ಬೆಳಗಾವಿ: ಗಣೇಶೋತ್ಸವಕ್ಕೆ ಭರದ ಸಿದ್ಧತೆ, ಮೂರ್ತಿಗಳ ಪ್ರತಿಷ್ಠಾಪನೆಗೆ ಮಂಟಪ ತಯಾರಿ

7

ಬೆಳಗಾವಿ: ಗಣೇಶೋತ್ಸವಕ್ಕೆ ಭರದ ಸಿದ್ಧತೆ, ಮೂರ್ತಿಗಳ ಪ್ರತಿಷ್ಠಾಪನೆಗೆ ಮಂಟಪ ತಯಾರಿ

Published:
Updated:
Deccan Herald

ಬೆಳಗಾವಿ: ನಗರದಲ್ಲಿ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಈ ಬಾರಿಯೂ 370ಕ್ಕೂ ಹೆಚ್ಚು ಮಂಟಪ(ಪೆಂಡಾಲ್)ಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು, ವಿವಿಧ ಮಂಡಳಗಳು ಸಜ್ಜಾಗಿವೆ. ವೈವಿಧ್ಯ ಮಂಟಪಗಳ ನಿರ್ಮಾಣ ಹಾಗೂ ವಿದ್ಯುತ್‌ ದೀಪಾಲಂಕಾರಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಪದಾಧಿಕಾರಿಗಳು ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಗಡಿ ನಾಡಾದ ಇಲ್ಲಿ ಗಣೇಶ ಚತುರ್ಥಿ ಅಂಗವಾಗಿ ನಡೆಯುವ ಉತ್ಸವವು ವರ್ಷದಿಂದ ವರ್ಷಕ್ಕೆ ವೈಭವ ಪಡೆದುಕೊಳ್ಳುತ್ತಲೇ ಬಂದಿದೆ. ಈ ಕಾರಣದಿಂದಾಗಿಯೇ ಇಡೀ ರಾಜ್ಯದ ಗಮನವನ್ನೂ ಸೆಳೆಯುತ್ತಿದೆ.

ಗಣೇಶ ಮೂರ್ತಿಗಳನ್ನು, ಸ್ವಾತಂತ್ರ್ಯ ಪೂರ್ವದಿಂದಲೂ ಪ್ರತಿಷ್ಠಾಪಿಸುತ್ತಿರುವ ಖ್ಯಾತಿ ಇಲ್ಲಿನ ಕೆಲವು ಮಂಡಳಗಳಿಗಿದೆ. ಕನ್ನಡ ಹಾಗೂ ಮರಾಠಿ ಭಾಷಿಕರು ಕೂಡಿ ಸಂಭ್ರಮದಿಂದ ಆಯೋಜಿಸುತ್ತಾರೆ. ಹಲವು ಭಾಷೆ, ಸಂಸ್ಕೃತಿಗಳ ಜನರು ವಾಸಿಸುತ್ತಿರುವ ಇಲ್ಲಿ ಸಾಮರಸ್ಯ ಮೂಡಿಸುವ ಪ್ರಯತ್ನದ ಭಾಗವಾಗಿ ಈ ಉತ್ಸವವನ್ನು ಪರಿಣಾಮಕಾರಿಯಾಗಿ ಹಿಂದಿನಿಂದಲೂ ಬಳಸಿಕೊಳ್ಳಲಾಗುತ್ತಿದೆ.

ಶತಮಾನದ ಇತಿಹಾಸ

ರವಿವಾರ ಪೇಟೆ, ಬಾತಕಾಂಡೆ ಗಲ್ಲಿ, ಮಾರುತಿ ಗಲ್ಲಿ, ಜೇಂಡಾ ಚೌಕ, ಕಾಮತ್‌ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಗಳು ಶತಮಾನೋತ್ಸವ ಆಚರಿಸಿವೆ. ಪ್ರತಿ ವರ್ಷವೂ ವೈವಿಧ್ಯ ಮಂಟಪಗಳನ್ನು ಸಿದ್ಧಪಡಿಸಿ, ಚಿತ್ತಾಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಮನಸೆಳೆಯುತ್ತಿವೆ.

ಪ್ರಮುಖ ವೃತ್ತಗಳು, ರಸ್ತೆಗಳ ಬದಿಯಲ್ಲೂ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಬಹುತೇಕ ಬಡಾವಣೆಗಳಲ್ಲಿ ಸಂಘ–ಸಂಸ್ಥೆಗಳಿಂದ ಉತ್ಸವ ನಡೆಸಲಾಗುತ್ತದೆ. ಶಾಲಾ–ಕಾಲೇಜುಗಳ ಆವರಣದಲ್ಲೂ ಆಯಾ ಆಡಳಿತ ಮಂಡಳಿಗಳ ವತಿಯಿಂದ ಗಣಪನನ್ನು ಆರಾಧಿಸಲಾಗುತ್ತದೆ.

11ನೇ ದಿನದಂದು ನಡೆಯುವ ಮೂರ್ತಿಗಳ ಮೆರವಣಿಗೆಯು ಈ ಭಾಗದ ಕಲೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತದೆ. ನಾಡಹಬ್ಬ ಮೈಸೂರು ದಸರಾ (ಜಂಬೂಸವಾರಿ) ಮೆರವಣಿಗೆಯನ್ನು ನೆನಪಿಸುತ್ತದೆ. ಇಲ್ಲಿನ ಸಂಭ್ರಮ ಕಣ್ತುಂಬಿಕೊಳ್ಳಲು ಹೊರ ಜಿಲ್ಲೆಗಳು ಹಾಗೂ ರಾಜ್ಯಗಳ ಜನರೂ ಬರುವುದು ವಿಶೇಷ.

ಹಲವು ಕಾಮಗಾರಿ

ಪಾಲಿಕೆಯಿಂದಲೂ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗಣೇಶ ಮೂರ್ತಿಗಳ ಮೆರವಣಿಗೆ ಸಾಗುವ ರಸ್ತೆಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಪಿಲೇಶ್ವರ ದೇವಸ್ಥಾನದ ಬಳಿ ಇರುವ ಎರಡು ಸೇರಿದಂತೆ ವಿವಿಧಡೆ ಇರುವ ಹೊಂಡಗಳಲ್ಲಿನ ತ್ಯಾಜ್ಯ ತೆರವುಗೊಳಿಸುವ ಕಾರ್ಯವನ್ನೂ ಆರಂಭಿಸಲಾಗಿದೆ.

‘ಮಂಟಪಗಳ ಬಳಿ ಮೂಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ದುರಸ್ತಿಗೆ ಅನುದಾನದ ಕೊರತೆ ಇಲ್ಲ. ಹಬ್ಬದ ವೇಳೆಗೆ ಗುಂಡಿಗಳನ್ನು ಮುಚ್ಚಲಾಗುವುದು. ಹೊಂಡಗಳನ್ನು ಸುಣ್ಣ–ಬಣ್ಣ ಬಳಿದು ಸಿಂಗರಿಸಲಾಗುವುದು. ಗಣೇಶ ಮೂರ್ತಿಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಅವರ ಅನುಕೂಲಕ್ಕಾಗಿ ಮಂಟಪಗಳ ಬಳಿ ಹಾಗೂ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರ ಹಾಗೂ ತಾಲ್ಲೂಕಿನಾದ್ಯಂತ ತಡರಾತ್ರಿವರೆಗೂ ಬಸ್‌ಗಳನ್ನು ಓಡಿಸುವಂತೆ ಸಾರಿಗೆ ನಿಗಮದ ಅಧಿಕಾರಿಗಳನ್ನು ಕೋರಲಾಗಿದೆ. ತಡರಾತ್ರಿವರೆಗೂ ಹೋಟೆಲ್‌ಗಳನ್ನು ತೆರೆದಿರಬೇಕು ಮತ್ತು ಊಟ, ಉಪಾಹಾರ ನೀಡಬೇಕು ಎಂದು ಹೋಟೆಲ್‌ ಮಾಲೀಕರ ಸಂಘದವರಿಗೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !