ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ನೀರು ಸಂಸ್ಕರಿಸಿ, ಕೃಷಿಗೆ ಬಳಸಲು ಯೋಜನೆ

ಚಿಕ್ಕೋಡಿ: ಮೊದಲ ಹಂತದ ಯುಜಿಡಿ ಕಾಮಗಾರಿ ಮುಕ್ತಾಯದ ಹಂತದಲ್ಲಿ
ಅಕ್ಷರ ಗಾತ್ರ

ಚಿಕ್ಕೋಡಿ: ಪಟ್ಟಣದಲ್ಲಿನ ಚರಂಡಿ ನೀರು ಸಂಸ್ಕರಿಸಿ, ಕೃಷಿಗೆ ಚಟುವಟಿಕೆಗೆ ಬಳಸಲು ಯೋಜಿಸಲಾಗಿದೆ.

ಇದಕ್ಕೆ ಪೂರಕವಾಗಿ ಇಲ್ಲಿ ಕೈಗೆತ್ತಿಕೊಂಡಿರುವ ಮೊದಲ ಹಂತದ ಒಳಚರಂಡಿ (ಯುಜಿಡಿ) ನಿರ್ಮಾಣ ಕಾಮಗಾರಿ ಶೇ.95ರಷ್ಟು ಮುಕ್ತಾಯಗೊಂಡಿದೆ. ಚರಂಡಿಗಳಲ್ಲಿ ಹರಿಯುವ ನೀರನ್ನು ಒಂದೆಡೆ ಸಂಗ್ರಹಿಸಿ, ಶುದ್ಧೀಕರಿಸಿ ಜಮೀನುಗಳಿಗೆ ಒದಗಿಸಲು ಉದ್ದೇಶಿಸಲಾಗಿದೆ.

ಮುಂದಿನ ಮೂರು ದಶಕಗಳಲ್ಲಿ ಇರಬಹುದಾದ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ, ಪಟ್ಟಣದಲ್ಲಿ 2016ರಲ್ಲಿ ಒಳಚರಂಡಿ ನಿರ್ಮಾಣ ಯೋಜನೆಗೆ ಮಂಜೂರಾತಿ ದೊರೆತಿದೆ. ರಾಜ್ಯ ಸರ್ಕಾರದಿಂದ ₹ 80.24 ಕೋಟಿ ಅಂದಾಜು ವೆಚ್ಚದಲ್ಲಿ ಒಟ್ಟು 94 ಕಿ.ಮೀ.ವರೆಗೆ ಚರಂಡಿಗಳ ನಿರ್ಮಾಣ ಜೊತೆಗೆ ಚೇಂಬರ್‌ಗಳ ನಿರ್ಮಾಣ ಕಾಮಗಾರಿ ಅನುಷ್ಠಾನಗೊಳಬೇಕಾಗಿದೆ. ಆ ಪೈಕಿ ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಈಗಾಗಲೇ (24.5 ಕಿ.ಮೀ.) ಉದ್ದದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. 2ನೇ ಹಂತದಲ್ಲಿ 70 ಕಿ.ಮೀ. ಒಳಚರಂಡಿ ನಿರ್ಮಾಣಕ್ಕೆ ಯೋಜಿಸಲಾಗಿದೆ.

ಘಟಕದಿಂದ:ಮೊದಲಿಗೆ 25 ಕಿ.ಮೀ. ಕಾಮಗಾರಿಗೆ ₹ 42.34 ಕೋಟಿ ಮಂಜೂರಾಗಿತ್ತು. ಇದರಲ್ಲಿ ಶೇ 95ರಷ್ಟು ಕಾಮಗಾರಿ ಮುಗಿದಿದೆ. ಹಿರೇಕೋಡಿ ಪಂಚಾಯ್ತಿ ವ್ಯಾಪ್ತಿಯ ಟಾಂಗ್ಯಾನಕೋಡಿ ಬಳಿ ನಿರ್ಮಿಸಿರುವ ಘಟಕದಲ್ಲಿ ನೀರು ಶುದ್ಧೀಕರಿಸಿ ಕೃಷಿಗೆ ಕೊಡಲಾಗುವುದು.

‘ಮೊದಲ ಹಂತದ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣವಾಗಲಿದೆ. ಕಾಮಗಾರಿಗಾಗಿ ಅಗೆದಿರುವ ಎಲ್ಲ ರಸ್ತೆಗಳನ್ನು ಮರು ನಿರ್ಮಿಸಬೇಕು’ ಎಂದು ಸಂಸದ ಪ್ರಕಾಶ ಹುಕ್ಕೇರಿ ಈಚೆಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಹೊಸ ಬಡಾವಣೆಗಳಿಗೆ 2ನೇ ಹಂತದಲ್ಲಿ 70 ಕಿ.ಮೀ. ಒಳಚರಂಡಿ ನಿರ್ಮಾಣ ಕಾಮಗಾರಿ ಯೋಜನೆ ಅನುಷ್ಠಾನಕ್ಕಾಗಿ ₹ 84.14 ಕೋಟಿ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಈ ಪೈಕಿ ₹ 37.77 ಕೋಟಿ ಅನುದಾನ ಮಂಜೂರಾಗಿದೆ.

ಪರಿಸರ ಸ್ನೇಹಿ ಯೋಜನೆ:ಮನೆಗಳಿಂದ ಹೊರಬರುವ ಮಲಿನ ನೀರು ಪೈಪ್‌ಲೈನ್‌ ಮೂಲಕ ಹಿರೇಕೋಡಿ ವ್ಯಾಪ್ತಿಯಲ್ಲಿನ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗಿ ಅಲ್ಲಿಂದ ಪಂಪ್‌ಹೌಸ್‌ ಮೂಲಕ ಟಾಂಗ್ಯಾನಕೋಡಿ ಹದ್ದಿಯಲ್ಲಿರುವ ಜಲಶುದ್ಧೀಕರಣ ಘಟಕಕ್ಕೆ ಸಾಗುತ್ತದೆ. ಅಲ್ಲಿ ಶುದ್ಧೀಕರಿಸಿದ ನೀರನ್ನು ನೇರವಾಗಿ ಕೃಷಿ ಜಮೀನುಗಳಿಗೆ ಬಳಸುವುದಕ್ಕೆ ಒದಗಿಸಲಾಗುತ್ತದೆ. ಇದಕ್ಕಾಗಿ ಪಟ್ಟಣದಲ್ಲಿ ಪೈಪಲೈನ್‌ಗಳ ಮೂಲಕ ಅಲ್ಲಲ್ಲಿ ಚೇಂಬರ್‌ಗಳನ್ನು ನಿರ್ಮಿಸಲಾಗಿದೆ. ಚರಂಡಿಗಳ ಮಲಿನ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವ ಪರಿಸರ ಸ್ನೇಹಿ ಯೋಜನೆಬೆಳಗಾವಿ ಜಿಲ್ಲೆಯಲ್ಲಿ ಇದೇ ಮೊದಲು ಎನ್ನುತ್ತಾರೆ ಅಧಿಕಾರಿಗಳು.

ಒಳಚರಂಡಿ ಯೋಜನೆ ಬಳಸುವ ನಾಗರಿಕರು ಪುರಸಭೆಗೆ ತಮ್ಮ ನೀರಿನ ಕರದ ಜೊತೆ ಪ್ರತಿ ತಿಂಗಳು ₹ 15 ಹಾಗೂ ವಾಣಿಜ್ಯ ಬಳಕೆದಾರರು ₹ 60 ಪಾವಸತಿಸಬೇಕಾಗುತ್ತದೆ. ಮನೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಇಲ್ಲದಿದ್ದರೂ ನೇರವಾಗಿ ಶೌಚಾಲಯ ಮತ್ತು ಬಚ್ಚಲು ಮನೆಗಳಿಂದ ಒಳಚರಂಡಿ ಪೈಪಲೈನ್‌ಗೆ ಸಂಪರ್ಕ ಜೋಡಿಸಬಹುದಾಗಿದೆ. ಹೀಗಾಗಿ ಸೆಪ್ಟಿಕ್ ಟ್ಯಾಂಕ್‌ ನಿರ್ಮಾಣಕ್ಕೆ ಖರ್ಚಾಗುವ ಹಣ ಉಳಿತಾಯವಾಗಲಿದೆ.

‘ಪಟ್ಟಣದಲ್ಲಿ ಒಳಚರಂಡಿ ಯೋಜನೆ ಪೂರ್ಣಗೊಳ್ಳಲು ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ. ಈಗಾಗಲೇ 2081 ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಬಸ್ ನಿಲ್ದಾಣದಿಂದ ಕವಟಗಿಮಠ ನಗರ, ಹರಿನಗರ, ರಾಜೀವ ನಗರ, ರಾಮನಗರ, ಪ್ರಭುವಾಡಿ ಕೆಲವು ಭಾಗ, ವಿದ್ಯಾನಗರ, ಹಾಲಟ್ಟಿ, ಟೇಕಡಿ ತಕೀಯಾ, ಅಂಬೇಡ್ಕರ್ ನಗರ ಮೊದಲಾದ ಕಡೆಗಳಲ್ಲಿ, ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಬಿ. ಬಣಕಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT