ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ದಿನವೂ ರಸ್ತೆಗಿಳಿಯದ ಸರ್ಕಾರಿ ಬಸ್

ಮುಷ್ಕರ ಮುಂದುವರಿಸಿದ ಸಾರಿಗೆ ನೌಕರರು
Last Updated 12 ಡಿಸೆಂಬರ್ 2020, 11:18 IST
ಅಕ್ಷರ ಗಾತ್ರ

ಬೆಳಗಾವಿ: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ) ನೌಕರರು 2ನೇ ದಿನವಾದ ಶನಿವಾರವೂ ಮುಷ್ಕರ ಮುಂದುವರಿಸಿದರು. ಇದರಿಂದ ಪ್ರಯಾಣಿಕರ ಪರದಾಟವೂ ಮುಂದುವರಿಯಿತು.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ.

ನಗರದ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಮುಷ್ಕರ ನಡೆಸಿದ ಅವರಿಗೆ ರಾಜ್ಯ ರೈತ ಸಂಘದವರು ಹಾಗೂ ಕನ್ನಡ ಪರ ಹೋರಾಟಗಾರರು ಬೆಂಬಲ ನೀಡಿದರು. ಧರಣಿಯಲ್ಲಿ ಅವರೊಂದಿಗೆ ಪಾಲ್ಗೊಂಡರು. ಅಲ್ಲಿಯೇ ಉಪಾಹಾರ, ಅಡುಗೆ ಸಿದ್ಧಪಡಿಸಿ ಸೇವಿಸಿದ ನೌಕರರು ಸರ್ಕಾರ ತಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪಾದರಕ್ಷೆಗಳನ್ನು ತಲೆ ಮೇಲಿಟ್ಟುಕೊಂಡು:

ಕೆಲವು ನೌಕರರು ತಮ್ಮ ಪಾದರಕ್ಷೆಗಳನ್ನು ತಲೆ ಮೇಲಿಟ್ಟುಕೊಂಡು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ, ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಭಾಗವಹಿಸಿ ಬೆಂಬಲ ಸೂಚಿಸಿದರು. ‘ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಹಲವು ವರ್ಷಗಳಿಂದಲೂ ಹಕ್ಕೊತ್ತಾಯ ಮಂಡಿಸುತ್ತಲೇ ಇದ್ದಾರೆ. ಅವುಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ, ಮುಷ್ಕರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ಮುಷ್ಕರದಲ್ಲಿ ಪಾಲ್ಗೊಂಡಿದ್ದ ಚಾಲಕ ಸಾವು

ಶುಕ್ರವಾರ ನಡೆದ ಮುಷ್ಕರದಲ್ಲಿ ಪಾಲ್ಗೊಂಡು ಮನೆಗೆ ತೆರಳಿದ್ದ ಬಸ್ ಚಾಲಕ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ವಡಗಾವಿಯ ನಿವಾಸಿ ದತ್ತ ಮಂಡೋಳ್ಕರ (58) ಮೃತರು. ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗ ವೇಳೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ವಿಶ್ರಾಂತಿಗಾಗಿ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಇಲ್ಲಿನ 2ನೇ ಘಟಕದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ನಗರ ಸಾರಿಗೆ ವಿಭಾಗದಲ್ಲಿ ಇದ್ದರು. ಅವರಿಗೆ ನೌಕರರು ಮುಷ್ಕರದ ವೇಳೆ ಶ್ರದ್ಧಾಂಜಲಿ ಸಲ್ಲಿಸಿದರು.

ತುರ್ತು ಕೆಲಸಗಳಿಗೆ ತೆರಳಲು ಪರದಾಟ

ಸರ್ಕಾರಿ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿರುವುದರಿಂದ, ಹೆಚ್ಚಿನ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರಲಿಲ್ಲ. ಆದರೆ, ತುರ್ತು ಕೆಲಸಗಳಿಗೆ ಪ್ರಯಾಣ ಮಾಡಲೇಬೇಕಾದವರು ದುಬಾರಿಯಾದರೂ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.

ಇಲ್ಲಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬದಿಯಲ್ಲಿ ನಿಲ್ಲುತ್ತಿದ್ದ ಅವರು, ಆ ಮಾರ್ಗದಲ್ಲಿ ಸಾಗುವ ಟ್ರಕ್, ಖಾಸಗಿ ಬಸ್ ಮೊದಲಾದ ವಾಹನಗಳ ಡ್ರಾಪ್ ಕೇಳುತ್ತಿದ್ದರು. ಈ ಅವಕಾಶ ಬಳಸಿಕೊಳ್ಳುತ್ತಿರುವ ಖಾಸಗಿ ವಾಹನಗಳವರು ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಹಣ ಪಡೆದು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ನಗರದಲ್ಲಷ್ಟೇ ಓಡಾಡುತ್ತಿದ್ದ ಟಂಟಂಗಳು, ಆಟೊರಿಕ್ಷಾ ಮೊದಲಾದವು ತಾಲ್ಲೂಕಿನ ವಿವಿಧೆಡೆಗೂ ಸಂಚರಿಸಿದವು. ಸಂಕೇಶ್ವರದವರೆಗೂ ಹೋಗುತ್ತಿದ್ದವು. ಸಂಕೇಶ್ವರಕ್ಕೆ ಹೋಗಲು ಒಬ್ಬರಿಗೆ ₹ 200 ಪಡೆಯುತ್ತಿದ್ದುದು ಕಂಡುಬಂತು. ತುರ್ತು ಕೆಲಸಗಳಿದ್ದವರು ಅನಿವಾರ್ಯವಾಗಿ ಈ ವಾಹನಗಳ ಮೊರೆ ಹೋಗಬೇಕಾಯಿತು. ಯಾವುದಾದರೂ ವಾಹನ ಬರುತ್ತಿದ್ದಂತೆಯೇ, ಮುಗಿಬೀಳುತ್ತಿದ್ದರು. ನಗರ ಸಾರಿಗೆಯೂ ಇರಲಿಲ್ಲವಾದ್ದರಿಂದ, ಆಟೊರಿಕ್ಷಾದವರು ಮೂರು ಪಟ್ಟು ಹೆಚ್ಚಿನ ಹಣ ಪಡೆದು ಪ್ರಯಾಣಿಕರನ್ನು ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT