ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹೊಸ ವರ್ಷಕ್ಕೆ ಭರವಸೆಯ ಸ್ವಾಗತ

ಹಳೆಯ ಕಹಿ ನೆನಪುಗಳಿಗೆ ಅಗ್ನಸ್ಪರ್ಶ, ಸಿಹಿ ಘಳಿಗೆಗಳಿಗೆ ಬಣ್ಣದ ಲೇ‍ಪ
Last Updated 1 ಜನವರಿ 2023, 7:14 IST
ಅಕ್ಷರ ಗಾತ್ರ

ಬೆಳಗಾವಿ: ಬಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ 2022ನೇ ವರ್ಷದ ವಿದಾಯ ಹಾಗೂ 2023ನೇ ವರ್ಷದ ಸ್ವಾಗತ ಸಮಾರಂಭಗಳು ಭರ್ಜರಿಯಾಗಿ ನಡೆದವು. ತಡರಾತ್ರಿಯವರೆಗೂ ಯುವಕ, ಯುವತಿಯರು, ವಯಸ್ಕರು, ಹಿರಿಯರು ಕೂಡ ಸಂಭ್ರಮಾಚರಣೆಯಲ್ಲಿ ಮಿಂದೆದ್ದರು.

ಹಲವು ಕಡೆಗಳಲ್ಲಿ ಹಳೆಯ ಕಹಿ ನೆನಪುಗಳಿಗೆ ‘ಒಲ್ಡ್‌ಮ್ಯಾನ್‌’ ಹೆಸರಲ್ಲಿ ಪ್ರತಿಮೆ ಮಾಡಿ ಅಗ್ನಿಸ್ಪರ್ಶ ಮಾಡಲಾಯಿತು.‍ ಸಿಹಿ ನೆನಪುಗಳಿಗೆ ಬಣ್ಣ ಬಳಿದು– ಭರವಸೆಯ ದಿನಗಳನ್ನು ಜನ ಬರಮಾಡಿಕೊಂಡರು.

ಬಹುತೇಕ ಗಲ್ಲಿಗಳಲ್ಲಿ, ಕಲ್ಯಾಣ ಮಂಟಪ, ಮೈದಾನ, ಉದ್ಯಾನಗಳಲ್ಲಿಯೂ ಹಾಡು– ಕುಣಿತದ ವೈಭವ ಮನೆ ಮಾಡಿತು. ಇಳಿಸಂಜೆಗೆ ಸೇರಿದ ಯುವಕ– ಯುವತಿಯರು 2022ರ ಕೊನೆಯ ಕಿರಣಗಳಿಗೆ ‘ಗುಡ್‌ಬೈ’ ಹೇಳಿದರು.

ಹೊಸ ವರ್ಷಾಚರಣೆಗಾಗಿ ಶನಿವಾರ ಮಧ್ಯಾಹ್ನದಿಂದಲೇ ಸಿದ್ಧತೆಗಳು ಆರಂಭಗೊಂಡಿದ್ದವು. ಬೇಕರಿ, ಹೋಟೆಲ್‌ಗಳು ದಿನವಿಡೀ ಕಾರ್ಯನಿರ್ವಹಿಸಿದವು. ಕೇಕ್ ಹಾಗೂ ಸಿಹಿ ಪದಾರ್ಥಗಳನ್ನು ಬೇಕರಿ, ಹೋಟೆಲ್ ಹೊರಭಾಗದಲ್ಲಿ ಶಾಮಿಯಾನ ಹಾಕಿ ವಿಶೇಷವಾಗಿ ಸಿಂಗರಿಸಿ ಇಡಲಾಗಿತ್ತು. ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಕೇಕ್‌ ಹಾಗೂ ಕರಿದ ತಿನಿಸುಗಳನ್ನು ಖರೀದಿಸಲು ಜನ ಮುಗಿಬಿದ್ದರು. ಮದ್ಯಪ್ರಿಯರಂತೂ ಅಂಗಡಿಗಳ ಮುಂದೆ ಗುಂಪಾಗಿ ನಿಂತಿದ್ದು ಕಂಡುಬಂತು.

ಅಪಾರ್ಟ್‌ಮೆಂಟುಗಳಲ್ಲಿ ಕುಟುಂಬದವರು ಒಂದಾಗಿ ಕೇಕ್‌ ಕತ್ತರಿಸಿ, ಬಲೂನ್‌ ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟವು. ಕನ್ನಡ, ಹಿಂದಿ, ಇಂಗ್ಲಿಷ್‌ ಚಲನಚಿತ್ರದ ಹಾಡುಗಳನ್ನು ಹಾಕಿಕೊಂಡು ಕುಣಿದು ಸಂಭ್ರಮಿಸಿದರು.

ಮಧ್ಯರಾತ್ರಿ ಸರಿಯಾಗಿ 12 ಗಂಟೆಯಾಗುತ್ತಿದ್ದಂತೆಯೇ ಎಲ್ಲರೂ ಚಪ್ಪಾಳೆ ತಟ್ಟಿ, ಹೋಯ್‌ ಎಂದು ಕೂಗಿ ಹೊಸ ವರ್ಷಕ್ಕೆ ಸ್ವಾಗತ ಹೇಳಿದರು. ಪರಸ್ಪರ ಶುಭಾಶಯ ಕೋರಿದರು. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್ ಆ್ಯಪ್, ಇನ್‌ಸ್ಟಾ ಗ್ರಾಮ್‌ಗಳಲ್ಲೂ ಶುಭಾಶಯದ ಹೊಳೆಯೇ ಹರಿದಾಡಿತು.

ನಗರದ ಹೋಟೆಲ್‌ಗಳಾದ ಯುಕೆ27, ಸಂಕಮ್, ಮೇರಿಯಟ್‌, ಇನ್ಸೊಮಿಯಾ, ಐರಿಷ್, ಬೆಲ್ಗಂ ಕ್ಲಬ್‌ ಮುಂತಾದ ರೆಸ್ಟಾರೆಂಟ್‌ಗಳಲ್ಲಿಯೂ ಡಿಜೆ ಸೌಂಡ್‌ ಸಿಸ್ಟಂ ಸಮೇತ ಸಂಗೀತ ರಸಸಂಜೆ ಏರ್ಪಡಿಸಲಾಯಿತು.

ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ‘ಕೊರೊನಾ’ ವೈರಾಣು ಮಾದರಿಯ 28 ಅಡಿ ಎತ್ತರದ ಪ್ರತಿಮೆ ಮಾಡಿ, ಬೆಂಕಿ ಹಚ್ಚಿದ್ದು ಗಮನ ಸೆಳೆಯಿತು.

*

ಅಣೆಕಟ್ಟೆ, ಜಲಪಾತಗಳಲ್ಲಿ ಪೊಲೀಸ್‌ ಭದ್ರತೆ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್‌ ಇಲಾಖೆ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ತಿಳಿಸಿದರು.

ನಗರದ ಮುಖ್ಯರಸ್ತೆಗಳು, ಪ್ರವಾಸಿ ತಾಣಗಳು, ನಿಸರ್ಗ ತಾಣಗಳಲ್ಲಿ ಪೊಲೀಸ್‌ ಭದ್ರತೆ ಏರ್ಪಡಿಸಲಾಯಿತು. ವಾಹನ ದಟ್ಟಣೆ ನಿಯಂತ್ರಣ ಹಾಗೂ ಮದ್ಯ ಕುಡಿದು ವಾಹನ ಚಲಾಯಿಸುವವರ ಮೇಲೆ ಕಣ್ಣಿಡಲಾಯಿತು.

ಹಿಡಕಲ್ ಡ್ಯಾಮ್, ಮಾರ್ಕಂಡೇಯ ಅಣೆಕಟ್ಟೆ ಮತ್ತು ನವಿಲತೀರ್ಥ ಅಣೆಕಟ್ಟು, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ಚೀಕಲೆ ಜಲಪಾತ, ಚಿಗಳೆ ಜಲಪಾತ, ಬಟವಾಡ ಜಲಪಾತ, ತಳೇವಾಡಿ, ವಜ್ರ ಜಲಪಾತಗಳ ಸುತ್ತಮುತ್ತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT