ಬೆಳಗಾವಿ| ಮಾರ್ಚ್ 20ರಂದು ರಾಣಿ ಚನ್ನಮ್ಮ ವಿ.ವಿ ಘಟಿಕೋತ್ಸವ

ಬೆಳಗಾವಿ: ಇಲ್ಲಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಸಮಾರಂಭವು ಮಾರ್ಚ್ 20ರಂದು ಬೆಳಿಗ್ಗೆ 11 ಗಂಟೆಗೆ ಸಮೀಪದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರ ಗೌಡ ತಿಳಿಸಿದರು.
‘ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ವಿವಿಧ ಪದವಿ ಹಾಗೂ ರ್‍ಯಾಂಕ್ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿರುವರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದರು.
‘ರಾಣಿಚನ್ನಮ್ಮ ವಿಶ್ವವಿದ್ಯಾಲಯವು ವ್ಯಾಪ್ತಿಯಲ್ಲೂ ಮತ್ತು ಗಾತ್ರದಲ್ಲೂ ರಾಜ್ಯದಲ್ಲಿಯೇ ಮಹತ್ವ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯವು ಕಳೆದ ವರ್ಷ ‘ನ್ಯಾಕ್’ ಮನ್ನಣೆಯಲ್ಲಿ ಉನ್ನತ ಶ್ರೇಣಿ ಪಡೆದುಕೊಂಡಿದೆ. ಇ– ಆಡಳಿತ ವ್ಯವಸ್ಥೆ ಜಾರಿಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಲ್ಲಿಯೂ ಮುಂಚೂಣಿಯಲ್ಲಿದೆ’ ಎಂದರು.
‘ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 419 ಮಹಾವಿದ್ಯಾಲಯಗಳು ವಿಶ್ವವಿದ್ಯಾಲಯದ ಅಧೀನದಲ್ಲಿವೆ. 1.50 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿಜಯಪುರ ಮತ್ತು ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ವಿಶ್ವವಿದ್ಯಾಲಯವು ಹೊಂದಿದೆ. 49 ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.
ಹೊಸ ಕ್ಯಾಂಪಸ್: ‘ಭೂತರಾಮನ ಹಟ್ಟಿಯ ಬಳಿ ಇರುವ 169.02 ಎಕರೆ ಜಮೀನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾಗಿಲ್ಲ. ನನೆಗುದಿಗೆ ಬಿದ್ದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಈಗ ಹಿರೇಬಾಗೇವಾಡಿಯ ಮಲ್ಲಪ್ಪನ ಗುಡ್ಡದ ಬಳಿ ಸರ್ಕಾರವು 126.27 ಎಕರೆ ಜಾಗ ಮಂಜೂರು ಮಾಡಿದೆ. ಈಗಾಗಲೇ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದ್ದು, ಕಟ್ಟಡ ಕಾರ್ಯ ಪ್ರಗತಿಯಲ್ಲಿದೆ’ ಎಂದರು.
ಕುಲಸಚಿವೆ ರಾಜಶ್ರೀ ಜೈನಾಪುರ, ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೋರನಾಳೆ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ ಇದ್ದರು.
**
ಚಿನ್ನದ ಹುಡುಗಿಯರು
ಈ ಬಾರಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿವಿಧ ಕಾಲೇಜುಗಳಲ್ಲಿ ಸ್ಥಾಪಿಸಿದ 12 ವಿವಿಧ ಚಿನ್ನದ ಪದಕಗಳನ್ನೂ ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದು ವಿಶೇಷ. ಬಾಗಲಕೋಟೆಯ ಬಸವೇಶ್ವರ ಕಲಾ ಕಾಲೇಜಿನ ಶಶಿಕಲಾ ನಿಗಾರಿ ಅವರು ಮೂರು ಚಿನ್ನದ ಪದಕ ಪಡೆದು ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದಾರೆ.
ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಕಾಲೇಜ್ ಆಫ್ ಕಾಮರ್ಸ್‌ನ ಶ್ವೇತಾ ಪಾಟೀಲ, ಜಮಖಂಡಿಯ ತುಂಗಳ ಸ್ಕೂಲ್‌ನ ಶ್ರೀದೇವಿ ಕೆ. ಅರಕೇರಿ, ಬಿಎಲ್‌ಡಿಇಎ ವಾಣಿಜ್ಯ, ಕಲಾ ಹಾಗೂ ವಿಜ್ಞಾನ ಕಾಲೇಜಿನ ಪ್ರಿಯಾಂಕ ಮಗದುಮ್, ವಿಶ್ವವಿದ್ಯಾಲಯ ಲಕ್ಷ್ಮೀ ಮಗದುಮ್, ಪೂಜಾ ಪರಸಣ್ಣವರ, ಬಾಗಲಕೋಟೆಯ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಗೌರಮ್ಮ ಗುರುಸಿದ್ದಪ್ಪ ಬಳಗಾರ, ರಾಮದುರ್ಗದ ಸಿ.ಎಸ್.ಬಿ ಆರ್ಟ್ಸ್, ಎಸ್.ಎಂ.ಆರ್.ಪಿ ಸೈನ್ಸ್ ಹಾಗೂ ಜಿ.ಎಲ್. ರಾಠಿ ಕಾಮರ್ಸ್ ಕಾಲೇಜಿನ ಮುಸ್ಕಾನ್ ಆರ್. ಮುಲ್ಲಾ, ಹಾರೂಗೇರಿಯ ಎಸ್.ಪಿ.ಎಂ. ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನ ಸವಿತಾ ಕೊಳ್ಳೆಣ್ಣವರ, ಹಾರೂಗೇರಿಯ ಶ್ರೀ ಸಿದ್ಧೇಶ್ವರ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನ ಕ್ರಾಂತಿ ಪೂಜೇರಿ ಅವರು ತಲಾ ಒಂದೊಂದು ಚಿನ್ನದ ಪದಕ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.