ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಜಿಲ್ಲೆ– ಉತ್ಪನ್ನ: ಕರಾರುಗಳೆ ಅಡ್ಡಿ, ಹಲವು ತೊಡಕು

ತೆವಳುತ್ತಿರುವ ಯೋಜನೆ ಅನುಷ್ಠಾನ ಪ್ರಕ್ರಿಯೆ
Last Updated 9 ಮಾರ್ಚ್ 2022, 4:48 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರದ ಮಹತ್ವಾಕಾಂಕ್ಷಿ ‘ಆತ್ಮನಿರ್ಭರ ಭಾರತ’ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್‌ಎಂಇ)ಯಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಉಪಕ್ರಮಕ್ಕೆ ಜಿಲ್ಲೆಯಲ್ಲಿ ಬೆಲ್ಲವನ್ನು ಆಯ್ಕೆ ಮಾಡಲಾಗಿದೆ. ಆದರೆ, ಅನುಷ್ಠಾನದಲ್ಲಿ ಆಶಾದಾಯಕ ಬೆಳವಣಿಗೆಗಳು ನಡೆದಿಲ್ಲ.

ಸಾಮಾನ್ಯ ಮೂಲಸೌಕರ್ಯ, ಬ್ರ್ಯಾಂಡಿಂಗ್‌ ಮತ್ತು ಮಾರುಕಟ್ಟೆ ಬೆಂಬಲ ನೀಡುವ ‍ಪ್ರಮುಖ ಉದ್ದೇಶ ಯೋಜನೆಯದ್ದು ಎಂದು ಸರ್ಕಾರ ತಿಳಿಸಿದೆ. ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳು, ಎಫ್‌ಪಿಒಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿಗಳ ಸಾಲ ಸೌಲಭ್ಯ ಹೆಚ್ಚಿಸುವುದು, ಅಸಂಘಟಿತ ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ಕೌಶಲ ತರಬೇತಿ, ಉದ್ಯಮಶೀಲತೆ ಅಭಿವೃದ್ಧಿ, ಮಾರುಕಟ್ಟೆಗೆ ಬೆಂಬಲ, ಉನ್ನತೀಕರಣಕ್ಕೆ ಬಂಡವಾಳ ಹೂಡಿಕೆ, ಆಹಾರ ಸುರಕ್ಷತೆಗೆ ತಾಂತ್ರಿಕ ಜ್ಞಾನ ಮತ್ತು ಗುಣಮಟ್ಟ ಸುಧಾರಣೆಗಳ ಮೂಲಕ ಸಾಮರ್ಥ್ಯಾಭಿವೃದ್ದಿ ಆಶಯವನ್ನು ಹೊಂದಲಾಗಿದೆ.

ಪ್ರಚಾರದ ಕೊರತೆ

ಯೋಜನೆಯಲ್ಲಿ ನೆರವು ಪಡೆಯಲು ಪಿಎಂಎಫ್‌ಎಂಇ ಪೋರ್ಟಲ್‌ನಲ್ಲಿ (https://pmfme.mofpi.gov.in) ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಪ್ರಚಾರದ ಕೊರತೆ ಮೊದಲಾದ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಯೋಜನೆಯು ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ. ರೈತರಿಂದ ದೊಡ್ಡ ಪ್ರಮಾಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಬ್ಯಾಂಕ್‌ಗಳಿಂದ ಸಾಲ ಪಡೆಯಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಯೋಜನೆ ಘೋಷಿಸಿದ ಸರ್ಕಾರ, ಲಾಭವು ಸುಲಭವಾಗಿ ಸಿಗುವಂತೆ ಮಾಡುವಲ್ಲಿ ವಿಫಲವಾಗಿದೆ ಎಂಬ ಅಸಮಾಧಾನದ ಮಾತುಗಳು ಕೃಷಿಕರ ವಲಯದಿಂದ ಕೇಳಿಬರುತ್ತಿವೆ.

ಕಬ್ಬನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಸೀಮೆಯಾದ ಈ ಜಿಲ್ಲೆಯಲ್ಲಿ ಬೆಳಗಾವಿ, ಗೋಕಾಕ, ಮೂಡಲಗಿ ತಾಲ್ಲೂಕುಗಳಲ್ಲಿ ಬೆಲ್ಲ ತಯಾರಿಸುವುದು ಹೆಚ್ಚಾಗಿ ಕಂಡುಬರುತ್ತದೆ.

ಯೋಜನೆಯಲ್ಲಿ ಈವರೆಗೆ 24 ಅರ್ಜಿಗಳಷ್ಟೆ ಸಲ್ಲಿಕೆಯಾಗಿದೆ. ಅವುಗಳಲ್ಲಿ 12 ಮಂದಿಗೆ ಬ್ಯಾಂಕ್‌ಗಳಿಂದ ಸಾಲ ಮಂಜೂರಾಗಿದೆ. 12 ಅರ್ಜಿಗಳು ಪ್ರಕ್ರಿಯೆಯ ಹಂತದಲ್ಲಿವೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

24 ಅರ್ಜಿಗಳಷ್ಟೆ ಸಲ್ಲಿಕೆ

‘ಒಡಿಒಪಿ (ಒಂದು ಜಿಲ್ಲೆ ಒಂದು ಉತ್ಪನ್ನ) ಯೋಜನೆಯಲ್ಲಿ ಬೆಲ್ಲ ತಯಾರಿಕೆ ಘಟಕಕ್ಕೆ ಗರಿಷ್ಠ ₹ 10ಲಕ್ಷದವರೆಗೆ ಸಾಲ ಪಡೆಯಲು ಅವಕಾಶವಿದೆ. ಇದರಲ್ಲಿ ಕೇಂದ್ರದಿಂದ ಶೇ 35 ಮತ್ತು ರಾಜ್ಯದಿಂದ ಶೇ 15ರಷ್ಟು ಸೇರಿಸಿ ಶೇ 50ರಷ್ಟು ಸಹಾಯಧನ ದೊರೆಯುತ್ತದೆ. ನೇರವಾಗಿ ಬ್ಯಾಂಕ್‌ಗೆ ಕೊಡಲಾಗುತ್ತದೆ. ₹50ಸಾವಿರದಿಂದ ₹ 1 ಲಕ್ಷದವರೆಗೆ ರೈತರು ಕಟ್ಟಬೇಕಾಗುತ್ತದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶಿವಗಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಾಗದ ಅನ್ಯಕ್ರಾಂತ (ಎನ್‌ಎ) ಆಗಿರಬೇಕು ಎಂದು ಬ್ಯಾಂಕ್‌ನವರು ನಿಯಮ ಮಾಡಿದ್ದಾರೆ. ಇದು ತೊಡಕಾಗಿದೆ. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ರೈತರು ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಒಡಿಒಪಿಯೇತರ ಯೋಜನೆಗೂ ಆದ್ಯತೆ ಕೊಡಲಾಗುತ್ತಿದೆ. ಸಂಸ್ಕರಣೆ ಘಟಕಗಳ ವಿಸ್ತರಣೆ, ಹೆಚ್ಚುವರಿ ಯಂತ್ರಗಳ ಅಳವಡಿಕೆ ಮೊದಲಾದವುಗಳಿಗೆ ನೆರವು ಪಡೆಯಬಹುದು’ ಎನ್ನುತ್ತಾರೆ ಅವರು.

ಹೊರಗುಳಿದಿದ್ದಾರೆ

ಸವದತ್ತಿ: ಸಾವಯವ ಕೃಷಿ ಪದ್ಧತಿ ಅಳವಡಿಕೆ ಹೊಂದಿದ್ದು, ರೈತರ ಹೊಲಗಳಲ್ಲಿನ 6 ಗುಂಟೆ ಜಾಗ ಎನ್‍ಎ ಆಗಿರುವುದು ಕಡ್ಡಾಯ ಎಂಬ ನಿಯಮದಿಂದಾಗಿ ಒಡಿಒಪಿ ಯೋಜನೆಯಿಂದ ರೈತರು ಹೊರಗುಳಿದಿದ್ದಾರೆ. 6 ಅರ್ಜಿಗಳಷ್ಟೆ ಸಲ್ಲಿಕೆಯಾಗಿವೆ.

ಒಡಿಒಪಿಯೇತರ ಯೋಜನೆಯಲ್ಲಿ ಚಕ್ಕುಲಿ, ಖಾರದಪುಡಿ, ಹಿಟ್ಟು, ಬ್ರೆಡ್ ಫ್ಯಾಕ್ಟರಿ, ಶಾವಗಿ, ರೊಟ್ಟಿ ಮೊದಲಾದ ಉತ್ಪನ್ನಗಳ ಘಟಕ ಸ್ಥಾಪನೆಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ‘ಆತ್ಮ’ ಯೋಜನಾಧಿಕಾರಿ ಬಸವರಾಜ ಬಿರುಕಲ್ ತಿಳಿಸಿದರು.

ಕಾರ್ಖಾನೆಗಳೆ ಹೆಚ್ಚಿವೆ

‘ಒಡಿಒಪಿ ಯೋಜನೆ ಪ್ರಚಾರವಿಲ್ಲದೆ ಸೊರಗಿದೆ. ಸಾಕಷ್ಟು ಸಕ್ಕರೆ ಕಾರ್ಖಾನೆಗಳಿರುವುದರಿಂದ ರೈತರು ಹಿಂದಿನಂತೆ ಬೆಲ್ಲ ತಯಾರಿಕೆಗೆ ಉತ್ಸಾಹ ತೋರುತ್ತಿಲ್ಲ; ಆಲೆಮನೆಗಳನ್ನು ಅವಲಂಬಿಸಿಲ್ಲ. ಮಾನವ ಸಂಪನ್ಮೂಲದ ಕೊರತೆ ಮತ್ತು ಉತ್ಪಾದನಾ ವೆಚ್ಚ ಏರಿಕೆ ಕಾರಣ ರೈತರು ಬೆಲ್ಲ ತಯಾರಿಸಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಮುನವಳ್ಳಿಯ ಕೃಷಿ‍ಪ್ರೇಮಿ ಕಿರಣ ಯಲಿಗಾರ.

‘ಯೋಜನೆಯ ಪ್ರಚಾರ ತೀವ್ರಗೊಳಿಸಬೇಕು. ಸಾಲ ಪಡೆಯುವಲ್ಲಿ ಬ್ಯಾಂಕ್‌ಗಳ ಕಿರಿಕಿರಿ ತಪ್ಪಿಸಿ ನಿರುದ್ಯೋಗಿ ಯುವಕರಿಗೆ ನೆರವಾಗಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ಕರಾರು ಕಿರಿಕಿರಿ; ಮುಂದೆ ಬಾರದ ರೈತರು

ಚನ್ನಮ್ಮನ ಕಿತ್ತೂರು: ‘ಒಡಿಒಪಿ ಯೋಜನೆಯಲ್ಲಿ ಆಲೆಮನೆ ಹಾಕಲು ತಾಲ್ಲೂಕಿನಲ್ಲಿ ಯಾರೂ ಮುಂದೆ ಬಂದಿಲ್ಲ. ಹಣಕಾಸು ಸಂಸ್ಥೆಗಳ ಕರಾರು ಇದಕ್ಕೆ ಪ್ರಮುಖ ಕಾರಣವಾಗಿದೆ’ ಎಂಬ ದೂರುಗಳು ರೈತರಿಂದ ಕೇಳಿಬರುತ್ತಿವೆ.

‘ಸಾವಯವ ಬೆಲ್ಲ ತಯಾರಿಕೆ ಘಟಕ ಸ್ಥಾಪಿಸಲು 10 ಗುಂಟೆ ಅಂದಾಜು ಜಮೀನು ಬೇಕು. ಸರ್ಕಾರದ ನೆರವು ಪಡೆಯಲು ಕೃಷಿ ಜಮೀನನ್ನು ಎನ್‌ಎ ಮಾಡಿಕೊಳ್ಳಬೇಕು. ಅಂದರೆ ಮಾತ್ರ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತವೆ. ಪರಿವರ್ತನೆಯಾಗದ ಜಮೀನಿಗೆ ಬ್ಯಾಂಕ್ ನೆರವು ನೀಡುತ್ತಿಲ್ಲ. ಈ ಕರಾರಿನಿಂದಾಗಿ ಯೋಜನೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ’ ಎನ್ನುತ್ತಾರೆ ರೈತರು.

ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ!

ನೇಸರಗಿ: ಯೋಜನೆಯಲ್ಲಿ ಕಿರು ಸಂಸ್ಕರಣಾ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಸಹಾಯಧನ ಪಡೆಯಬಹುದು. ಹೆಚ್ಚಿನವರು ಆಸಕ್ತಿ ತೋರಿಸುತ್ತಿಲ್ಲ. ಕನಿಷ್ಠ ವಿದ್ಯಾರ್ಹತೆ (8ನೇ ತರಗತಿ) ಕಡ್ಡಾಯ ಮಾಡಿದ್ದರಿಂದ ಅವಿದ್ಯಾವಂತರು ಯೋಜನೆಯಿಂದ ಹೊರಗುಳಿಯುತ್ತಾರೆ. ಬಹಳ ಮಂದಿಗೆ ಯೋಜನೆಯ ಮಾಹಿತಿ ಇಲ್ಲ.

ನೇಸರಗಿ ವ್ಯಾಪ್ತಿಯಲ್ಲಿ ಸಾವಯವ ಬೆಲ್ಲ ತಯಾರಿಕೆಗೆ ಗದ್ದಿಕರುವಿನಕೊಪ್ಪದ ರೈತ ಶ್ರೀಕಾಂತ ಹುಬ್ಬಳಿ, ರೊಟ್ಟಿ ಸಿದ್ಧಪಡಿಸುವ ಯಂತ್ರ ಖರೀದಿಗೆ ಲಕ್ಕುಂಡಿಯ ಬಿ.ಎಸ್. ಚಿಕ್ಕಮಠ, ವೀರಭದ್ರಪ್ಪ ಕೃಷಿ ಇಲಾಖೆಯ ದೊಡವಾಡ ಕಚೇರಿಗೆ ನೆರವು ಕೋರಿ ಅರ್ಜಿ ಕೊಟ್ಟಿದ್ದಾರೆ. ಅವಿನ್ನೂ ಪರಿಶೀಲನೆ ಹಂತದಲ್ಲೇ ಇವೆ ಎಂದು ಮೂಲಗಳು ತಿಳಿಸಿವೆ.

ಆಲೆಮನೆಗೆ ಹಲವು ಸಮಸ್ಯೆ

ಮೂಡಲಗಿ: ನಾಲ್ಕು ದಶಕಗಳ ಪೂರ್ವದಲ್ಲಿ ಮೂಡಲಗಿ, ಸುತ್ತಮುತ್ತಲಿನ ಗ್ರಾಮಗಳಾದ ಕಲ್ಲೋಳಿ, ನಾಗನೂರ, ಗುರ್ಲಾಪುರ, ರಂಗಾಪುರ, ಕಮಲದಿನ್ನಿ, ಖಾನಟ್ಟಿ, ಮುನ್ಯಾಳ, ರಾಜಾಪುರ ಸೇರಿದಂತೆ ಹಲವೆಡೆ ಆಲೆಮನೆಗಳು (ಗಾಣದ ಮನೆಗಳು) ಪ್ರತಿ ತೋಟಕ್ಕೊಂದರಂತೆ ಇದ್ದವು.

ಕಬ್ಬು ಬೆಳೆಯುವರರೆಲ್ಲ ಆಲೆಮನೆ ಮಾಡಿ ವರ್ಷದ ಹಲವಾರು ತಿಂಗಳು ಬೆಲ್ಲ ತಯಾರಿಸುತ್ತಿದ್ದರು. ಕಮಲದಿನ್ನಿ ಗ್ರಾಮವೊಂದರಲ್ಲಿಯೇ 20ಕ್ಕೂ ಅಧಿಕ ಆಲೆಮನೆಗಳಿದ್ದವು. ಮೂಡಲಗಿಯಲ್ಲಿ 30ಕ್ಕೂ ಹೆಚ್ಚಿದ್ದವು. ಆದರೆ, ಇಂದು ಊರಿಗೆ ಒಂದು ಇಲ್ಲವೆ ಎರಡಷ್ಟೆ ಉಳಿದಿವೆ. ಉಳಿದವು ದನಕರುಗಳನ್ನು ಕಟ್ಟುವ ಶೆಡ್‌ಗಳಾಗಿವೆ; ಕೃಷಿ ಪರಿಕರಗಳನ್ನು ಇಡುವ ಜಾಗವಾಗಿ ಬದಲಾಗಿವೆ.

‘ಪ್ರಸ್ತುತ ಆಲೆಮನೆ ನಡೆಸಲು ಕೆಲಸಗಾರರ ಸಮಸ್ಯೆ ಇದೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿದ್ದರಿಂದ ನಿರ್ವಹಣೆಯೂ ಕಷ್ಟ. ಕಾರ್ಖಾನೆಗೆ ಕಬ್ಬು ಕೊಡುವುದಕ್ಕಿಂತ ಬೆಲ್ಲ ಮಾಡುವುದರಲ್ಲಿ ಲಾಭವಿದೆ’ ಎನ್ನುತ್ತಾರೆ ಮೂಡಲಗಿಯ ರೈತ ತಿಪ್ಪಣ್ಣ ಮಗದುಮ್.

ಗುರ್ಲಾಪುರದ ನೇಮಗೌಡರ, ಮೂಡಲಗಿಯ ಮಗದುಮ್ ಮತ್ತು ಹಂದಿಗುಂದ, ಮುನ್ಯಾಳದ ಸೂರಣ್ಣವರ ಮತ್ತು ಸಂಕಣ್ಣವರ, ರಾಜಾಪುರದ ವಿಠ್ಠಲ ಪಾಟೀಲ, ರಾಮಚಂದ್ರ ಪಾಟೀಲ, ಕೆಂಪಣ್ಣ ಜೀವನಿ, ವಿಠ್ಠಲ ಕಟ್ಟಿಕಾರ, ಸಿದ್ಲಿಂಗ ಕಮತಿ, ರಾಜು ಪವಾರ ಆಲೆಮನೆ ನಡೆಸುತ್ತಿದ್ದಾರೆ. ಕೆಲವರು ಸಾವಯವ ಬೆಲ್ಲ ತಯಾರಿಕೆಯಲ್ಲೂ ಯಶಸ್ಸಿಯಾಗಿದ್ದಾರೆ. ಬಹುತೇಕರು ಒಡಿಒಪಿ ಪ್ರಯೋಜನ ಪಡೆಯಲು ಮುಂದಾಗಿಲ್ಲ.

‘20 ವರ್ಷಗಳಿಂದ ಆಲೆಮನೆ ಇದೆ. 20 ಎಕರೆ ಕಬ್ಬಿನ ಬೆಳೆಯನ್ನು ಬೆಲ್ಲ ಮಾಡಲು ಬಳಸುತ್ತೇನೆ. ಸಕ್ಕರೆ ಕಾರ್ಖಾನೆಗೆ ಕಳುಹಿಸುವುದಿಲ್ಲ. ಸ್ವಾವಲಂಬಿಯಾಗಿದ್ದು, 50ರಿಂದ 60 ಜನರಿಗೆ ಕೆಲಸ ಕೊಡುತ್ತಿದ್ದೇನೆ’ ಎಂದು ರಾಜಾಪುರದ ವಿಠ್ಠಲ ಪಾಟೀಲ ಹೇಳಿದರು.

***

ಜಾಗೃತಿ ಮೂಡಿಸಲಾಗುತ್ತಿದೆ

ಉತ್ಪನ್ನದ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಯೋಜನೆ ಸಹಕಾರಿಯಾಗಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ.

–ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ

***

ಕೆಲಸಗಾರರ ಕೊರತೆ

ರಾಜಾಪುರದಲ್ಲಿ 30ಕ್ಕೂ ಹೆಚ್ಚು ಆಲೆಮನೆಗಳು (ಗಾಣದ ಮನೆ) ಇದ್ದವು. ಈಗ ಕೆಲಸಗಾರರ ಕೊರತೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವುದು ಸುಲಭವಾವಾಗಿದೆ. ಹೀಗಾಗಿ ಆಲೆಮನೆಗಳು ಮುಚ್ಚುತ್ತಿವೆ.

–ರಾಜು ಬೈರುಗೊಳ, ಪ್ರಗತಿಪರ ರೈತ, ರಾಜಾಪುರ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ಬಸವರಾಜ ಶಿರಸಂಗಿ, ಚ.ಯ. ಮೆಣಶಿನಕಾಯಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT