ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ.ಪಂ. ಸದಸ್ಯ ನಾಗರಾಜ ಅಪಹರಣ ಪ್ರಕರಣ: ಗೆಳೆಯರಿಗಿದೆ, ಪೊಲೀಸರಿಗಿಲ್ಲ ಸಂಪರ್ಕ!

ಕಾಂಗ್ರೆಸ್‌ಗೆ ಫಜೀತಿ ತಂದ ನಾಗರಾಜ ಅಪಹರಣ ಪ್ರಕರಣ
Published : 2 ಸೆಪ್ಟೆಂಬರ್ 2024, 4:25 IST
Last Updated : 2 ಸೆಪ್ಟೆಂಬರ್ 2024, 4:25 IST
ಫಾಲೋ ಮಾಡಿ
Comments

ಚನ್ನಮ್ಮನ ಕಿತ್ತೂರು: ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜ ಅಸುಂಡಿ ಅಪಹರಣ ಪ್ರಕರಣ ಮುಂದೇನು ಆಗುತ್ತದೆಯೋ ಎಂಬ ಚರ್ಚೆಗಳು ಪಟ್ಟಣದಲ್ಲಿ ಸಾಗಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

‘ರೆಸಾರ್ಟ್ ಬಂಧನದಲ್ಲಿ ನಾಗರಾಜ ಅವರನ್ನು ಇರಿಸಲಾಗಿದೆ’ ಎಂದು ಅವರ ಕುಟುಂಬದ ಮೂಲಗಳೇ ತಿಳಿಸುತ್ತಿವೆ. ಈ ಪ್ರಕರಣದಿಂದ ಕಾಂಗ್ರೆಸ್ ಮುಜುಗರದ ಸ್ಥಿತಿ ಎದುರಿಸುವಂತಾಗಿದೆ.

‘ಅಪಹರಣಗೊಂಡಿರುವ ನಾಗರಾಜ ಸಂಪರ್ಕವು ಅವರ ಗೆಳೆಯರಿಗೆ ಸಾಧ್ಯವಾಗುತ್ತಿದೆ. ಆದರೆ, ಪೊಲೀಸರಿಗೆ ಇದು ಸಾಧ್ಯವಾಗುತ್ತಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಗುರುವಾರ ರಾತ್ರಿ ಅಪಹರಣವಾದ ಸುದ್ದಿ ತಿಳಿದ ಕ್ಷಣದಿಂದಲೇ ಆ ಪಕ್ಷದವರಿಂದ ಪ್ರತಿಭಟನೆ ನಡೆಯುತ್ತಿವೆ. ಸೋಮವಾರ ‘ಕಿತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಮನವೊಲಿಸಿ’ ಕರೆದೊಯ್ಯುತ್ತಿದ್ದರು!: 

‘ಇಲ್ಲಿನ ಪಟ್ಟಣ ಪಂಚಾಯಿತಿಗೆ 2016ರಲ್ಲಿ ಮೊದಲ ಬಾರಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿತ್ತು. ಆಗ, ಕಾಂಗ್ರೆಸ್‌ನ ಅಂದಿನ ಸದಸ್ಯ ವಿಠ್ಠಲ ಭಜಂತ್ರಿ ಅವರನ್ನು ‘ಮನವೊಲಿಸಿ’ ಕರೆದುಕೊಂಡು ಹೋಗಲಾಗಿತ್ತು. ಪಕ್ಷೇತರವಾಗಿ ಆಯ್ಕೆಯಾಗಿ ಬಂದಿದ್ದ ಮಹಮ್ಮದ್‌ ಹನೀಫ್ ಸುತಗಟ್ಟಿ ಅವರು ಬಿಜೆಪಿ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಗಾದಿ ಏರಿದ್ದರು.

‘ಒಂದು ಕೋಮಿನ ಮತ ನನಗೆ ಹಾಕುವುದು ಬೇಡ’ ಎಂದು ಬಹಿರಂಗವಾಗಿ ಬೆಂಕಿ ಉಗುಳಿದ ಹಾಗೆ ಮಾತನಾಡುತ್ತಿದ್ದ ಅಂದಿನ ಸಂಸದ ಅನಂತಕುಮಾರ ಹೆಗಡೆ, ಸ್ವತಃ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ದೌಡಾಯಿಸಿ ಬಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಪಕ್ಷೇತರ ಅಭ್ಯರ್ಥಿ ಮಹಮ್ಮದ್‌ ಹನೀಫ್ ಸುತಗಟ್ಟಿ ಅವರಿಗೆ ಮತ ಹಾಕಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು’ ಎನ್ನುತ್ತಾರೆ ಕೆಲ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು.

‘2020ರಲ್ಲಿ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲೂ ಕೆಲವು ಕಾಂಗ್ರೆಸ್ ಸದಸ್ಯರನ್ನು ಬಿಜೆಪಿ ತಮ್ಮ ಕಡೆಗೆ ಸೆಳೆದುಕೊಂಡು ಅಧಿಕಾರ ಹಿಡಿದಿತ್ತು’ ಅವರು ಹೇಳುತ್ತಾರೆ.

ಮತ್ತೆ ಪುನರಾವರ್ತನೆ: 

ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ ಚುನಾವಣೆ ಮುಗಿದು ಎರಡು ವರ್ಷ,  ಎಂಟು ತಿಂಗಳು ಭರ್ತಿಯಾಗಿವೆ. 2021ರಂದು ಡಿಸೆಂಬರ್ ಅಂತ್ಯದಲ್ಲಿ 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 9, ಕಾಂಗ್ರೆಸ್ 5 ಮತ್ತು ಪಕ್ಷೇತರ ಅಭ್ಯರ್ಥಿಗಳು 4 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ. ಇವರಲ್ಲಿ ನಾಲ್ವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಆಗಿದ್ದರೆ ಶಾಸಕ, ಸಂಸದ ಸೇರಿ ಬಿಜೆಪಿ ಬಲ 11 ಆಗುತ್ತಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಹೀಗಾಗಿ ವಿಧಾನಸಭೆ ಮತ್ತು ಲೋಕಸಭೆ ಸದಸ್ಯರ ಮತಗಳನ್ನು ಪರಿಗಣಿಸಿದರೆ ಎರಡೂ ಪಕ್ಷಗಳ ಸದಸ್ಯರ ಸಂಖ್ಯೆ ತಲಾ 10 ಆಗಿದೆ. ‘ಇದೇ ಬಿಜೆಪಿ ಸದಸ್ಯರೊಬ್ಬರ ಅಪಹರಣಕ್ಕೆ ಕಾರಣವಾಗಿದೆ’ ಎಂದು ಬಿಜೆಪಿ ದೂರುತ್ತಿದೆ.

‘ಅಪಹರಣಗೊಂಡಿರುವ ನಾಗರಾಜ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ. ಅಕ್ಷರಶಃ ಅವರನ್ನು ಹೊತ್ತುಕೊಂಡು ಹೋಗಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ನಾಗರಾಜ ತಂದೆ ಬಸವರಾಜ ಅಸುಂಡಿ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟು ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಅಧ್ಯಕ್ಷ ಗದ್ದುಗೆಗೆ ಹೆಚ್ಚಿನ ಪೈಪೋಟಿ ನಡೆಯಲು ಇದೂ ಕೂಡಾ ಕಾರಣವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT