ಕಡೋಲಿ: ಶಿವಾಜಿ ಪ್ರತಿಮೆ ಅನಾವರಣ

7

ಕಡೋಲಿ: ಶಿವಾಜಿ ಪ್ರತಿಮೆ ಅನಾವರಣ

Published:
Updated:

ಬೆಳಗಾವಿ: ತಾಲ್ಲೂಕಿನ ಕಡೋಲಿ ಗ್ರಾಮದಲ್ಲಿ ಪಂಚಾಯ್ತಿ ಕಚೇರಿ ಎದುರು ಪ್ರತಿಷ್ಠಾಪಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯ ಅನಾವರಣ ಸಮಾರಂಭವನ್ನು ಜ.12ರಂದು ಬೆಳಿಗ್ಗೆ 11ಕ್ಕೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಹಾಗೂ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ ತಿಳಿಸಿದರು.

‘ಹನ್ನೆರಡೂವರೆ ಅಡಿ ಎತ್ತರದ ಪ್ರತಿಮೆಯನ್ನು ₹1 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಮುಂಬೈನ ಮೂರ್ತಿಕಾರ ಜಯಪ್ರಕಾಶ ಶಿರಗಾಂವಕರ ಪ್ರತಿಮೆ ತಯಾರಿಸಿದ್ದಾರೆ. ಶಿವಾಜಿ ಶೌರ್ಯ, ಕೊಡುಗೆಯನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಪ್ರತಿಷ್ಠಾಪಿಸಲಾಗಿದೆ. ರಾಜಮಾತಾ ಜೀಜಾವು ಜಯಂತಿ ಸಂದರ್ಭದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತಿದೆ’ ಎಂದು ಗುರುವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ತೋಂಟದ ಸಿದ್ಧರಾಮ ಸ್ವಾಮೀಜಿ, ಕಡೋಲಿಯ ದುರದುಂಡೇಶ್ವರ ವಿರಕ್ತಮಠದ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರದ ಮಾಜಿ ಸಚಿವ ಶರದ್‌ ಪವಾರ್‌, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಶಿವಾಜಿ ವಂಶಸ್ಥ ಹಾಗೂ ಮಹಾರಾಷ್ಟ್ರದ ಸಂಸದ ಉದಯನರಾಜ ಭೋಸಲೆ ಹಾಗೂ ಈ ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಮೊದಲಾದ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು’ ಎಂದು ವಿವರಿಸಿದರು.

‘ಮೂರ್ತಿಕಾರ ಜಯಪ್ರಕಾಶ ಶಿರಗಾಂವಕರ, ಎಂಜಿನಿಯರ್‌ ಆದಮಅಲಿ ಸುಲ್ತಾನ ಮುಜಾವರ ಹಾಗೂ ದಾನಿಗಳನ್ನು ಸತ್ಕರಿಸಲಾಗುವುದು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ಮಾಯಣ್ಣವರ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !