾರಣ ಇಲ್ಲಿ ಚಿದಂಬರ ರಹಸ್ಯ. ಯಾರೂ ಯಾರ ಜತೆ ‘ಕೈ’ ಜೋಡಿಸಲಿದ್ದಾರೆ ಎಂಬದು ನಿಗೂಢ ನಡೆಯಾಗಿದೆ. ಬಸನಗೌಡ ಪಾಟೀಲ ಯತ್ನಾಳ, ಎಂ.ಬಿ.ಪಾಟೀಲ ನಡೆಯೂ ಪ್ರಮುಖ ಪಾತ್ರ ವಹಿಸಲಿದೆ. ಕೇಂದ್ರ ಸಚಿವ ರಮೇಶ ಜಿಗಜಿಣಗಿ ಚಾಣಾಕ್ಷ್ಯ ನಡೆ ಪರಿಣಾಮ ಬೀರಲಿದೆ.

ಎಡಗೈ–ಬಲಗೈ ತಿಕ್ಕಾಟದ ನಡುವೆ ಬಂಜಾರ ಸಮಾಜದ ಬೆಂಬಲದೊಂದಿಗೆ ಇನ್ನಿತರರ ಅನುಕಂಪ ಗಿಟ್ಟಿಸಿ, ಬಲವರ್ಧನೆಗೊಂಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ತಂತ್ರಗಾರಿಕೆ ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT