ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಕ್ರೀಡಾಕೂಟಗಳ ಸಂದರ್ಭದಲ್ಲಿ ಪ್ರತಿಭಟಿಸಿ’

ದೈಹಿಕ ಶಿಕ್ಷಣ ಶಿಕ್ಷಕರಿಗೆ ಎಂಎಲ್‌ಸಿ ಅರುಣ ಶಹಾಪುರ ಸಲಹೆ
Last Updated 5 ಫೆಬ್ರುವರಿ 2019, 12:30 IST
ಅಕ್ಷರ ಗಾತ್ರ

ಬೆಳಗಾವಿ: ‘ಶಿಕ್ಷಕರು ಬೇಡಿಕೆ ಈಡೇರಿಕೆಗಾಗಿ ಮೌಲ್ಯಮಾಪನ ಸಂದರ್ಭದಲ್ಲಿ ಪ್ರತಿಭಟಿಸುತ್ತಾರೆ. ಹಾಗೆಯೇ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ಹೋರಾಟಕ್ಕೆ ಮುಂದಾಗಬೇಕು. ಬಿಳಿ ಸಮವಸ್ತ್ರದ ಬದಲಿಗೆ ಕಪ್ಪು ಬಟ್ಟೆ ಧರಿಸಿ ಸರ್ಕಾರದ ಗಮನಸೆಳೆಯಬೇಕು’ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಸಲಹೆ ನೀಡಿದರು.

ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘವು ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮೇಲಾಟಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೀಡಾಕೂಟವೇ ಬೇಡ ಎನ್ನುವ ಅಧಿಕಾರಿಗಳು ಆ ಹುದ್ದೆಯಲ್ಲಿ ಇಲ್ಲದಂತೆ ನೋಡಿಕೊಳ್ಳುವ ಕೆಲಸ ನಾವು ಮಾಡುತ್ತೇವೆ. ಸದನದಲ್ಲಿ ಹೋರಾಡುತ್ತೇವೆ. ಸರ್ಕಾರದ ಮೇಲೆ ಹೊರಗಿನಿಂದ ಒತ್ತಡ ತರುವ ಕೆಲಸವನ್ನು ದೈಹಿಕ ಶಿಕ್ಷಣ ಶಿಕ್ಷಕರು ಮಾಡಬೇಕು. ಸಹಶಿಕ್ಷಕರು (ದೈಹಿಕ ಶಿಕ್ಷಣ) ಎಂದು ಪರಿಗಣಿಸುವಂತಾಗಲು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ಬದಲಾವಣೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಹೋರಾಡಬೇಕು’ ಎಂದರು.

ಆತ್ಮಾವಲೋಕನ ಮಾಡಿಕೊಳ್ಳಬೇಕು:‘ದೈಹಿಕ‌ ಶಿಕ್ಷಣದ ಇತಿಹಾಸ ಗಮನಿಸಿದರೆ, ಸರ್ಕಾರವು ಈ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಲಕ್ಷಿಸಿರುವುದನ್ನು ಕಾಣಬಹುದು. ದೈಹಿಕ ಶಿಕ್ಷಣ ಶಿಕ್ಷಕರು ಸಂಘಟನಾ ಚತುರರು. ಆದರೂ ಬೇಡಿಕೆಗಳು ಈಡೇರುತ್ತಿಲ್ಲವೇಕೆ?ಹೋರಾಟ ನಿರ್ಣಾಯಕ ಹಂತಕ್ಕೆ ಬಂದಾಗ ಏನಾದರೂ ತೊಂದರೆ ಎದುರಾಗುತ್ತಿದೆ. ಇದಕ್ಕೆ ಕಾರಣವೇನು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘₹ 14 ಕೋಟಿ ಕ್ರೀಡಾನಿಧಿಯು ಇಲಾಖೆಯಲ್ಲಿ ಕೊಳೆಯುತ್ತಿದೆ. ಕ್ರೀಡೆ ಕಟ್ಟಬೇಕು ಎಂಬ ಅರಿವು ಬಂದಿಲ್ಲ. ಆದರೆ, ಕ್ರೀಡಾಭವನ ಕಟ್ಟಲು ಮುಂದಾಗುತ್ತಾರೆ. ಮಕ್ಕಳ ಜೇಬಿನಿಂದಲೇ ಹಣ ತೆಗೆದುಕೊಂಡು ಅವರನ್ನು ಕ್ರೀಡೆಗೆ ಕರೆದುಕೊಂಡು ಹೋಗುತ್ತಿರುವುದು ದುರ್ದೈವ. ಬೆಂಗಳೂರಿನ ಕ್ರೀಡಾ ಪ್ರಾಧಿಕಾರಕ್ಕೆ ಪ್ರತಿ ವರ್ಷ ₹ 12 ಕೋಟಿ ಖರ್ಚು ಮಾಡಲಾಗುತ್ತಿದೆ. ಸಂಘ ಸಂಸ್ಥೆಗಳಿಗೆ ಹಣ ಕೊಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಯಾವ್ಯಾವ ಸಂಘ–ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬ ಮಾಹಿತಿ ಕೊಡುವಂತೆ ಭರವಸೆಗಳ ಸಮಿತಿಯಲ್ಲಿ ಕೇಳಿದ್ದೇನೆ. ಈ ಹಣ ನಿಜವಾಗಿಯೂ ಕ್ರೀಡಾಕೂಟ ನಡೆಯುವ ಶಾಲೆಗಳಿಗೆ ತಲುಪಬೇಕು’ ಎಂದರು.

ಮುಖ್ಯಮಂತ್ರಿ ಗಮನಸೆಳೆಯುವೆ:‘ಶಿಕ್ಷಕರಿಗೆ ಕಾಲ್ಪನಿಕ ವೇತನ ಬಡ್ತಿಗೆ ₹ 360 ಕೋಟಿ ಬೇಕಾಗುತ್ತದೆ. ಈ ಕುರಿತು ಮುಖ್ಯಮಂತ್ರಿ ಗಮನಸೆಳೆಯಲಾಗುವುದು. ಸದನದಲ್ಲೂ ದನಿ ಎತ್ತಲಾಗುವುದು. ಈ ಬಜೆಟ್‌ನಲ್ಲಿ ಘೋಷಿಸದಿದ್ದಲ್ಲಿ ಹೋರಾಟ ಮುಂದುವರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಡಿಡಿಪಿಐ ಎ.ಬಿ. ಪುಂಡಲೀಕ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸಗೌಡ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಿ.ಎಸ್. ಬರಗಾಲಿ ಮಾತನಾಡಿದರು. ಲಿಂಗರಾಜ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸಿ. ರಾಮರಾವ್, ಶಿಕ್ಷಕ ಎನ್‌.ಎಫ್‌. ಚಕ್ರಸಾಲಿ ಉಪನ್ಯಾಸ ನೀಡಿದರು.

ಅಥ್ಲೀಟ್‌ ಶೀತಲ್‌ ಕೊಲ್ಲಾಪುರೆ ಅವರನ್ನು ಸತ್ಕರಿಸಲಾಯಿತು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ. ಕಟ್ಟಿಮನಿ, ಸಂಘದ ಅಧ್ಯಕ್ಷ ಬಿ.ಸಿ. ಖೇಮಲಾಪುರೆ, ಕಾರ್ಯಾಧ್ಯಕ್ಷ ಶಂಕರ ಕರೀಕಟ್ಟಿ, ಕಾರ್ಯದರ್ಶಿ ಪಿ.ಡಿ. ಕಾಲವಾಡ, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಜಯಕುಮಾರ ಹೆಬಳಿ, ಉದ್ಯಮಿ ರಾಜೇಂದ್ರ ರಾಮಗೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT