ಕುಂದಾನಗರಿಯಲ್ಲೂ ಜೋರು ಶ್ರೀರಾಮನವಮಿ

ಶನಿವಾರ, ಏಪ್ರಿಲ್ 20, 2019
31 °C
ವಿವಿಧ ಸಂಘ–ಸಂಸ್ಥೆಗಳಿಂದ ಶೋಭಾಯಾತ್ರೆ

ಕುಂದಾನಗರಿಯಲ್ಲೂ ಜೋರು ಶ್ರೀರಾಮನವಮಿ

Published:
Updated:
Prajavani

ಬೆಳಗಾವಿ: ಶ್ರೀರಾಮನವಮಿ ಆಚರಣೆಗೆ ನಗರ ಹಾಗೂ ಜಿಲ್ಲೆಯಾದ್ಯಂತ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರದಿಂದಲೇ ದೇವಸ್ಥಾನ ಹಾಗೂ ರಾಮನ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಶನಿವಾರ (ಏ.13) ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬಹುತೇಕ ದೇವಸ್ಥಾನಗಳಲ್ಲಿ ಯುಗಾದಿ ಹಬ್ಬದಿಂದಲೇ ಪೂಜಾ ಕಾರ್ಯಕ್ರಮ ನಡೆಯುತ್ತಿವೆ. ನಿತ್ಯ ಸಂಜೆ ಭಜನೆ, ಕೀರ್ತನೆ ಜರುಗುತ್ತಿವೆ. ಶನಿವಾರ ಹಾಗೂ ಭಾನುವಾರ ಶ್ರೀರಾಮನಿಗೆ ಸಾವಿರಾರು ಭಕ್ತಿರಿಂದ ವಿಶೇಷ ಪೂಜೆ ನೆರವೇರಲಿದ್ದು, ಉಪವಾಸ, ತೊಟ್ಟಿಲೋತ್ಸವ, ಸಂಗೀತ ಸೇವೆ, ಕಾಣಿಕೆ ಅರ್ಪಣೆ, ಅನ್ನಪ್ರಸಾದ, ಪಾನಕ–ಮಜ್ಜಿಗೆ ವಿತರಣೆ ಸೇರಿ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ನಗರದ ಕೆಲವು ಸಾಯಿಮಂದಿರಗಳಲ್ಲಿ ಶ್ರೀರಾಮನವಮಿಯೊಂದಿಗೆ ಸಾಯಿ ಜಯಂತಿಯನ್ನೂ ಆಚರಿಸುವುದು ವಿಶೇಷ.

ಕೇಳ್ಕರ್‌ಬಾಗ್‌ ದೇವಸ್ಥಾನ:

‘ಇಲ್ಲಿನ ಕೇಳಕರಬಾಗ್‌ನಲ್ಲಿರುವ ಶ್ರೀರಾಮ ದೇವಸ್ಥಾನ ನಗರದಲ್ಲಿಯೇ ಶ್ರೀರಾಮನ ಅತ್ಯಂತ ಹಳೆಯ ಹಾಗೂ ದೊಡ್ಡ ದೇವಸ್ಥಾನವಾಗಿದೆ. ಪ್ರತಿದಿನ ಇಲ್ಲಿ ನೂರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಶ್ರೀರಾಮನವಮಿ ಅಂಗವಾಗಿ ಶನಿವಾರ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದರಿಂದ ಇಲ್ಲಿ ಜಾತ್ರೆಯ ವಾತಾವರಣವೇ ನಿರ್ಮಾಣವಾಗುತ್ತದೆ. ಶನಿವಾರ ಎಲ್ಲ ಭಕ್ತರು ಉಪವಾಸ ಕೈಗೊಳ್ಳುತ್ತಾರೆ. ಭಾನುವಾರ ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ನೆರವೇರಲಿದೆ’ ಎಂದು ದೇವಸ್ಥಾನ ಟ್ರಸ್ಟ್‌ ಸಮಿತಿ ಕೋಶಾಧ್ಯಕ್ಷ ಸತೀಶ ಜೋಶಿ ತಿಳಿಸಿದರು.

‘ರಾಮದೇವ ಗಲ್ಲಿಯಲ್ಲಿರುವ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ದಿನದಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ. ಮೂರ್ತಿಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಪ್ರತಿದಿನ ಸಂಜೆ 2 ಗಂಟೆಗಳ ಕಾಲ ಭಜನೆ ಮಾಡಲಾಗುತ್ತಿದೆ. ಭಕ್ತರಿಗೆ ಕುಡಿಯುವ ನೀರು ಹಾಗೂ ಪಾನಕದ ವ್ಯವಸ್ಥೆ ಮಾಡಲಾಗಿದೆ’ ಎಂದು ಅರ್ಚಕ ರಾಘವೇಂದ್ರ ಜಾಗೀರದಾರ ತಿಳಿಸಿದರು.    

ಶಹಾಪುರದ ಆಚಾರ್ಯ ಗಲ್ಲಿ, ವಡಗಾವಿಯ ರಾಮ ಗಲ್ಲಿಯಲ್ಲಿರುವ ದೇವಸ್ಥಾನ ಸೇರಿ ನಗರದ ವಿವಿಧೆಡೆ ಭಕ್ತರಿಂದ ರಾಮನವಮಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶೋಭಾಯಾತ್ರೆ:

ರಾಮನವಮಿ ಅಂಗವಾಗಿ ವಿವಿಧೆಡೆ ವಿವಿಧ ಸಂಘ–ಸಂಸ್ಥೆಗಳಿಂದ ಶನಿವಾರ ಶೋಭಾಯಾತ್ರೆ ಆಯೋಜಿಸಲಾಗಿದೆ. ‘ಶ್ರೀರಾಮಸೇನಾ ಹಿಂದೂಸ್ತಾನ’ ಸಂಘಟನೆಯಿಂದ ಸಂಜೆ 4ಕ್ಕೆ ಅಂಬೇಡ್ಕರ್ ಉದ್ಯಾನದಿಂದ ಯಾತ್ರೆ ಜರುಗಲಿದೆ. ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕೆಲವೆಡೆ ಕೆಲವು ಸಂಘ–ಸಂಸ್ಥೆಗಳ ಸದಸ್ಯರು ಸಾರ್ವಜನಿಕ ಸ್ಥಳಗಳಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸಿ, ರಾಮನವಮಿ ಆಚರಣೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ. ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನವಮಿಯ ವಿಶೇಷವಾದ ಪಾನಕ, ಮಜ್ಜಿಗೆಯ ವಿತರಣೆಯೂ ಅಲ್ಲಲ್ಲಿ ನಡೆಯಲಿದೆ.

ಪೂಜಾ ಸಾಮಗ್ರಿಗೆ ಬೇಡಿಕೆ: 

ಶ್ರೀರಾಮನವಮಿ ಅಂಗವಾಗಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೂವಿನಹಾರ, ಹಣ್ಣು, ತೆಂಗಿನಕಾಯಿ ಸೇರಿ ಅಲಂಕಾರಿಕ ವಸ್ತಗಳನ್ನು ಭಕ್ತರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಬಿಡಿ ಹೂವು ಹಾಗೂ ಮಾವಿನ ಎಲೆಗಳ ಮಾರಾಟವೂ ಮಾರುಕಟ್ಟೆಯಲ್ಲಿ ಕಂಡುಬಂತು.

ಮಾಳಮಾರುತಿ ಬಡಾವಣೆಯ ಶ್ರೀನಗರ, ಶಾಹುನಗರದ ಕಂಗ್ರಾಳಿ ರಸ್ತೆಯಲ್ಲಿರುವ ಸಾಯಿಮಂದಿರಗಳಲ್ಲಿ ಶ್ರೀರಾಮನವಮಿ ಮತ್ತು ಸಾಯಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿಷೇಕ, ಪೂಜೆ, ಶ್ರೀರಾಮ ಹಾಗೂ ಸಾಯಿನಾಥನನ್ನು ತೊಟ್ಟಿಲಲ್ಲಿ ತೂಗುವ ಕಾರ್ಯಕ್ರಮವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !