ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಈಗ ವಚನ ಭ್ರಷ್ಟರಾಗಿದ್ದಾರೆ: ಎಚ್‌.ಕೆ.ಪಾಟೀಲ ಆರೋಪ

Published 14 ಏಪ್ರಿಲ್ 2024, 15:51 IST
Last Updated 14 ಏಪ್ರಿಲ್ 2024, 15:51 IST
ಅಕ್ಷರ ಗಾತ್ರ

ಬೆಳಗಾವಿ: ‘ಹಿಂದಿನ ಚುನಾವಣೆಗಳಲ್ಲಿ ಸಾರ್ವಜನಿಕ ವೇದಿಕೆ ಸಿಕ್ಕರೆ, ಬಿಜೆಪಿಯವರು ಮಹದಾಯಿ ಬಗ್ಗೆ ಮಾತನಾಡಿ ಯೋಜನೆಗೆ ಎಲ್ಲ ರೀತಿಯ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಗೋವಾ ಹಾಗೂ ಕರ್ನಾಟಕ ಮುಖ್ಯಮಂತ್ರಿ ಕರೆಯಿಸಿ, ಸಮಸ್ಯೆ ಬಗೆಹರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈಗ ಅವರು ವಚನಭ್ರಷ್ಟರಾಗಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ ಆರೋಪಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ಯೋಜನೆಗೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಗೋವಾ ಸರ್ಕಾರದಿಂದ ಪತ್ರ ಬಂದಿತ್ತು. ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅದನ್ನು ಪ್ರದರ್ಶಿಸಿದ್ದರು. ಜತೆಗೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಸಿಡಬ್ಲ್ಯುಸಿಯವರಿಂದ ಅನುಮತಿ ಸಿಕ್ಕಿರುವ ಬಗ್ಗೆ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ, ಕಳಸಾ–ಬಂಡೂರಿ ಯೋಜನೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಲು ಕೇಂದ್ರದ ವನ್ಯಜೀವಿ ಮತ್ತು ಪರಿಸರ ಇಲಾಖೆಯವರು ಮುಂದಾಗಲಿಲ್ಲ’ ಎಂದರು.

‘ಕೇಂದ್ರ ಸಚಿವರು ಹಾಗೂ ರಾಜ್ಯದ ಬಿಜೆಪಿಯ ಸಂಸದರು ಈ ಬಗ್ಗೆ ಧ್ವನಿ ಎತ್ತಲಿಲ್ಲ. ಬಿಜೆಪಿಯವರು ಮಹದಾಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಮಹದಾಯಿ ವಿಚಾರವಾಗಿ ಗೌಪ್ಯವಾಗಿ ಇರಿಸಿರುವ ಮಹತ್ವದ ವಿಷಯಗಳ ಬಗ್ಗೆ ಪ್ರಲ್ಹಾದ ಜೋಶಿ, ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಎಂದು ಸ್ಪಷ್ಟಪಡಿಸಬೇಕು’ ಎಂದು ಸವಾಲು ಹಾಕಿದರು.
‘ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಗೋವಾ ನಿರ್ಮಿಸಿದ ತಡೆಗೋಡೆ ತೆರವುಗೊಳಿಸಲೂ ಕೇಂದ್ರದ ವನ್ಯಜೀವಿ ಹಾಗೂ ಪರಸರ ಇಲಾಖೆ ಅನುಮತಿ ಬೇಕಾಗುತ್ತದೆ. ಅನುಮತಿ ಇರದೆ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ’ ಎಂದರು.

‘ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ, ‘ಇಂಥ ಹೇಳಿಕೆ ನೀಡಿದ ಕುಮಾರಸ್ವಾಮಿ ಮನುವಾದಿಗಿಂತಲೂ ನೀಚರು. ಮನೆ ಯಜಮಾನಿ ಕೈಯಲ್ಲಿ ಹಣವಿದ್ದರೆ ಹಾಳಾಗುತ್ತಾಳಾ? ಮಹಿಳೆ ಕೈಯಲ್ಲಿ ಹಣ ಸಿಕ್ಕರೆ, ಕುಟುಂಬಕ್ಕೆ ಆಸ್ತಿ ಸಿಕ್ಕಂತೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಮುಖಂಡ ಸಂಜಯ ಪಾಟೀಲ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಮಾತನಾಡಿದ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಬಿಜೆಪಿಯವರು ಹತಾಶರಾಗಿದ್ದಾರೆ. ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ’ ಎಂದರು.

‘ದೇಶದಲ್ಲಿ ಸತ್ಯ ಮರೆಮಾಚಲು ಹಲವು ಪ್ರತಿಷ್ಠಿತ ವ್ಯಕ್ತಿಗಳು ಯತ್ನಿಸುತ್ತಿದ್ದಾರೆ. ಮಾಧ್ಯಮಗಳ‌ ಸಂಪೂರ್ಣ ಹಿಡಿತವನ್ನು ಬಿಜೆಪಿ ಮತ್ತು ಮೋದಿ ಹೊಂದಿದ್ದಾರೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿರುವ 12 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT