ಮಂಗಳವಾರ, ಸೆಪ್ಟೆಂಬರ್ 17, 2019
24 °C
ಮಾದರಿಯಾದ ಬಸವನಾಳಗಡ್ಡೆಯ ಗೋಪಾಲ

ಖುಷಿ ನೀಡಿದ ಗುಲಾಬಿ ಕೃಷಿ

Published:
Updated:
Prajavani

ಚಿಕ್ಕೋಡಿ: ‘ಆಕಳುಗಳಿಗೆ ನಾವು ಟೈಂ ಟೈಮ್‌ಗೆ ಮೇವು, ನೀರು ನೀಡಿದರೆ ಅವು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುತ್ತವೆಯೋ ಹಾಗೆಯೇ ಗುಲಾಬಿ ಕೃಷಿ ಕೂಡ. ಗುಲಾಬಿ ಗಿಡಗಳಿಗೆ ನಿತ್ಯವೂ ಆರೈಕೆ ಮಾಡಿದರೆ ಹೆಚ್ಚಿನ ಹೂವು ನೀಡಿ ಕೃಷಿಕನಿಗೆ ಖುಷಿ ನೀಡುತ್ತವೆ!’.

ತಾಲ್ಲೂಕಿನ ಬಸವನಾಳಗಡ್ಡೆಯ ಗುಲಾಬಿ ಕೃಷಿಕ ಗೋಪಾಲ ಕೋರೆ ಹೇಳುವ ಮಾತಿದು.

‘10 ಗುಂಟೆ ಮಸಾರಿ ಜಮೀನಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಗುಲಾಬಿ ಸಸಿ ನೆಟ್ಟು ಪೋಷಣೆ ಮಾಡಿರುವ ಅವರು ಇಂದು ಪ್ರತಿ ಎರಡು ದಿನಕ್ಕೊಮ್ಮೆ ಖರ್ಚು ವೆಚ್ಚ ಕಳೆದು ಕನಿಷ್ಠ ₹‌‌ 200 ಆದಾಯ ಗಳಿಸುತ್ತಿದ್ದಾರೆ. ಇದು ಅವರ ಕುಟುಂಬ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಸಹಕಾರಿಯಾಗಿದೆ.

‘ಕಬ್ಬು, ಗೋವಿನಜೋಳ ಮೊದಲಾದ ಬೆಳೆಗಳಿಂದ ವರ್ಷಕ್ಕೊಮ್ಮೆ ಹಣ ದೊರೆಯುತ್ತದೆ. ಆದರೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೌಟುಂಬಿಕ ನಿರ್ವಹಣೆ ಮತ್ತು ಕೃಷಿ ಉತ್ಪಾದನೆಗಾಗಿ ಆಗಾಗ ಹಣ ಬೇಕಾಗುತ್ತದೆ. ಅದಕ್ಕೆ ಪುಷ್ಪ ಕೃಷಿ ಉತ್ತಮ ದಾರಿಯಾಗಿದೆ. ಗುಲಾಬಿ ಕೃಷಿಯಿಂದ ವಾರಕ್ಕೆ ಎರಡು ಬಾರಿ ಹಣ ಕೈ ಸೇರುತ್ತದೆ. ಇದರಿಂದ ಕುಟುಂಬ ನಿರ್ವಹಣೆ ಜೊತೆಗೆ ಇತರೆ ಕೃಷಿ ಉತ್ಪಾದನೆಗೂ ಖರ್ಚು ಮಾಡಬಹುದಾಗಿದೆ. ಇದು ಕೃಷಿಕನ ಆರ್ಥಿಕ ಸ್ವಾವಲಂಬನೆ ಸಾಧಿಸಲು ಪೂರಕವಾಗಿದೆ’ ಎಂಬುದು ಗೋಪಾಲ ಅವರ ಅನುಭವದ ಮಾತು.

ಎರಡು ವರ್ಷಗಳ ಹಿಂದೆ 4 ಅಡಿ ಅಗಲ ಮತ್ತು 2.5 ಅಡಿ ಉದ್ದದ ಅಂತರದಲ್ಲಿ ಜಂಗಲಿ ಗುಲಾಬಿ ಸಸಿಗಳನ್ನು ನೆಟ್ಟಿದ್ದ ಕೋರೆ ಅವರು, 3 ತಿಂಗಳ ನಂತರ ಗ್ಯಾಲೆಸ್ಟ್ರಾ ತಳಿಯ ಗುಲಾಬಿ ಗಿಡಗಳನ್ನು ಕಸಿ ಮಾಡಿಸಿದ್ದಾರೆ. ಇದೀಗ 10 ಗುಂಟೆ ಗುಲಾಬಿ ತೋಟದಿಂದ ಪ್ರತಿ 2 ದಿನಕ್ಕೊಮ್ಮೆ 300ರಿಂದ 500 ಹೂವುಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಚಿಕ್ಕೋಡಿ, ನಿಪ್ಪಾಣಿ, ಕೊಲ್ಹಾಪುರ, ಮೀರಜ್‌ ಮೊದಲಾದ ಕಡೆಗಳಿಗೆ ಹೂವುಗಳ ಮಾರಾಟ ಮಾಡುತ್ತಾರೆ. ಗುಲಾಬಿ ಹೂವುವೊಂದಕ್ಕೆ ಸದ್ಯ ₹2ರಿಂದ ₹3 ದೊರೆಯುತ್ತದೆ ಎಂದು ತಿಳಿಸಿದರು.

ಗುಲಾಬಿ ಕೃಷಿಯನ್ನು ಬಹಳ ಜಾಗರೂಕತೆಯಿಂದ ಮಾಡಬೇಕು. ನಿತ್ಯವೂ ನಿಗಾ ವಹಿಸಬೇಕು. ‘ತ್ರಿಪ್ಸ್‌’ ಎಂಬ ಮುರುಟು ರೋಗ ತಗುಲಿದರೆ ಇಡೀ ತೋಟವೇ ಹಾಳಾಗುತ್ತದೆ. ಹೀಗಾಗಿ, ಸಕಾಲದಲ್ಲಿ ಸೂಕ್ತ ಔಷಧೋಪಚಾರ ನೀಡಬೇಕಾಗುತ್ತದೆ. ಅಲ್ಲದೇ ಕಾಲಕಾಲಕ್ಕೆ ಟಾನಿಕ್‌, ಕೊಟ್ಟಿಗೆ ಗೊಬ್ಬರ ನೀಡಬೇಕು. ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ನೀರು ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

Post Comments (+)