ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟವರು’

Last Updated 2 ನವೆಂಬರ್ 2021, 11:29 IST
ಅಕ್ಷರ ಗಾತ್ರ

ಬೆಳಗಾವಿ: ‘ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ಮತ್ತು ವಿಶ್ವಾಸರ್ಹತೆ ತಂದುಕೊಟ್ಟವರಲ್ಲಿ ಪ್ರಗತಿಪರ ಸಾಹಿತಿ, ಜಾನಪದ ತಜ್ಞ ಪ್ರೊ.ಜ್ಯೋತಿ ಹೊಸೂರ ಅವರು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ’ ಎಂದು ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ ಅಭಿಪ್ರಾಯಪಟ್ಟರು.

ಇಲ್ಲಿನ ಕಣಬರ್ಗಿಯಲ್ಲಿರುವ ಸಂಸ್ಥೆಯ ಸಮತಾ ಶಾಲೆಯಲ್ಲಿ ಮಂಗಳವಾರ ನಡೆದ ‘ಪ್ರೊ.ಜ್ಯೋತಿ ಹೊಸೂರ ಅವರಿಗೆ ಭಾವ-ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅವರು ಜಾನಪದ ಗಾದೆ, ಒಡಪು, ಗ್ರಾಮದೇವತೆಗಳ ಕುರಿತು ಅಪಾರ ಸಂಶೋಧನೆ ಮಾಡಿದ್ದರು. ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ತಮ್ಮ ‘ಕಾಲಗತಿ’ ಪ್ರಕಾಶನದ ಮೂಲಕ ಶಂಬಾ ಜೋಶಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಕನಕದಾಸ, ವಚನ ಸಾಹಿತ್ಯ ಕುರಿತು ಅಧಿಕೃತ ಮಾಹಿತಿ ಒಳಗೊಂಡ ಮಹತ್ವದ ಕೃತಿಗಳನ್ನು ಪ್ರಕಟಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಬಹಳಷ್ಟು ಪಾಂಡಿತ್ಯ ಹೊಂದಿದ್ದರೂ ಸರಳತೆಗೆ ಹೆಸರಾಗಿದ್ದರು’ ಎಂದು ಸ್ಮರಿಸಿದರು.

‘ಬಿ.ಎ. ಸನದಿ ಪ್ರತಿಷ್ಠಾನಾದ ಅಧ್ಯಕ್ಷರಾಗಿ ಸಾಹಿತ್ಯ, ಸಾಂಸ್ಕೃತಿಕ ವಿಭಾಗದ ಕಡೆಗೆ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಸ್ವಜನ ಪಕ್ಷಪಾತ ದ್ವೇಷಿಯಾಗಿದ್ದ ಅವರು ಆಧಾರವಿಲ್ಲದೆ ಯಾವುದೇ ವಿಷಯದ ಕುರಿತು ಮಾತಾಡುತ್ತಿರಲಿಲ್ಲ. ಖಂಡಿತವಾದಿಯಾಗಿದ್ದರು. ನನ್ನಂತಹ ಅನೇಕರಿಗೆ ಮಾರ್ಗದರ್ಶಿಯಾಗಿದ್ದರು. ಮೂಢ ನಂಬಿಕೆ, ಅಂಧಶ್ರದ್ಧೆಗಳ ತೀವ್ರ ವಿರೋಧಿಯಾಗಿದ್ದ ಅವರು ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬಾರದು ಎನ್ನುತ್ತಿದ್ದರು. ವೈಜ್ಞಾನಿಕ ಮನೋಭಾವದ ಪ್ರಗತಿಶೀಲ ಚಿಂತಕರಾಗಿದ್ದರು’ ಎಂದರು.

ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ಶಿಕ್ಷಕರಾದ ಮಲಿಕಜಾನ ಗದಗಿನ, ಅರುಣಾ ಪಾಟೀಲ, ಶಾಂತಾ ಮೋದಿ, ಪೂಜಾ ಪಾಟೀಲ, ತೇಜಸ್ವಿನಿ ನಾಯ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT