ಬುಧವಾರ, ಜನವರಿ 20, 2021
21 °C

ಕಪ್ಪಾದ ನನ್ನನ್ನು ಬದಲಿಸಿ ಸುಂದರ ಮುಖದವರನ್ನು ಆಯ್ಕೆ ಮಾಡಿಕೊಂಡ ಜನ: ಸಂಜಯ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹತ್ತು ವರ್ಷಗಳವರೆಗೆ ಗ್ರಾಮೀಣ ಕ್ಷೇತ್ರದಲ್ಲಿ ಕಪ್ಪು ಮುಖ ನೋಡಿ ಬೇಸರಗೊಂಡಿದ್ದ ಜನರು ಸುಂದರ ಮುಖದವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿಕೊಂಡು ನನ್ನನ್ನು ಬದಲಾಯಿಸಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ತಾಲ್ಲೂಕಿನ ಸುಳೇಭಾವಿ ಹೊರವಲಯದ ತೋಟದಲ್ಲಿ ಶುಕ್ರವಾರ ವಿವಿಧ ಗ್ರಾಮ ಪಂಚಾಯ್ತಿಗಳ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಹ್ಯಾಂಡಸಮ್ ಅಲ್ಲದ ಮತ್ತು ಸೌಂದರ್ಯವಂತೂ ಇಲ್ಲದ ನನ್ನ ಈ ಕಪ್ಪು ಮುಖ ನೋಡಿ ಜನ ಬದಲಾವಣೆ ಬಯಸಿದರು. ಚುನಾವಣೆ ವೇಳೆ ಕುಕ್ಕರ್,  ಇಸ್ತ್ರಿಪೆಟ್ಟಿಗೆ, ಸೀರೆ ಹಂಚಿದವರು ಗೆದ್ದು ಶಾಸಕರಾದರು. ಮುಂದೆ ಏನೇನು ಹಂಚುತ್ತಾರೋ ನೋಡಬೇಕಾಗಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಟೀಕಿಸಿದರು.

‘ಕಾಂಗ್ರೆಸ್‌ಗೆ ಸಹಾಯ ಮಾಡಿದರೆ ಪಾಕಿಸ್ತಾನಕ್ಕೆ ನೆರವಾದಂತೆಯೇ. ಹೀಗಾಗಿ ಭಾರತೀಯರು ಕಾಂಗ್ರೆಸ್ ಒಪ್ಪುತ್ತಿಲ್ಲ. ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ಅವರನ್ನು ಬಿಜೆಪಿಯಲ್ಲಿ ಗೌರವಿಸುತ್ತೇವೆ. ಭಾರತ ಮಾತೆಗೆ ಜೈ ಎನ್ನುತ್ತೇವೆ. ಆದರೆ, ಕಾಂಗ್ರೆಸ್‌ನವರಿಗೆ ದೇಶದ್ರೋಹಿ ಟಿಪ್ಪು ಸುಲ್ತಾನ್ ಮಾತ್ರ ಬೇಕು. ಹಿಂದೂ ಸ್ವರಾಜ್ಯ ನಿರ್ಮಾಣದ ಬಗ್ಗೆ ಆ ಪಕ್ಷದವರು ಹೇಳುವುದಿಲ್ಲ’ ಎಂದು ದೂರಿದರು.

‘ಬಿಜೆಪಿ ನಮ್ಮ ರಕ್ತದಲ್ಲಿದೆ. ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಕಾಂಗ್ರೆಸ್ ಮುಳುಗುವ ಹಡಗು. ಆ ಪಕ್ಷದ ನಾಯಕ ರಾಹುಲ್ ಗಾಂಧಿ 6 ತಿಂಗಳಿಗೊಮ್ಮೆ ನಾಪತ್ತೆ ಆಗುತ್ತಾರೆ. ಅವರಿಂದಲೇ ಬಿಜೆಪಿಗೆ ಅನುಕೂಲ ಆಗುತ್ತಿದೆ ಎಂಬ ಮಾತನ್ನು ಸ್ವತಃ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ರಾಹುಲ್ ಭಾರತೀಯರೋ, ಇಟಲಿಯವರೋ ಎಂಬ ಗೊಂದಲವಿದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು