ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಕೊಠಡಿಗಳಲ್ಲಿ ಮತ ಎಣಿಕೆ; ಕೋವಿಡ್ ಮಾರ್ಗಸೂಚಿ ಪಾಲನೆಗೆ ಕ್ರಮ

ಪ್ರಕ್ರಿಯೆ ನಾಳೆ: ಕೋವಿಡ್ ಮಾರ್ಗಸೂಚಿ ಪಾಲನೆಗೆ ಕ್ರಮ
Last Updated 30 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಕೋವಿಡ್-19 ಮಾರ್ಗಸೂಚಿಯ ಪ್ರಕಾರ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

‘ಟಿಳಕವಾಡಿಯ ಆರ್.ಪಿ.ಡಿ. ಕಾಲೇಜಿನಲ್ಲಿ ಭಾನುವಾರ (ಮೇ 2) ಬೆಳಿಗ್ಗೆ 8 ಗಂಟೆಯಿಂದ ಇವಿಎಂ ಮತ ಎಣಿಕೆ ಆರಂಭಗೊಳ್ಳಲಿದೆ. ಚುನಾವಣಾ ವೀಕ್ಷಕರು ಹಾಗೂ ಮತ ಎಣಿಕೆ ಏಜೆಂಟರ ಸಮ್ಮುಖದಲ್ಲಿ ಅಂದು ಬೆಳಿಗ್ಗೆ 7ರಿಂದ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಸ್ಟ್ರಾಂಗ್ ರೂಂ ತೆರೆಯಲಾಗುವುದು. ಸರಿಯಾಗಿ ಬೆಳಿಗ್ಗೆ 8ಕ್ಕೆ ಎಣಿಕೆ ಆರಂಭಗೊಳ್ಳಲಿದೆ. ಹೇರೆಕರ ಕಟ್ಟಡದಲ್ಲಿ ಪೋಸ್ಟಲ್ ಬ್ಯಾಲೆಟ್ ಹಾಗೂ ಇಪಿಬಿಎಸ್ ಮತ ಎಣಿಕೆ ಕೂಡ ಆರಂಭಗೊಳ್ಳಲಿದೆ’.

ಪಿಪಿಇ ಕಿಟ್:

‘ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಪ್ರತಿ ಕೊಠಡಿಗೆ 2 ಟೇಬಲ್‌ಗಳನ್ನು ಹಾಕಲಾಗುವುದು. ಆಯೋಗದ ಸೂಚನೆಯಂತೆ ಪ್ರತಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ 2 ಕೊಠಡಿಗಳಂತೆ 16 ಮತ್ತು ಪೋಸ್ಟಲ್ ಬ್ಯಾಲೆಟ್-ಇಟಿಪಿಬಿಎಸ್ ಮತ ಎಣಿಕೆಗೆ 1 ಸೇರಿದಂತೆ ಒಟ್ಟು 17 ಕೊಠಡಿಗಳಲ್ಲಿ ‍ಪ್ರಕ್ರಿಯೆ ನಡೆಯಲಿದೆ. ಅಂತರ ಕಾಪಾಡಲು ಕ್ರಮ ವಹಿಸಲಾಗಿದೆ. ಕೊಠಡಿಯಲ್ಲಿ ಹಾಜರಿರುವ ಮತ ಎಣಿಜೆ ಏಜೆಂಟರಿಗೆ ಪಿಪಿಇ ಕಿಟ್ ಒದಗಿಸಲು ತಾಲ್ಲೂಕು ವೈದ್ಯಾಧಿಕಾರಿ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿಧಾನಸಭಾ ಕ್ಷೇತ್ರವಾರು ಖಜಾನೆಯಲ್ಲಿ ಇರಿಸಿರುವ ಪೋಸ್ಟಲ್ ಬ್ಯಾಲೆಟ್ ಮತ ಪೆಟ್ಟಿಗೆಗಳನ್ನು ಭಾನುವಾರ ಬೆಳಿಗ್ಗೆ 6ಕ್ಕೆ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆಯಲ್ಲಿ ಕೇಂದ್ರಕ್ಕೆ ತರಲಾಗುವುದು. ಬೆಳಗಾವಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರರು ಮುಚ್ಚಿದ ಕಂಟೇನರ್ ಮೂಲಕ ಪೋಸ್ಟಲ್ ಬ್ಯಾಲೆಟ್ ಸಾಗಣೆಗೆ ಕ್ರಮ ಕೈಗೊಳ್ಳಲಿದ್ದಾರೆ. ಇವಿಎಂ ಮತ ಎಣಿಕೆ ಮುಗಿದ ತಕ್ಷಣವೇ ಅದೇ ಕೊಠಡಿಯಲ್ಲಿ ವಿವಿಪ್ಯಾಟ್ ಎಣಿಕೆ ನಡೆಯಲಿದೆ. ಅಂತೆಯೇ 5,831 ಪೋಸ್ಟಲ್ ಬ್ಯಾಲೆಟ್ ಕೌಂಟಿಂಗ್ ಮುಗಿದ ಬಳಿಕ 964 ಇಟಿಬಿಪಿಎಸ್ ಮತ ಎಣಿಕೆ ನಡೆಯಲಿದೆ. ಬೆಳಗಾವಿ ಉಪ ವಿಭಾಗಾಧಿಕಾರಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’.

‘ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಸಿಬ್ಬಂದಿ ಹಾಗೂ ಏಜೆಂಟರು ಬೆಳಿಗ್ಗೆ 6.30ರ ಒಳಗೆ ಹಾಜರಿರಬೇಕು. ಕೋವಿಡ್ ವರದಿ ನೆಗೆಟಿವ್ ಇದ್ದು, ಅಂದು ಸೋಂಕಿನ ಲಕ್ಷಣ ಹೊಂದಿರುವವರ ರ‍್ಯಾಪಿಡ್‌ ಆಂಟಿಜೆನ್ ಟೆಸ್ಟ್ (ಆರ್.ಎ.ಟಿ) ನಡೆಸಲು 10 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಸೋಂಕಿನ ಲಕ್ಷಣ ಹೊಂದಿದವರ ಆರ್.ಎ.ಟಿ. ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ಅವಕಾಶ ಇರಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ನೇರ ಪ್ರಸಾರ:

‘ಮತ ಎಣಿಕೆ ಕೇಂದ್ರದ ಪ್ರವೇಶ ದ್ವಾರ ಹಾಗೂ ವೀಕ್ಷಕರ ಕೊಠಡಿಗಳಲ್ಲಿ ಅಳವಡಿಸಿರುವ ಟಿ.ವಿ‌. ಪರದೆಗಳ ಮೂಲಕ ಪ್ರತಿ ಸುತ್ತಿನ ಮತ ಎಣಿಕೆಯ ವಿವರಗಳನ್ನು ಎನ್.ಐ.ಸಿ.‌ ಸಹಯೋಗದೊಂದಿಗೆ ಪ್ರಕಟಿಸಲಾಗುವುದು. ಏಜೆಂಟರು ಹಾಗೂ ಎಣಿಕೆ ಸಿಬ್ಬಂದಿಯನ್ನು 2 ಪಾಳಿಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಬೆಳಿಗ್ಗೆ 6ರಿಂದ 12.30ರವರೆಗೆ‌ ಮೊದಲ ತಂಡ ಕಾರ್ಯನಿರ್ವಹಿಸಲಿದೆ’.

‘ಪೊಲೀಸ್ ಇಲಾಖೆಯು 3 ಹಂತದ ಭದ್ರತಾ ವ್ಯವಸ್ಥೆ ಮಾಡಿದ್ದು, 450 ಸಿಬ್ಬಂದಿ ನಿಯೋಜಿಸಿದೆ. ವಿಜಯೋತ್ಸವ ನಿಷೇಧಿಸಲಾಗಿದೆ. ಗೆದ್ದವರು ಪ್ರಮಾಣಪತ್ರ ಪಡೆಯುವಾಗ ಇಬ್ಬರನ್ನಷ್ಟೆ ಕರೆತರಲು ಅವಕಾಶವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT