ಶನಿವಾರ, ಏಪ್ರಿಲ್ 17, 2021
31 °C
ಬದಿಗೆ ಸ್ಮಶಾನ; ಒಳಗೆ ಬಿಕೋ ಎನ್ನುವ ಸ್ಥಿತಿ

ಸೊರಗುತ್ತಿರುವ ಗೃಹ ಮಂಡಳಿ ಬಡಾವಣೆ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು: ಕಿತ್ತು ಹೋಗಿರುವ ವಿಶಾಲ ರಸ್ತೆಗಳು. ಒಡೆದ ಕಿಟಕಿ ಗಾಜುಗಳು. ನಿವೇಶನ ಸ್ಥಳದಲ್ಲಿ ಬೆಳೆದ ಕಳೆಗಿಡಗಳು. ಸೂಚನಾ ಫಲಕವನ್ನೇ ಮುಚ್ಚಿಹಾಕಿರುವ ಕಂಟಿಗಳು. ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿರುವ ಇಡೀ ಬಡಾವಣೆಯಲ್ಲಿ ಬಿಕೋ ಎನ್ನುವ ವಾತಾವರಣ.

ಇಲ್ಲಿನ ಕುಲವಳ್ಳಿ ರಸ್ತೆಗೆ ಹೊಂದಿಕೊಂಡಿರುವ ಗೃಹ ಮಂಡಳಿ ವತಿಯಿಂದ ನಿರ್ಮಿಸಲಾಗಿರುವ ಬಡಾವಣೆಯ ದುಃಸ್ಥಿತಿ ಇದು.

ಕೆಲ ಮನೆಗಳು ಮತ್ತು ನಿವೇಶನಗಳನ್ನು ಸಮರ್ಪಕವಾಗಿ ಉಪಯೋಗಿಸದೆ ಇರುವುದರಿಂದಾಗಿ ಇಡೀ ಬಡಾವಣೆ ಇದ್ದೂ ಇಲ್ಲದಂತಾಗಿದೆ ಎನ್ನುತ್ತಾರೆ ನಿವಾಸಿಗಳು.

ಹೆಚ್ಚು ಜನರು ಇಲ್ಲಿ ವಾಸಿಸುತ್ತಿಲ್ಲ, ನಿವೇಶನ ಪಡೆದವರು ಮನೆಗಳನ್ನು ನಿರ್ಮಿಸುತ್ತಲೂ ಇಲ್ಲ. ಕೆಲ ಕುಟುಂಬಗಳ ಸದಸ್ಯರಿಗೆ ‘ನಾವೆಲ್ಲೊ ವಾಸಿಸುತ್ತಿದ್ದೇವೆ’ ಎಂಬ ಭಾವ ಮನೆ ಮಾಡಿದೆ ಎನ್ನುತ್ತಾರೆ ಅವರು.

ಇಲ್ಲದ ಉಸ್ತುವಾರಿ:

216 ಮನೆ ಮತ್ತು ನಿವೇಶನ ಈ ಬಡಾವಣೆಯಲ್ಲಿವೆ. ಇದರಲ್ಲಿ ಗೃಹ ಮಂಡಳಿಯಿಂದ ನಿರ್ಮಾಣವಾದ ಎಲ್ಐಜಿ 10 ಮತ್ತು 5 ಎಂಐಜಿ ಮನೆಗಳಿವೆ. ನಿವೇಶನ ಪಡೆದ ಮೂವರು ಇಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ.

ಗೃಹ ಮಂಡಳಿಯಿಂದ ರಚನೆಯಾಗಿರುವ ಈ ಬಡಾವಣೆಯಲ್ಲಿಯ ಮುಖ್ಯ ರಸ್ತೆಯನ್ನು ವಿಶಾಲವಾಗಿ ನಿರ್ಮಿಸಲಾಗಿದೆ. ಅಡ್ಡ ರಸ್ತೆಗಳು ಕೆಲವೆಡೆ ಪರವಾಗಿಲ್ಲ. ಹಾಕಿದ ಡಾಂಬರು, ಖಡಿ ಕಲ್ಲುಗಳು ಅಲ್ಲಲ್ಲಿ ಕಿತ್ತು ಹೋಗಿವೆ.

ಎಲ್ಐಜಿ ಮನೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ಕೆಲವರು ಇಲ್ಲಿಗೆ ಬಂದು ವಾಸಿಸಲು ಹಿಂದೇಟು ಹಾಕುತ್ತಿದ್ದಾರೆ. ಮನೆ ಇಲ್ಲದವರಿಗೆ ನಿವೇಶನ ಸಿಕ್ಕಿದ್ದರೆ ಅವರು ಕಟ್ಟಿಸಿಕೊಂಡು ವಾಸವಾಗಿರುತ್ತಿದ್ದರು. ಆದರೆ, ಶ್ರೀಮಂತರಿಗೆ ಹೆಚ್ಚು ನಿವೇಶನ ವಿತರಣೆ ಮಾಡಲಾಗಿದೆ. ಹೀಗಾಗಿ ಬಡಾವಣೆಯೇ ಭಣ, ಭಣ ಎನ್ನುವಂತಾಗಿದೆ ಎಂದು ಸ್ಥಳೀಯರಾದ ಅಶೋಕ್ ಮಾಹಿತಿ ನೀಡಿದರು.

ಕುಡುಕರ ತಾಣ:

ಇಡೀ ಬಡಾವಣೆಯೇ ಭಣಗುಡುತ್ತಿರುವುದರಿಂದ ಕುಡುಕರಿಗೆ ಪ್ರಶಸ್ತ ಸ್ಥಳ ಸಿಕ್ಕಂತಾಗಿದೆ ಎನ್ನುವ ವಾತಾವರಣ ಕಂಡುಬರುತ್ತಿದೆ. ಹಗಲು ಹೊತ್ತಿನಲ್ಲಿ ಬಡಾವಣೆ ಒಳಗಿರುವ ರಸ್ತೆಯಲ್ಲಿ ಬಂದು ಮದ್ಯ ಸೇವನೆ ಮಾಡುತ್ತಾರೆ. ಕತ್ತಲು ಕವಿದರೆ ಸಾಕು, ಪ್ರವೇಶ ದ್ವಾರದಲ್ಲಿಯೇ ಕುಳಿತು ಕುಡಿಯುತ್ತಾರೆ. ಮದ್ಯಸೇವನೆ ಮಾಡಿದವರು ಬಾಟಲಿ, ಪ್ಲಾಸ್ಟಿಕ್ ಗ್ಲಾಸ್ ಮೊದಲಾದವುಗಳನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಅಡ್ಡ ರಸ್ತೆಗಳು ಮತ್ತು ಮುಖ್ಯ ಬೀದಿಯ ಬದಿಗೆ ಇಂತಹ ಕುರುಹುಗಳನ್ನು ಕಾಣಬಹುದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು