‘ಮಕ್ಕಳಿಗೆ ಆದರ್ಶಗಳನ್ನು ತಿಳಿಸಿ’

7
ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

‘ಮಕ್ಕಳಿಗೆ ಆದರ್ಶಗಳನ್ನು ತಿಳಿಸಿ’

Published:
Updated:
Prajavani

ಬೆಳಗಾವಿ: ಶಿಕ್ಷಕಿಯರು ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ದೇಶಭಕ್ತರು, ವೈಚಾರಿಕ ಹಾಗೂ ಸಮಾಜ ಚಿಂತಕರ ಆದರ್ಶಗಳನ್ನು ತಿಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆ, ಅಂಧ ಶ್ರದ್ಧೆಗಳನ್ನು ಹೋಗಲಾಡಿಸಬೇಕು’ ಎಂದು ಡಿಡಿಪಿಐ ಎ.ಬಿ. ಪುಂಡಲೀಕ ಹೇಳಿದರು.

ಬಸವ ಭೀಮ ಸೇನೆಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನ ಆಚರಣೆ ಮತ್ತು ಅವರ ಸ್ಮರಣಾರ್ಥ ‘ಅಕ್ಷರ ತಾಯಿ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಶಿಕ್ಷಕಿಯರು ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಬಸವ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರಂತಹ ಸಾಮಾಜಿಕ ಪರಿವರ್ತನೆಗೆ ಹೊಸ ಕ್ರಾಂತಿ ಮಾಡಿರುವವರ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬೇಕು. ಮೇಲು– ಕೀಳು ಭಾವನೆಗಳನ್ನು ಹೋಗಲಾಡಿಸಬೇಕು. ಮಾನವೀಯ ಸಮಾಜವನ್ನಾಗಿ ಪರಿವರ್ತಿಸಬೇಕು’ ಎಂದು ತಿಳಿಸಿದರು.

‘ಶಿಕ್ಷಕಿಯರ ಸೇವೆ ಗುರುತಿಸಿ, ಅವರಿಗೆ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವುದು ಅಭಿನಂದನಾರ್ಹ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಮಾತನಾಡಿ, ‘ನಮಗೆ ಅಕ್ಷರ ಕಲಿಸಿದವರು, ಬದುಕು ಕಲ್ಪಿಸಿಕೊಟ್ಟವರನ್ನು ಮರೆತು, ಅವರನ್ನು ಹಿಂಸಿಸಿದವರನ್ನು ವೈಭವೀಕರಿಸಲಾಗುತ್ತಿದೆ. ಈ ವೈಭವೀಕರಣ ಇನ್ನೆಷ್ಟು ದಿನ?’ ಎಂದು ಕೇಳಿದರು.

‘ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಯುವ ಅವಕಾಶವೇ ಇಲ್ಲದ ಕಾಲಮಾನದಲ್ಲಿ ಸಾವಿತ್ರಿಬಾಯಿ ಅವರು ತಾವು ಅಕ್ಷರ ಕಲಿಯುವದಲ್ಲದೇ ಸ್ವತಃ ಶಾಲೆ ಪ್ರಾರಂಭಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು’ ಎಂದು ಸ್ಮರಿಸಿದರು.

‘ಮಾನವ ಬಂಧುತ್ವ ವೇದಿಕೆಯಿಂದ ರಾಜ್ಯದಾದ್ಯಂತ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಿ, ಅವರನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಈ ಜಾಗೃತಿ ಆಂದೋಲನಕ್ಕೆ ಸರ್ಕಾರವೂ ಕೈಜೋಡಿಸಬೇಕು. ಜ.3ರಂದು ಶಿಕ್ಷಕಿಯರ ದಿನವನ್ನಾಗಿ ಆಚರಿಸುವ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ, ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಮಾತನಾಡಿದರು.

ಶಿಕ್ಷಕಿಯರಾದ ಗಂಗವ್ವ ನಾಯ್ಕರ್, ಪ್ರಭಾವತಿ ಹಾಲೇನವರ, ಸುಲೋಚನಾ ಪೂಜಾರಿ, ಗೌರವ್ವ ‍ಪೋಡಿ, ಗಿರಿಜಾ ಬೆಳಮರಿ, ಉಜ್ವಲಾ ತಳವಾರ, ಸುಶೀಲಾ ಗುರವ, ಸುನಂದಾ ಪಟ್ಟಣಶೆಟ್ಟಿ, ಇಂದುಮತಿ ಪಾಟೀಲ, ಪಲ್ಲವಿ ಕುಸುಗಲ್, ವಿಮಲಾ ನಾಯಕ, ಮಂಗಳಗೌರಿ ಗಡ್ಡಿ ಅವರಿಗೆ ‘ಅಕ್ಷರತಾಯಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಯಲ್ಲಪ್ಪ ಹುದಲಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !