ಭಾನುವಾರ, ಫೆಬ್ರವರಿ 28, 2021
31 °C

ಪತ್ರಕರ್ತ ರಾಘವೇಂದ್ರ ಜೋಶಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕನ್ನಡ ಪರ ಹೋರಾಟಗಾರ ಮತ್ತು ಪತ್ರಕರ್ತ ರಾಘವೇಂದ್ರ ಜೋಶಿ (78) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಬೆಳಿಗ್ಗೆ ವಾಯುವಿಹಾರ ಮುಗಿಸಿ ಇಲ್ಲಿನ ಭಾಗ್ಯನಗರ ಏಳನೇ ಕ್ರಾಸ್‌ನಲ್ಲಿರುವ ಮನೆಗೆ ಮರಳಿದ ಅವರು ಕುಸಿದು ಬಿದ್ದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗಡಿ ನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಸಕ್ರಿಯವಾಗಿ ತೊಡಗಿದ್ದರು. ನಾಡು–ನುಡಿ, ನೆಲ–ಜಲದ ವಿಷಯದಲ್ಲಿ ಧಕ್ಕೆಯಾದಾಗ ಹೋರಾಟದಲ್ಲೂ ಪಾಲ್ಗೊಳ್ಳುತ್ತಿದ್ದರು. ಸಾಹಿತ್ಯ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದರು. ತಮ್ಮ ನಾಡೋಜ ಪ್ರತಿಷ್ಠಾನದ ಮೂಲಕ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ‘ಸಮ್ಮಾನ್‌’ ಹೆಸರಿನಲ್ಲಿ ಪ್ರಶಸ್ತಿಗಳನ್ನು ‍ಪ್ರದಾನ ಮಾಡಿ ಗೌರವಿಸುತ್ತಿದ್ದರು.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯವರ ತಗಾದೆಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದಿದ್ದ ಅವರು, ‘ನಾಡೋಜ’ ಎಂಬ ದಿನಪತ್ರಿಕೆ ಆರಂಭಿಸಿದ್ದರು. ಇತ್ತೀಚೆಗೆ ‘ನಿರ್ಭೀತ’ ಎಂಬ ವಾರಪತ್ರಿಕೆ ನಡೆಸುತ್ತಿದ್ದರು.

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ನಿಂದ 2018–19ನೇ ಸಾಲಿನಲ್ಲಿ ನೀಡಿದ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿದ್ದರು.

ಹಿಂದವಾಡಿಯ ರುದ್ರಭೂಮಿಯಲ್ಲಿ ಸಂಜೆ 5ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು