ರಾಮದುರ್ಗ: ಆನೆ ಕಾಲು ರೋಗ ಭೀತಿ

7
ಮಾತ್ರೆಗಳ ವಿತರಣೆ ಕಾರ್ಯಕ್ರಮ ಇಂದಿನಿಂದ

ರಾಮದುರ್ಗ: ಆನೆ ಕಾಲು ರೋಗ ಭೀತಿ

Published:
Updated:

ಬೆಳಗಾವಿ: ಜಿಲ್ಲೆಯ ರಾಮದರ್ಗ ಪಟ್ಟಣದಲ್ಲಿ ಆನೆಕಾಲು ರೋಗದ ಭೀತಿ ಕಾಡುತ್ತಿದೆ.

ಆರೋಗ್ಯ ಇಲಾಖೆಯಿಂದ ಅಲ್ಲಿ ನಡೆಸಿದ ಸಮೀಕ್ಷೆಯಲ್ಲಿ 604 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ ಬರೋಬ್ಬರಿ 24  ಮಂದಿಯಲ್ಲಿ ಆನೆಕಾಲು ರೋಗದ ಲಕ್ಷಣ ಇರುವುದು (ಪಾಸಿಟಿವ್) ಇರುವುದು ಪತ್ತೆಯಾಗಿದೆ. ಇದು, ತೀವ್ರ ಆತಂಕ ಮೂಡಿಸಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಸಾಂಕ್ರಾಮಿಕ ರೋಗ ಇದಾಗಿರುವುದರಿಂದ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಈ ರೋಗ ಪಸರಿಸುವುದು ‘ಕ್ಯೂಲೆಕ್ಸ್’ ಎಂಬ ಸೊಳ್ಳೆಗಳು. ತೆರೆದ ಚರಂಡಿಗಳು, ರಾಡಿ ಹಾಗೂ ಕೊಳಕು ಪ್ರದೇಶಗಳಲ್ಲಿ ವಾಸಿಸುವ ಈ ಸೊಳ್ಳೆಗಳೇ ರೋಗದ ಮೂಲ. ರಾತ್ರಿ ಹೊತ್ತಿನಲ್ಲಿ ಕ್ರಿಯಾಶೀಲವಾಗುವ ಕ್ಯೂಲೆಕ್ಸ್ ಜನರನ್ನು ಕಚ್ಚಿದರೆ ರಕ್ತದಲ್ಲಿ ಪೈಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಚ್ಚಿದ ಕೂಡಲೇ ಕಾಲಿನಲ್ಲಿ ಬಾವು ಕಾಣಿಸಿಕೊಳ್ಳುವುದಿಲ್ಲ. ಕೆಲವು ವರ್ಷಗಳ ನಂತರ ಬಾವು ಕಾಣಿಸಿಕೊಳ್ಳುತ್ತದೆ. ಈ ರೋಗ ಹೆಚ್ಚಿನ ‍ಪ್ರಮಾಣದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿತ್ತು. ರಾಮದುರ್ಗದ ಜನರು ಬಾಗಲಕೋಟೆಯೊಂದಿಗೆ ಬಹಳಷ್ಟು ಒಡನಾಟ ಹೊಂದಿದ್ದಾರೆ. ಅಲ್ಲಿಗೆ ಜಾತ್ರೆ ಮೊದಲಾದವುಗಳಿಗಾಗಿ ಹೋಗಿ ಬರುವುದು ಸಾಮಾನ್ಯ. ಅಲ್ಲಿಂದ ರೋಗ ಹರಡಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಸಮೀಕ್ಷೆ ಪ್ರಕಾರ: ‘ಖಾನಾಪುರ, ಬೆಳಗಾವಿ, ಚಿಕ್ಕೋಡಿ ಹಾಗೂ ರಾಮದುರ್ಗ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಈ ಪೈಕಿ ರಾಮದುರ್ಗದಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಹೀಗಾಗಿ, ಅಲ್ಲಿ ಸತತವಾಗಿ ನಾಲ್ಕು ವರ್ಷಗಳವರೆಗೆ ಡಿಸೆಂಬರ್‌ನಿಂದ ಜನವರಿ ಅವಧಿಯಲ್ಲಿ ಮಾತ್ರೆಗಳನ್ನು  ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಜ. 17ರಂದು ಕಾರ್ಯಕ್ರಮ ಆರಂಭಗೊಳ್ಳಲಿದೆ. 15 ದಿನಗಳವರೆಗೆ ನಡೆಯಲಿದೆ. ಒಬ್ಬರಿಗೆ ಮೂರು ಡಿಇಸಿ ಮಾತ್ರೆಗಳು ಹಾಗೂ 1 ಅಲ್ಬೆಂಡೋಜೋಲ್‌ ಮಾತ್ರೆಯನ್ನು ನುಂಗಿಸಲಾಗುವುದು. ಚಳಿಗಾಲದಲ್ಲಿ ಈ ರೋಗ ಹರಡುವಿಕೆ ಪ್ರಮಾಣ ಜಾಸ್ತಿ ಇರುತ್ತದೆ. ಹೀಗಾಗಿ, ಅತ್ತ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್. ಪಲ್ಲೇದ ‘ಪ್ರಜಾವಾಣಿ’ಗೆ ತಿಳಿಸಿದರು.

‘2 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಾತ್ರೆಗಳನ್ನು ನೀಡಲಾಗುವುದು. ಆನೆಕಾಲು ರೋಗ ಹಬ್ಬದಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ. ರಾಮದುರ್ಗ ಪಟ್ಟಣದ 42ಸಾವಿರ ಮಂದಿಗೆ ಮಾತ್ರೆಗಳನ್ನು ನೀಡಲು ತಲಾ ಇಬ್ಬರನ್ನು ಒಳಗೊಂಡ 36 ತಂಡಗಳು ಕಾರ್ಯನಿರ್ವಹಿಸಲಿವೆ’ ಎಂದು ಮಾಹಿತಿ ನೀಡಿದರು.

ಹೊರಗೆ ಮಲಗುವುದರಿಂದ: ‘ರಾಮದುರ್ಗದಲ್ಲಿ ತೆರೆದ ಚರಂಡಿಗಳ ಬಳಿಯೇ ಮನೆಗಳಿರುವ ಉದಾಹರಣೆಗಳಿವೆ. ಕೆಲವರು ಹೊರಗಡೆಯೇ ಮಲಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ವೇಳೆ ಕ್ಯೂಲೆಕ್ಸ್ ಸೊಳ್ಳೆ ಕಚ್ಚಿ ರೋಗ ಹರಡಿದೆ. 15ರಿಂದ 60 ವರ್ಷ ವಯಸ್ಸಿನವರಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿದೆ. ಅವರಿಗೆ ಸತತ 12 ದಿನಗಳವರೆಗೆ ಚಿಕಿತ್ಸೆ ನೀಡಿ, ಪುನರ್ವಸತಿ ಕಲ್ಪಿಸಲಾಗಿದೆ. ಬಾವು ಹೆಚ್ಚಾಗದಂತೆ, ಗಾಯವಾಗದಂತೆ ನೋಡಿಕೊಳ್ಳುವುದಕ್ಕೆ ಏನು ಮಾಡಬೇಕು. ಯಾವ ರೀತಿ ವ್ಯಾಯಾಮ ಮಾಡಬೇಕು ಎನ್ನುವುದನ್ನು ತಿಳಿಸಲಾಗಿದೆ. ಔಷಧಿಯನ್ನೂ  ನೀಡಲಾಗಿದೆ. 24ರಲ್ಲಿ 12 ಮಂದಿಗೆ ಕಾಲು ಬಾವು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಕೊಡಿಸಲಾಗಿದೆ. ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !