ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ದಾರಿ ಯಾವುದಯ್ಯ ಹೊಲಕ್ಕೆ?

ಜಮೀನಿಗೆ ಹೋಗುವ ರಸ್ತೆ ದುರಸ್ತಿ ಮಾಡದ ಅಧಿಕಾರಿ, ಜನಪ್ರತಿನಿಧಿಗಳು
ರವಿಕುಮಾರ ಎಂ.ಹುಲಕುಂದ
Published 10 ಜೂನ್ 2024, 5:10 IST
Last Updated 10 ಜೂನ್ 2024, 5:10 IST
ಅಕ್ಷರ ಗಾತ್ರ

ಬೈಲಹೊಂಗಲ: ಮುಂಗಾರು ಬಂತೆಂದರೆ ರೈತರಿಗೆ ‌ಜಮೀನುಗಳಿಗೆ ಹೇಗೆ ಹೋಗಬೇಕು, ಹೇಗೆ ಬಿತ್ತನೆ ಮಾಡಬೇಕು ಎಂಬುದೇ ಚಿಂತೆಯಾಗುತ್ತದೆ. ಈ ಬಾರಿ ಕೂಡ ಬೈಲಹೊಂಗಲ ಮತಕ್ಷೇತ್ರದ ಮಾಟೊಳ್ಳಿ ಗ್ರಾಮದ ರೈತರು ಹೊಲಕ್ಕೆ ಹೋಗುವ ದಾರಿ ಇಲ್ಲದೇ ಪರದಾಡುವಂತಾಗಿದೆ.

ಗ್ರಾಮದ ಅಂಗಡಿ ಅವರ ಹೊಲದಿಂದ ಗುಡಿ ಅವರ ಹೊಲದವರೆಗೆ ಈ ಭಾಗದ ರೈತರ ಹೊಲಗಳಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ರೈತರ ಗೋಳು ಕೇಳುವರು ಯಾರು ಎಂಬತಾಗಿದೆ.

ಮಳೆ ಆಗಿದ್ದರಿಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಿ ಬರುವ ರಸ್ತೆ ಮತ್ತಷ್ಟು ಹದಗೆಟ್ಟಿದೆ. ರೈತರು ಕೃಷಿ ಪರಿಕರ, ದವಸ, ಧಾನ್ಯ, ಫಸಲು, ತರಕಾರಿ ತರಲು ಈ ರಸ್ತೆಯಲ್ಲಿ ಹರಸಾಹಸ ಪಡಬೇಕಾಗಿದೆ. ಈ ರಸ್ತೆಯ ಅವ್ಯವಸ್ಥೆ ಕುರಿತು ಮತ್ತು ರಸ್ತೆಯನ್ನು ಸುಧಾರಿಸಲು ಸಂಬಂಧಿಸಿದ ಶಾಸಕರಿಗೆ, ಅಧಿಕಾರಿಗಳಿಗೆ ಲೋಕಸಭೆ ಚುನಾವಣೆ ಪೂರ್ವದಲ್ಲಿ ಮನವಿ ಪತ್ರದ ಮೂಲಕ ವಿನಂತಿ ಮಾಡಲಾಗಿತ್ತು.‌ ಆದರೆ ಯಾರೊಬ್ಬರು ಗಮನ ಕೊಟ್ಟಿಲ್ಲ ಎಂದು ಮ್ಯಾಟೊಳ್ಳಿ ಹಾಗೂ ಸುತ್ತಮುತ್ತಲಿನ ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಬಿತ್ತನೆಗೆ ಅಡಚಣೆ: ರೈತರು ತಮ್ಮ ಹೊಲಗಳಿಂದ ಫಸಲು ತರುವ ಸಂದರ್ಭದಲ್ಲಿ ಚಕ್ಕಡಿ, ಟ್ರ್ಯಾಕ್ಟರ್, ಎತ್ತುಗಳು ಮಗುಚಿ ಬೀಳುತ್ತಿವೆ. ಸದ್ಯ ಮಳೆ ಆಗಿದ್ದು ಬಿತ್ತನೆಗೆ ಹೋಗಲು ರೈತರು ಹೆದರುವಂತಾಗಿದೆ. ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ್ದರಿಂದ ಬಿತ್ತನೆಗೂ ತೀವ್ರ ಅಡಚಣೆ ಉಂಟಾಗಿದೆ ಎನ್ನುತ್ತಾರೆ ಗ್ರಾಮದ ರೈತ ಮೋಹನ ವಕ್ಕುಂದ.

ದಿನವಿಡೀ ಭೂಮಿಯಲ್ಲಿ ಕಾಯಕ ಮಾಡುವ ಈ ಭಾಗದ ರೈತರು ಜೀವ ಕೈಯಲ್ಲಿ ಹಿಡಿದುಕೊಂಡು, ಆತಂಕದಲ್ಲೇ ಜಮೀನುಗಳಿಗೆ ಹೋಗಿ ಬರುವಂತಾಗಿದೆ. ಯಾರು, ಯಾವಾಗ ಜಮೀನಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಬಿದ್ದು ಗಾಯಗೊಳ್ಳುತ್ತಾರೆ, ತೊಂದರೆಗೆ ಒಳಗಾಗುತ್ತಾರೆ ಎಂದು ಗಾಬರಿಗೊಂಡಿದ್ದಾರೆ.

ವರುಣದೇವ ಕೈ ಹಿಡಿದರೂ ಹೊಲಗಳಿಗೆ ಹೋಗಿ– ಬರಲು ಸರಿಯಾದ ರಸ್ತೆ ಇಲ್ಲ. ಕೆಸರಿನ ರಸ್ತೆಯಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ.‌ ಇದರಿಂದ ಮುಕ್ತಿ ಯಾವಾಗ ಎಂದು ಗ್ರಾಮದ ರೈತರು ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿನಿತ್ಯ ಹಿಡಿಶಾಪ ಹಾಕುವಂತಾಗಿದೆ.‌

ಪ್ರತಿಭಟನೆ ಎಚ್ಚರಿಕೆ: ಸರ್ಕಾರ ಯಾವುದಾದರೂ ಯೋಜನೆಯಲ್ಲಿ ರೈತರ ಜಮೀನಿನ ರಸ್ತೆ‌‌ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಮ್ಯಾಟೊಳ್ಳಿ  ಕ್ರಾಸ್‌ನಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ರೈತರಾದ ಶಂಕರೆಪ್ಪ ಸಂಗೊಳ್ಳಿ, ರುದ್ರಪ್ಪ ಕುಸಲಾಪುರ, ಪುಂಡಲೀಕ ಖಾನಪ್ಪನವರ, ಬಸವರಾಜ ಸಂಗೊಳ್ಳಿ, ರಮೇಶ ಅಂಗಡಿ, ರಾಯಪ್ಪ ದೊಡಮನಿ, ಮಹಾಂತೇಶ ಅಂಗಡಿ, ಈರಪ್ಪ ಪೆಂಟೆದ ಹಾಗೂ ಮ್ಯಾಟೋಳ್ಳಿ, ಹೊಸೂರು, ಮಲ್ಲೂರು ಗ್ರಾಮದ ಹಲವಾರು ರೈತರು ಎಚ್ಚರಿಸಿದ್ದಾರೆ.

ರೈತರ ಪಂಪಸೆಟ್ ಸಮಸ್ಯೆ ಪೈಪ್ ಲೈನ್ ಸಮಸ್ಯೆಯ ಮದ್ಯ ರಸ್ತೆಯೂ ದೊಡ್ಡ ತಲೆನೋವಾಗಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮವಾಗಿಲ್ಲ
- ಶಿವಪ್ಪ ಖಾನಪ್ಪನವರ ರೈತ
ಏಪ್ರಿಲ್ ಒಳಗೆ ಜಮೀನಿನ ರಸ್ತೆ ಮಾಡಿಕೊಡುತ್ತೇವೆ‌ ಎಂದು ಭರವಸೆ ನೀಡಿದ ಅಧಿಕಾರಿಗಳು ಇದೂವರೆಗೆ ಮಾಡಿಲ್ಲ. ಕೃಷಿ ಕಾರ್ಯಗಳಿಗೆ ಇದರಿಂದ ಹಿನ್ನಡೆಯಾಗಿದೆ
- ನಾಗರಾಜ ಬುಡಶೆಟ್ಟಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT