ವಿಶ್ವವಿದ್ಯಾಲಯದಲ್ಲಿ ದಾಂದಲೆ: ಪೊಲೀಸರ ವಿರುದ್ಧ ಸಂಸದ ಸುರೇಶ ಅಂಗಡಿ ಆಕ್ರೋಶ

7

ವಿಶ್ವವಿದ್ಯಾಲಯದಲ್ಲಿ ದಾಂದಲೆ: ಪೊಲೀಸರ ವಿರುದ್ಧ ಸಂಸದ ಸುರೇಶ ಅಂಗಡಿ ಆಕ್ರೋಶ

Published:
Updated:

ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ದಾಂದಲೆ ಪ್ರಕರಣದಲ್ಲಿ ಶಾಸಕ ಸತೀಶ ಜಾರಕಿಹೊಳಿ ಬೆಂಬಲಿಗರು ಇದ್ದಾರೆ ಎನ್ನಲಾಗುತ್ತಿದೆ. ಇದು ನಿಜವಾದರೆ ಅವರು ತಮ್ಮ ಈ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಸಂಸದ ಸುರೇಶ ಅಂಗಡಿ ಒತ್ತಾಯಿಸಿದರು.

‘ಸೋಮವಾರ ನಡೆದ ದಾಂದಲೆ ಪ್ರಕರಣ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಗೆ ಗೌರವ ತರುವಂಥದ್ದಲ್ಲ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ವಿಷಯದಲ್ಲಿ ಸಂಪೂರ್ಣ ಫಲವಾಗಿದೆ. ಇಂತಹ ಘಟನೆಗಳು ಖಂಡನೀಯ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಘಟನೆಯ ಕುರಿತು ಸಾಕ್ಷಿ, ಆಧಾರಗಳಿದ್ದರೂ ಪೊಲೀಸ್ ಅಧಿಕಾರಿಗಳು ಇದುವರೆಗೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ಪೊಲೀಸ್ ಆಯುಕ್ತರ ವರ್ತನೆ ಹಾಗೂ ಹೇಳಿಕೆ ನೋಡಿದರೆ ಯಾವುದೋ ಭಯದ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಬರುತ್ತಿದೆ. ಈ ರೀತಿ ಕೆಲಸ ಮಾಡುವುದಿದ್ದರೆ ತಕ್ಷಣ ಜಾಗ ಖಾಲಿ ಮಾಡಲಿ’ ಎಂದರು. 

ಕ್ರಮ ಕೈಗೊಳ್ಳಬೇಕು

‘ಪೊಲೀಸರು ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಯಾರದೋ ಒತ್ತಡಕ್ಕೆ ಮಣಿದು ಸುಮ್ಮನಿದ್ದರೆ ನಾನೇ ಮುಖ್ಯಮಂತ್ರಿ ಎದುರು ಧರಣಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಆರ್‌ಸಿಯುನಲ್ಲಿ ನಡೆದ ಘಟನೆ ನೋಡಿದರೆ, ದೇಶದ್ರೋಹಿಗಳನ್ನು ಒಳಗಡೆ ಬಿಡುವ ಪ್ರಯತ್ನದ ಅನುಮಾನ ಬರುತ್ತದೆ. ಈ ವಿ.ವಿಯು ಇನ್ನೊಂದು ಜೆಎನ್‌ಯು ಆಗಬಾರದು. ಪೊಲೀಸರು ಕಾರ್ಯಪ್ರವೃತ್ತರಾಗಿ ಕಿಡಿಗೇಡಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. 

‘ಘಟನೆ ವೇಳೆ ಕುಲಪತಿ ಪ್ರೊ.ಎಸ್‌.ಬಿ. ಹೊಸಮನಿ ಬಹಳ ಸಂಯಮದಿಂದ ನಡೆದುಕೊಂಡಿದ್ದಾರೆ. ಅದು ಮೆಚ್ಚುವಂಥದ್ದು. ಆಗ ಸ್ವಲ್ಪ ದುಡುಕಿದ್ದರೂ ಹೆಚ್ಚಿನ ಅನಾಹುತಗಳಾಗುವ ಸಾಧ್ಯತೆ ಇತ್ತು. ಘಟನೆ ನಂತರ ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಇದು ಅವರ ವೈಫಲ್ಯವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

ನಾನೇ ಕರೆದಿದ್ದೆ

‘ರಾಷ್ಟ್ರೀಯ ಹೆದ್ದಾರಿ ಬಳಿ ಅಂಡರ್‌ಪಾಸ್ ನಿರ್ಮಿಸಿಕೊಡಬೇಕು ಎಂದು ಕುಲಪತಿ ಹಾಗೂ ವಿದ್ಯಾರ್ಥಿಗಳು ಕೋರಿದ್ದರು. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ₹ 25 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿ ಆರಂಭಿಸಲು ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಾನೇ ಸ್ಥಳೀಯ ಶಾಸಕ ಸತೀಶ ಜಾರಕಿಹೊಳಿ ಹಾಗೂ ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಸಂಪರ್ಕಿಸಿ ಅಹ್ವಾನಿಸಲು ಪ್ರಯತ್ನಿಸಿದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಕಾರ್ಯಕ್ರಮಕ್ಕೂ ವಿಶ್ವವಿದ್ಯಾಲಯಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಅನಿಲ ಬೆನಕೆ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !