ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಗ್ರಾಮದ ಸುತ್ತ ಸಮಸ್ಯೆಗಳ ಹುತ್ತ, ಕಣ್ತೆರೆದು ನೋಡದ ಅಧಿಕಾರಿಗಳು

ಕಸದ ತೊಟ್ಟಿಗಳಿಂದ ತುಂಬಿದ ಜೈನಾಪೂರ
ಚಂದ್ರಶೇಖರ ಎಸ್. ಚಿನಕೇಕರ
Published 28 ಫೆಬ್ರುವರಿ 2024, 4:33 IST
Last Updated 28 ಫೆಬ್ರುವರಿ 2024, 4:33 IST
ಅಕ್ಷರ ಗಾತ್ರ

ಚಿಕ್ಕೋಡಿ: ಊರಿನ ಸುತ್ತಲೂ ಕ್ರಷರ್ ಮಷಿನ್‌ಗಳ ಕರ್ಕಶ ಧ್ವನಿ. ದೂಳಿನ ಹಾವಳಿ. ಗ್ರಾಮದೊಳಗೆ ತಿಪ್ಪೆಗಳ ಸಾಲು. ಗ್ರಾಮ ಪಂಚಾಯಿತಿ ಕಚೇರಿ ಹತ್ತಿರವೇ ಕಸದ ರಾಶಿ. ತ್ಯಾಜ್ಯ ವಿಲೇವಾರಿ ಘಟಕದ ಬಳಿಯಂತೂ ಕಸವೋ ಕಸ.

ವೀಳ್ಯದೆಲೆಗೆ ಪ್ರಸಿದ್ಧವಾದ ತಾಲ್ಲೂಕಿನ ಜೈನಾಪೂರ ಗ್ರಾಮದ ಸದ್ಯದ ನೋಟವಿದು. ಅಂದಾಜು 8,000 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 3 ವಾರ್ಡ್‌ಗಳಿದ್ದು, 10 ಸದಸ್ಯರಿದ್ದಾರೆ. ಈ ಪಂಚಾಯಿತಿ ವ್ಯಾಪ್ತಿಯ ತೋರಣಹಳ್ಳಿ ಗ್ರಾಮದಲ್ಲಿ 5,000 ಜನಸಂಖ್ಯೆ ಇದ್ದು, 6 ಸದಸ್ಯರಿದ್ದಾರೆ.

ಜೈನಾಪೂರದಲ್ಲಿ ತಿಪ್ಪೆಗಳು ಮಾತ್ರವಲ್ಲ; ಚರಂಡಿಗಳನ್ನು ಶುಚಿಗೊಳಿಸಿ ಎಷ್ಟೋ ವರ್ಷಗಳು ಗತಿಸಿವೆ. ಇಲ್ಲಿ ಜನ ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಪಂಚಾಯಿತಿ ಕಚೇರಿ, ಸ್ಮಶಾನ, ಕೆರೆ ಮುಂತಾದ ಕಡೆ ಕಸದ ರಾಶಿಯೇ ತುಂಬಿಕೊಂಡಿವೆ. ಪ್ರಸಿದ್ಧ ತೋರಣಹಳ್ಳಿ ಹನುಮಾನ್‌ ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ತಿಪ್ಪೆಗಳ ರಾಶಿ ಇದೆ. ಸಹಜವಾಗಿಯೇ ಸೊಳ್ಳೆಗಳ ಕಾಟ ವಿಪರೀತವಾಗಿದೆ.

ತಿಪ್ಪೆ ತೆರವು ಮಾಡುವಂತೆ ನೋಟಿಸ್‌ ನೀಡಿದರೂ ಜನ ತೆರವು ಮಾಡಿಲ್ಲ ಎನ್ನುವುದು ಇಲ್ಲಿನ ‍ಪಿಡಿಒ ಅವರ ಉತ್ತರ.

ಕೋಟ್ಯಂತರ ಹಣ ಸುರಿದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಆದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಗ್ರಾಮ ಪಂಚಾಯಿತಿಗೆ ಸೇರಿದ 23 ಸಾರ್ವಜನಿಕ ಕೊಳವೆ ಬಾವಿಗಳಿದ್ದು, ಐದು ಮಾತ್ರ ಬಳಕೆಯಲ್ಲಿವೆ. ‌ಊರ ಕೆರೆ ಬತ್ತಿದ್ದು ಅಂತರ್ಜಲ ಕುಸಿದಿದೆ. ನೀರಿಗಾಗಿ ಜನರು ಟ್ಯಾಂಕರ್‌ಗೆ ಕಾಯಬೇಕು ಅಥವಾ ತೋಟಪಟ್ಟಿಗಳಿಗೆ ಅಲೆಯಬೇಕು.

ಶೌಚಾಲಯಕ್ಕೂ ನೀರಿಲ್ಲ: ಅಲ್ಲಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರೆ, ನೀರಿನ ಸಂಪರ್ಕವಿಲ್ಲ. ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಊರಾಚೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಅದಕ್ಕೆ ಹಾಕಿದ ಬೀಗವೂ ತುಕ್ಕು ಹಿಡಿದಿದೆ. ಯಾವ ಉದ್ದೇಶಕ್ಕೆ ಇದನ್ನು ನಿರ್ಮಿಸಲಾಗಿದೆ ಎಂಬುದನ್ನು ಈ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಮರೆತೇ ಬಿಟ್ಟಿದ್ದಾರೆ ಎಂಬುದು ಜನರ ದೂರು.

ಕ್ರಷರ್‌ ಸಂಕಷ್ಟ: ಊರಿನ ತುಂಬ ಕ್ರಷರ್‌ ಯಂತ್ರಗಳ ಸದ್ದೇ ಹೆಚ್ಚು. ಇದರಿಂದ ದೂಳು ಇಡೀ ಊರನ್ನು ಆವರಿಸಿ, ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಸದ್ಯ ಇಲ್ಲಿ 24X7 ಆರೋಗ್ಯ ಸೇವೆ ಇದ್ದರೂ ಸೂಕ್ತ ವೈದ್ಯಕೀಯ ಸಲಕರಣೆ, ಸಿಬ್ಬಂದಿ ಇಲ್ಲ. ಆಂಬುಲೆನ್ಸ್‌ ಅನ್ನು ಗುಜರಿಗೆ ಹಾಕಿ ವರ್ಷ ಕಳೆದಿದೆ. ಮತ್ತೆ ಆಂಬುಲೆನ್ಸ್‌ ಮಂಜೂರು ಮಾಡಿಲ್ಲ.

ಇದೇ ಪಂಚಾಯಿತಿ ವ್ಯಾಪ್ತಿಯ ತೋರಣಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 150 ವಿದ್ಯಾರ್ಥಿಗಳು ಇದ್ದರೂ ಕಾಯಂ ಶಿಕ್ಷಕರು ಮೂವರೇ ಇದ್ದಾರೆ. ಹೀಗಾಗಿ, ಮಕ್ಕಳು ಮಜಲಟ್ಟಿ ಅಥವಾ ಚಿಕ್ಕೋಡಿಗೆ ಹೋಗುವ ಸ್ಥಿತಿ ಬಂದಿದೆ.

ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ಗ್ರಾಮದಲ್ಲಿ ನಿರುಪಯುಕ್ತವಾದ ತ್ಯಾಜ್ಯ ವಿಲೇವಾರಿ ಘಟಕ – ಪ್ರಜಾವಾಣಿ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಜೈನಾಪೂರ ಗ್ರಾಮದಲ್ಲಿ ನಿರುಪಯುಕ್ತವಾದ ತ್ಯಾಜ್ಯ ವಿಲೇವಾರಿ ಘಟಕ – ಪ್ರಜಾವಾಣಿ ಚಿತ್ರ
ಕಾರಣಾಂತರಗಳಿಂದ ಜೆಜೆಎಂ ವಿಳಂಬವಾಗಿದೆ. ಬಾವಿ ಬೋರ್‌ವೆಲ್‌ ಬತ್ತಿವೆ. ಟ್ಯಾಂಕರ್‌ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಕೋರಲಾಗಿದೆ.
–ಶಿವಾನಂದ ಎಚ್‌. ದೇಸಾಯಿ, ಪಿಡಿಒ
ಪ್ರಾಥಮಿಕ ಆರೋಗ್ಯ ಕೇಂದ್ರದ ಒಂದು ಬದಿ ಆವರಣ ಗೋಡೆ ಇಲ್ಲ. ಬಿಡಾಡಿ ನಾಯಿ ದನಗಳ ಹಾವಳಿ ವಿಪರೀತವಾಗಿದೆ. ಇದನ್ನು ಸರಿಪಡಿಸಬೇಕು.
–ಡಾ.ಜಗದೀಶ, ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ
ಕ್ರಷರ್‌ ದೂಳಿನಿಂದಾಗಿ ಮಕ್ಕಳು ಹಿರಿಯರ ಆರೋಗ್ಯ ಕೆಡುತ್ತಿದೆ. ಆರೋಗ್ಯ ಕೇಂದ್ರ ಊರಿನಿಂದ 2 ಕಿ.ಮೀ ದೂರದಲ್ಲಿದ್ದು ಪ್ರಯೋಜನಕ್ಕೆ ಬಾರದಾಗಿದೆ.
–ಮಲಗೌಡ ಪಾಟೀಲ, ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT