ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈನ್ಯಕ್ಕೆ ಹೆಚ್ಚಿನ ಅಧಿಕಾರ ಕೊಟ್ಟ ಮೋದಿ’

ಬಿಜೆಪಿ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿ
Last Updated 24 ಮಾರ್ಚ್ 2019, 11:47 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದ ರಕ್ಷಣೆಯ ನಿಟ್ಟಿನಲ್ಲಿ ಸೈನಿಕರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಟ್ಟಷ್ಟು ಅಧಿಕಾರವನ್ನು ಹಿಂದಿನ ಸರ್ಕಾರ ನೀಡಿರಲಿಲ್ಲ’ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಇಲ್ಲಿನ ಜೆಎ‌ನ್ಎಂಸಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಬಾಲಕೋಟದಲ್ಲಿ ಅಡಗಿದ್ದ ಉಗ್ರರ ಮೇಲೆ ವಾಯುದಾಳಿ ನಡೆಸಿದ್ದು ಐತಿಹಾಸಿಕ ಘಟನೆಯಾಗಿದೆ. ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಭಾರತೀಯ ಸೈನಿಕರ ಶ್ರಮ ಅನನ್ಯವಾದುದು. ಹಿಂದೆಯೂ ಸೈನ್ಯ ಇತ್ತು. ಆದರೆ, ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿರಲಿಲ್ಲ’ ಎಂದರು.

ಘನತೆ ಎತ್ತಿ ಹಿಡಿದಿದ್ದಾರೆ:‘50 ವರ್ಷಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕನಾಗಿದ್ದೇನೆ. 25 ವರ್ಷದಿಂದ ಬಿಜೆಪಿ ಮೂಲಕ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಮೋದಿ ಅವರಂತಹ ಜನಪ‍ರ ಪ್ರಧಾನಿಯನ್ನು ಕಂಡಿರಲಿಲ್ಲ. ಅವರನ್ನು ವಿರೋಧಿಸುತ್ತಿದ್ದ ದೇಶದವರು ಕೂಡ ಸನ್ಮಾನಿಸಲು ಮುಂದೆ ಬರುತ್ತಿದ್ದಾರೆ. ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಅಷ್ಟರ ಮಟ್ಟಿಗೆ ದೇಶದ ಘನತೆ ಹಾಗೂ ಖ್ಯಾತಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವಲ್ಲಿ ಉತ್ತಮ ಆಡಳಿತವನ್ನು ಮೋದಿ ನೀಡಿದ್ದಾರೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಹಿಂದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಬಹಳಷ್ಟು ಹಗರಣಗಳು‌ ನಡೆದಿದ್ದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೆಟ್ಟ ಹೆಸರು ಬಂದಿತ್ತು. ಅರ್ಥ ವ್ಯವಸ್ಥೆ ಕುಸಿದಿತ್ತು. ಇದರಿಂದ ಜನರು ಬೇಸತ್ತು ಹೋಗಿದ್ದರು. ಹೀಗಾಗಿ, ಮೋದಿ ಪ್ರಧಾನಿಯಾಗಬೇಕೆಂಬ ಕನಸು ಕಂಡಿದ್ದರು’ ಎಂದು ತಿಳಿಸಿದರು.

ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ:‘ನಮ್ಮ ಸರ್ಕಾರ ಭ್ರಷ್ಟಾಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸಿದೆ. ಹಲವು ವರ್ಷಗಳಲ್ಲಿ ಹಾಳಾಗಿರುವುದನ್ನು ಕೆಲವೇ ವರ್ಷಗಳಲ್ಲಿ ಸರಿಪಡಿಸಲಾಗದು. ಆದರೆ, ಈ ನಿಟ್ಟಿನಲ್ಲಿ ಪ‍್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೇನಾಮಿ ಆಸ್ತಿ ವಿರುದ್ಧ ಹಿಂದಿನವರು ಏನೂ ಮಾಡಿರಲಿಲ್ಲ. ಆದರೆ, ಮೋದಿ ಸುಮ್ಮನಿರಲಿಲ್ಲ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ದೇಶದ ಆರ್ಥಿಕ ಮಟ್ಟ ವೇಗವಾಗಿ ವೃದ್ಧಿಸಿದೆ. ದೇಶದಲ್ಲಿ ಈಗ ಭ್ರಷ್ಟಾಚಾರಮುಕ್ತ ಅಭಿವೃದ್ಧಿ ಸಾಧ್ಯವಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಸರ್ಕಾರದಿಂದ ನೀಡುವ ಸಹಾಯಧನ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿದೆ. ಇದಕ್ಕಾಗಿ ಬ್ಯಾಂಕ್ ಖಾತೆ ತೆರೆಸಿದ್ದು ಪೂರಕವಾಗಿದೆ. ಯೋಜನೆಗಳನ್ನು ಘೋಷಿಸಿ ಸುಮ್ಮನಾಗದೇ ಅನುಷ್ಠಾನಕ್ಕೆ ಒತ್ತು ನೀಡಿದ್ದೇವೆ. ಸ್ವತಃ ಪ್ರಧಾನಿಯೇ ಪರಿಶೀಲನೆ ನಡೆಸುತ್ತಿದ್ದರು. 5 ಲಕ್ಷ ಹಳ್ಳಿಗಳು ಈಗ ಬಯಲು ಬಹಿರ್ದೆಸೆಮುಕ್ತವಾಗಿವೆ. ಸೌಭಾಗ್ಯ ಯೋಜನೆಯಿಂದ ಕೋಟ್ಯಂತರ ಮನೆಗಳಿಗೆ ವಿದ್ಯುತ್ ದೊರೆತಿದೆ. ಹಿಂದಿನ ಸರ್ಕಾರಗಳು ಇತ್ತ ಗಮನಹರಿಸಿರಲಿಲ್ಲ’ ಎಂದು ಮಾಹಿತಿ ನೀಡಿದರು.

ಕಾವಲುಗಾರನಂತೆ:‘ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ರಾಷ್ಟ್ರವಾದ ಹಾಗೂ ಮಾವನತಾವಾದದ ಮೇಲೆ ಕಾವಲುಗಾರನಂತೆ ಮೋದಿ ಕೆಲಸ ಮಾಡುತ್ತಿದ್ದಾರೆ. ಆತಂಕವಾದ, ಭಯೋತ್ಪಾದನೆ, ಭ್ರಷ್ಟಾಚಾರದಂತಹ ರೋಗಗಳನ್ನು ಕಿತ್ತೊಗೆಯಲು ಶ್ರಮಿಸುತ್ತಿದ್ದಾರೆ’ ಎಂದರು.

ಅಭ್ಯರ್ಥಿ, ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಅಭಯ ಪಾಟೀಲ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಈರಣ್ಣ ಕಡಾಡಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಇದ್ದರು.

ಮುಖಂಡ ಶ್ರೀನಿವಾಸ ಬೀಸನಕೊಪ್ಪ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT