ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ಗೆ ನುಗ್ಗಿ ₹1 ಲಕ್ಷ ಕಳವು

ಗಾಜು ಒಡೆದು ಒಳನುಗ್ಗಿದ ಕಳ್ಳ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದವು ಕಳ್ಳತನ ದೃಶ್ಯ
Last Updated 13 ಸೆಪ್ಟೆಂಬರ್ 2022, 5:43 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವೈಭವ ನಗರದಲ್ಲಿರುವ ಗ್ರ್ಯಾಂಡ್‌ ಹೋಟೆಲ್‌ಗೆ ಸೋಮವಾರ ನಸುಕಿನಲ್ಲಿ ನುಗ್ಗಿದ ಕಳ್ಳ ₹ 1 ಲಕ್ಷ ಹಣ ಎತ್ತಿಕೊಂಡು ಪರಾರಿಯಾಗಿದ್ದಾನೆ.

ಹೋಟೆಲಿನ ಮುಂಬಾಗಿಲಿಗೆ ಗ್ಲಾಸ್‌ ಅಳವಡಿಸಲಾಗಿದೆ. ಷಟರ್‌ ಎಳೆದಿರಲಿಲ್ಲ. ಈ ಸಮಯ ಸಾಧಿಸಿ ಬಂದ ಆರೋಪಿ, ಗ್ಲಾಸ್‌ ಒಡೆದು ಒಳಗೆ ನುಗ್ಗಿದ್ದಾನೆ. ಗಲ್ಲಾಪೆಟ್ಟಿಯನ್ನೂ ಒಡೆದು ಅದರಲ್ಲಿ ₹ 1 ಲಕ್ಷ ಎತ್ತಿಕೊಂಡು ಪರಾರಿಯಾಗಿದ್ದಾನೆ ಎಂದು ಹೋಟೆಲ್‌ ಮಾಲೀಕರು ದೂರು ನೀಡಿದ್ದಾರೆ.

ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕರಣ ದಾಖಲಸಿಕೊಂಡ ಎಪಿಎಂಸಿ ಠಾಣೆ ಪೊಲೀಸರು ಆರೋಪಿ ‍ಪತ್ತೆ ಜಾಲ ಬೀಸಿದ್ದಾರೆ.

ವಿದ್ಯುತ್‌ ಸ್ಪರ್ಶ: ಬಾಲಕ ಸಾವು

ಅಥಣಿ: ತಾಲ್ಲೂಕಿನ ಸಂಕ್ರಟ್ಟಿ ಗ್ರಾಮದಲ್ಲಿ ಸೋಮವಾರ ವಿದ್ಯುತ್‌ ಸ್ಪರ್ಶದಿಂದ ಶಾಲಾ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕೃಷಿ ಕಾರ್ಮಿಕ ಪರಮೇಶ್ವರ ಮುಗಳಖೋಡ ಅವರ ಪುತ್ರ ಮಲ್ಲಿಕಾರ್ಜುನ (13) ಮೃತಪಟ್ಟ ಬಾಲಕ. ಸೋಮವಾರ ಶಾಲೆಗೆ ಹೊರಟಿದ್ದ ಸಂದರ್ಭದಲ್ಲಿ ರಸ್ತೆ ಪಕ್ಕದ ಏರ್‌ಟೆಲ್‌ ಟವರ್‌ಗೆ ಅಳವಡಿಸಿದ್ದ ತಂತಿಯ ಜಾಳಿಗೆ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಜಾಳಿಗೆಯಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾರ್ಟ್‌ ಸರ್ಕೀಟ್‌: ಕಂಪ್ಯೂಟರ್‌ಗೆ ಬೆಂಕಿ

ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಮುಖ್ಯ ಬಜಾರ್‌ನಲ್ಲಿ ಇರುವ ಮಯೂರ ಕಾಪ್ಸೆ ಎನ್ನುವವರ ಮನೆಯಲ್ಲಿ ಸೋಮವಾರ ನಸುಕಿನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ.

ಅವರ ಮನೆಯಲ್ಲಿದ್ದ ಕಂಪ್ಯೂಟರ್‌ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ. ಇದರಿಂದ ₹ 8 ಲಕ್ಷ ಹಾನಿ ಸಂಭವಿಸಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬದವರಿಗೆ ತಮ್ಮ ₹ 25 ಸಾವಿರ ನೆರವು ನೀಡಿದರು.

ಗುಜರಿ ಅಂಗಡಿಯಲ್ಲಿ ಕಳವು

ನಿಪ್ಪಾಣಿ: ತಾಲ್ಲೂಕಿನ ಬೋರಗಾಂವ ಪಟ್ಟಣದ ಸದಲಗಾ ರಸ್ತೆ ಬದಿಗಿರುವ ಗುಜರಿ ಅಂಗಡಿಯಲ್ಲಿ ಭಾನುವಾರ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕಾಶ ಗೋಸಾವಿ ಎಂಬುವವರ ಅಂಗಡಿಗೆ ರಾತ್ರಿ ನುಗ್ಗಿದ ಕಳ್ಳರು, ಅಂಗಡಿಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಒಡೆದಿದ್ದಾರೆ. ಕಬ್ಬಿಣ ಹಾಗೂ ಅಲ್ಯೂಮಿನಿಯಂ ವಸ್ತುಗಳು, ವಾಹನಗಳ ಬಿಡಿ ಭಾಗಗಳು ಹಾಗೂ ಮೂರು ಆಡುಗಳನ್ನು ಕದ್ದಿದ್ದಾರೆ. ಸದಲಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT