ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ವಿಚಾರಧಾರೆಗಳು ಪಾಲನೆಯಾಗಲಿ: ಪ್ರೊ.ಸಿ.ಎಂ. ತ್ಯಾಗರಾಜ

Last Updated 6 ನವೆಂಬರ್ 2019, 14:08 IST
ಅಕ್ಷರ ಗಾತ್ರ

ಬೆಳಗಾವಿ: ‘ವ್ಯವಸ್ಥೆ ಸರಿಪಡಿಸಲು ಗಾಂಧೀಜಿಯ ದೂರದೃಷ್ಟಿಯ ಜೊತೆಗೆ ಮೊದಲು ತಾನು ಬದಲಾಗಬೇಕು, ನಂತರ ಸುತ್ತಲಿನ ಪರಿಸರ ಬದಲಾಯಿಸಬೇಕು ಎನ್ನುವ ಮನೋಭಾವ ಎಲ್ಲರಲ್ಲೂ ಇರಬೇಕು. ಮಾನವೀಯತೆ ಮತ್ತು ನಂಬಿಕೆಯೂ ಬೇಕು’ ಎಂದು ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧೀಜಿ 1920ರ ನಂತರದಲ್ಲಿ ಕನ್ನಡಕ ಹಾಕಿಕೊಂಡಿದ್ದನ್ನು ಛಾಯಾಚಿತ್ರಗಳಲ್ಲಿ ಗಮನಿಸಬಹುದು. ಅವರ ಕನ್ನಡಕವು 3 ಬಗೆಯ ದೃಷ್ಟಿಗಳನ್ನು (ಸಮೀಪ, ದೂರ ಹಾಗೂ ಒಳ) ಸೂಚಿಸುತ್ತದೆ. ಅವರು ತಮ್ಮ ಕನ್ನಡಕದ ಮೂಲಕ ಇತರರಿಗೆ ತಂಪನ್ನೆರದಿದ್ದಾರೆ. ಹಾಗಾಗಿ ಅದು ಜನತೆಗೆ ‘ಗಾಗಲ್’ ಆಗಿ ಪರಿವರ್ತನೆಯಾಗಿದೆ ಎಂದರೆ ತಪ್ಪಿಲ್ಲ. ಅಹಿಂಸೆ, ಸತ್ಯ ಮೊದಲಾದವುಗಳ ಬಗ್ಗೆ ಹೇಳಿದ ಅವರ ಸಮೀಪ ದೃಷ್ಟಿ, ಸರ್ವ ಧರ್ಮ ಸಮನ್ವಯತೆ, ಸ್ವದೇಶಿ ಚಿಂತನೆ ಕುರಿತ ದೂರದೃಷ್ಟಿ ಹಾಗೂ ಸಂಯಮದ ಬಗೆಗಿನ ಒಳದೃಷ್ಟಿಯನ್ನು ನಾವು ದುರ್ಬೀನು ಹಾಕಿ ನೋಡಲೇಬೇಕಾಗಿದೆ’ ಎಂದರು.

‘ಗಾಂಧೀಜಿ ಸ್ವರ್ಗಸ್ಥರಾದಾಗ ಮೌಂಟ್‌ ಬ್ಯಾಟನ್ ನೆಲದ ಮೇಲೆ ಕುಳಿತಿರುವ ಛಾಯಾಚಿತ್ರ ಹಾಗೂ ವಿಶ್ವಸಂಸ್ಥೆ ಎಲ್ಲ ಧ್ವಜಗಳನ್ನು ಕೆಳಗಿಳಿಸಿದ್ದನ್ನು ನೋಡಿದರೆ ಅವರು ಎಂತಹ ಮಹಾನ್‌ ವ್ಯಕ್ತಿ ಎನ್ನುವುದನ್ನು ತಿಳಿಸುತ್ತದೆ’ ಎಂದರು.

‘ಇಂದಿನ ಜಾಗತೀಕರಣದ ಯುಗದಲ್ಲಿ ಗೂಗಲ್ ಸಾರ್ವಭೌಮತ್ವ ಹೊಂದಿದೆ. ತಾಂತ್ರಿಕ ಏಕಸಾಮ್ಯ ಗಳಿಸುವ ಪ್ರಯತ್ನದಲ್ಲಿದೆ. ಗೂಗಲ್ ಸಮಯವನ್ನು ಗೆದ್ದಿರಬಹುದು. ಆದರೆ ಜಗತ್ತನ್ನು ಗೆಲ್ಲುವುದು ಸಾಧ್ಯವಿಲ್ಲ. ಶಾಂತಿ, ಸಮಾಧಾನ, ಪ್ರೀತಿ, ನಂಬಿಕೆ, ವಿಶ್ವಾಸಗಳನ್ನು ಗೂಗಲ್‌ನಂಥ ತಂತ್ರಜ್ಞಾನಗಳಿಂದ ಕೊಡಲು ಸಾಧ್ಯವಿಲ್ಲ. ಅವುಗಳನ್ನು ಪಡೆಯಲು ನಮಗೆ ಗಾಂಧಿಜಿ ಅವರ ವಿಚಾರಧಾರೆಗಳು ಬೇಕು. ಅವುಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ಮನುಷ್ಯನ ಸಂವೇದನಶೀಲತೆಗೆ ಮನೋನಿಗ್ರಹ ಬಹಳ ಪ್ರಮುಖವಾದುದು. ಮನೋನಿಗ್ರಹ ಮಾಡಿಕೊಳ್ಳದವರಿಂದ ಬಹು ದೊಡ್ಡ ಅಚಾತುರ್ಯಗಳು ನಡೆದು ಹೋಗುತ್ತವೆ. ಅಂಥವುಗಳಲ್ಲಿ ಗಾಂಧೀಜಿ ಹತ್ಯೆಯೂ ಒಂದು’ ಎಂದು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ.ಎಸ್.ಎಂ. ಗಂಗಾಧರಯ್ಯ ಹೇಳಿದರು.

‘ಜ್ಞಾನ ಮತ್ತು ಕರ್ಮಯೋಗಗಳ ಕುರಿತು ಗಾಂಧಿಜಿ ತಿಳಿಸಿದ್ದನ್ನು ಪಠ್ಯಗಳಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಆಲೋಚಿಸಬೇಕು’ ಎಂದು ತಿಳಿಸಿದರು.

ಸಂಸ್ಥೆಯ ಸಂಯೋಜಕಿ ಡಾ.ಶೋಭಾ ನಾಯಕ ಮಾತನಾಡಿದರು. ಡಾ.ನಾಗರತ್ನಾ ಪರಾಂಡೆ, ಡಾ.ಗಜಾನನ ನಾಯ್ಕ, ಡಾ.ಮಹೇಶ ಗಾಜಪ್ಪನವರ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ.ಪಿ. ನಾಗರಾಜ, ಡಾ.ಅಶೋಕ ಮುಧೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT