ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ ಶುಶ್ರೂಷಕರ ವಿರುದ್ಧ ಕ್ರಮಕ್ಕೆ ಅಸಮಾಧಾನ

Last Updated 1 ಜೂನ್ 2021, 15:08 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ರೋಗಿಗಳ ನಿರ್ವಹಣೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಕೆಲಸದಿಂದ ಬಿಡುಗಡೆಗೊಳಿಸಿರುವ ಜಿಲ್ಲಾಸ್ಪತ್ರೆಯ ಸರ್ಜನ್ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಶುಶ್ರೂಷಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಜನ್ ಡಾ.ಹುಸೇನ್‌ಸಾಬ್ ಖಾಜಿ ಅವರು ತಮ್ಮ ನಿವೃತ್ತಿಯ ಕೊನೆಯ ದಿನ ಉದ್ದೇಶಪೂರ್ವಕವಾಗಿಯೇ ನಮ್ಮಲ್ಲಿ ಕೆಲವರನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ತಕ್ಷಣ ಆದೇಶ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ಶುಶ್ರೂಷಾಧಿಕಾರಿಗಳು ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಮೇ 28ರಂದು ರಾತ್ರಿ ಬಿಮ್ಸ್ ಆಸ್ಪತ್ರೆಯಲ್ಲಿ ಐವರು ಕೋವಿಡ್‌ನಿಂದ ಮೃತಪಟ್ಟಿದ್ದರು. ಅದರಲ್ಲಿ ಎರಡು ಶವಗಳನ್ನು ಶವಾಗಾರಕ್ಕೆ ಕಳುಹಿಸಲಾಗಿತ್ತು. ಆದರೆ, ವೈದ್ಯರು ಪರೀಕ್ಷೆ ಮಾಡದಿರುವುದು ಮತ್ತು ಆಂಬುಲೆನ್ಸ್‌ ಇಲ್ಲದಿರುವುದು ಹಾಗೂ ಇನ್ನಿತರರ ಕಾರಣಗಳಿಂದ ಮೂರು ಶವಗಳು ಆಸ್ಪತ್ರೆಯಲ್ಲಿದ್ದವು. ಮೇ 29ರಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಮ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಶವಗಳಿದ್ದವು. ಈ ಹಿನ್ನೆಲೆಯಲ್ಲಿ ಶುಶ್ರೂಷಾಧಿಕಾರಿಗಳಿಗೆ ಬಿಮ್ಸ್ ಸರ್ಜನ್ ನೋಟಿಸ್‌ ನೀಡಿದ್ದರು. ಮೇ 31ರಂದು ಯಾವುದೇ ಕಾರಣ ಕೇಳದೆ ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ. ಆದರೆ, ಬಿಮ್ಸ್ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಕೊರೊನಾ ಸಂಕಷ್ಟದ ಸಮಯದಲ್ಲಿ ನಿತ್ಯ 16 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಬಿಮ್ಸ್‌ನ ಹಿರಿಯ ಅಧಿಕಾರಿಗಳು ಮಾಡಿದ ತಪ್ಪಿಗೆ ನಮ್ಮನ್ನು ಬಲಿಪಶು ಮಾಡಿದ್ದಾರೆ. ಸರ್ಜನ್ ಡಾ.ಹುಸೇನ್‌ಸಾಬ್ ಖಾಜಿ ನಿವೃತ್ತಿ ಹೊಂದಿದ್ದಾರೆ. ಮಂಗಳವಾರ ನಿಯೋಜನೆಗೊಂಡಿರುವ ಸರ್ಜನ್ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಶುಶ್ರೂಷಾಧಿಕಾರಿಗಳು ಆರೋ‍‍ಪಿಸಿದರು.

‘ಕಳೆದ ಹತ್ತು ತಿಂಗಳುಗಳಿಂದ ಬಿಮ್ಸ್‌ನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಆಸ್ಪತ್ರೆಯಲ್ಲಿ ರೋಗಿಗಳು ಮೃತರಾದ ಅರ್ಧ ಗಂಟೆಯಲ್ಲಿ ವೈದ್ಯರು ಬಂದಿರುವ ಉದಾಹರಣೆಗಳು ಇಲ್ಲ. ವೈದ್ಯರು ಬಂದು ಹೇಳುವವರೆಗೆ ನಾವ್ಯಾರೂ ಶವ ರವಾನೆ ಮಾಡಲು ಬರುವುದಿಲ್ಲ. ಇದೀಗ ವೈದ್ಯರ ತಪ್ಪುಗಳನ್ನು ಮುಚ್ಚಿ ಹಾಕಲು ನಮ್ಮನ್ನು ಕೆಲಸದಿಂದ ನಮ್ಮನ್ನು ಬಿಡುಗಡೆಗೊಳಿಸಿದ್ದಾರೆ’ ಎಂದು ಸೂಪರಿಂಟೆಂಡೆಂಟ್‌ ಕೆ. ಸೂರ್ಯವಂಶಿ, ಹಿರಿಯ ಶುಶ್ರೂಷಧಿಕಾರಿಗಳಾದ ವಿದ್ಯಾವತಿ ಪ್ರಧಾನ, ಸುಜಾತಾ ಬತ್ತುಲಾ ಹಾಗೂ ಶುಶ್ರೂಷಧಿಕಾರಿಗಳಾದ ಜಯಲಕ್ಷ್ಮಿ ಪತ್ತಾರ, ಶೈಲಜಾ ಕುಲಕರ್ಣಿ, ಸುಶೀಲಾ ಶೆಟ್ಟಿ, ಸವಿತಾ ತಮ್ಮಣ್ಣಾಚೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT