ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದ ಕಾರ್ಯವೈಖರಿ;ಜನರಿಗೆ ಸಂತಸವಿಲ್ಲ: ಕೇಂದ್ರದ ಮಾಜಿ ಸಚಿವ ಟೈಟ್ಲರ್

Last Updated 16 ಅಕ್ಟೋಬರ್ 2018, 14:38 IST
ಅಕ್ಷರ ಗಾತ್ರ

ಬೆಳಗಾವಿ: ‘ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ, ಕಾರ್ಯವೈಖರಿ ಬಗ್ಗೆ ಜನರಿಗೆ ಸಂತಸವಿಲ್ಲ. ಇದರ ಪರಿಣಾಮ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೋಚರಿಸಲಿದೆ’ ಎಂದು ಕೇಂದ್ರದ ಮಾಜಿ ಸಚಿವ ಜಗದೀಶ್ ಟೈಟ್ಲರ್‌ ಇಲ್ಲಿ ಹೇಳಿದರು.

ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಮೊದಲಾದವುಗಳ ಬೆಲೆ ಏರಿಕೆಯಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ, ಅವರು ಬದಲಾವಣೆ ಬಯಸಿದ್ದಾರೆ’ ಎಂದು ತಿಳಿಸಿದರು.

‘ಕಪ್ಪು ಹಣವನ್ನು ತರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಗರಿಷ್ಠ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದರು. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಿವೆ. ಸುಧಾರಣೆಗಿಂತಲೂ ತೊಂದರೆಯೇ ಜಾಸ್ತಿಯಾಗಿದೆ. ಜನರು ಹಣವಿಲ್ಲದೇ ಪರದಾಡುತ್ತಿದ್ದಾರೆ. ಕಪ್ಪುಹಣವನ್ನು ಎಲ್ಲಿ ತಂದಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಬೇಕಲ್ಲವೇ’ ಎಂದು ಕೇಳಿದರು.

‘ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್‌ ದೇಶದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದು ಸರಿಯಲ್ಲ. ಈಗಿರುವ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಿರುವುದು ಹಿಂದಿನ ಸರ್ಕಾರಗಳಲ್ಲೇ. ಇದನ್ನು ಈಗ ಅಧಿಕಾರ ನಡೆಸುವವರು ಮರೆಯಬಾರದು. ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡವರು ಯಾರು? ಮೆಟ್ರೋ ರೈಲುಗಳನ್ನು ಪರಿಚಯಿಸಿದವರು ಯಾರು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ. ನಾನೇ ಬಹಳಷ್ಟು ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೆ. ಈಗಿನ ಸಚಿವ ನಿತಿನ್ ಗಡ್ಕರಿ ಕೂಡ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಯುವಕ, ಯುವತಿಯರಿಗೆ ಉದ್ಯೋಗ, ಸುರಕ್ಷಿತ ವಾತಾವರಣ, ಕೈಗಾರಿಕೆ ಬೆಳವಣಿಗೆಗೆ ಪೂರಕವಾದ ಯೋಜನೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಏನನ್ನು ತಿನ್ನಬೇಕು ಹಾಗೂ ಏನನ್ನು ಧರಿಸಬೇಕು ಎನ್ನುವುದನ್ನು ನಿರ್ಧರಿಸುವ ವಾತಾವರಣ ಇರಬೇಕು. ಆಗ ದೇಶದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT