ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಅರ್ಧದಷ್ಟು ಮಾತ್ರ ಮುಂಗಾರಿ ಬಿತ್ತನೆ

ನೀರಿಕ್ಷೆಯಂತೆ ಮಾರಾಟವಾಗದ ಬಿತ್ತನೆ ಬೀಜ
Published 15 ಜುಲೈ 2023, 5:15 IST
Last Updated 15 ಜುಲೈ 2023, 5:15 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಕಾರಣ ಅರ್ಧದಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ. ಸದ್ಯ ಬಿತ್ತಿದ ಬೆಳೆಯೂ ಮೊಳಕೆಯೊಡೆಯದೆ ರೈತರು ಚಿಂತೆಗೀಡಾಗಿದ್ದಾರೆ. ಇನ್ನೊಂದೆಡೆ, ಕೃಷಿ ಇಲಾಖೆಯಿಂದ ನಿರೀಕ್ಷಿತ ಪ್ರಮಾಣದ ಬೀಜಗಳ ಖರ್ಚು ಆಗಿಲ್ಲ.

ತಾಲ್ಲೂಕಿನಲ್ಲಿ 87,577 ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 45,453 ಹೆಕ್ಟೇರ್‌ ಮಾತ್ರ ಬಿತ್ತೆನೆಯಾಗಿದೆ.

ಅಥಣಿ ತಾಲ್ಲೂಕು ಜಿಲ್ಲೆಯಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ. ತಾಲ್ಲೂಕಿನಲ್ಲಿ ಪ್ರತಿ ವರ್ಷ ಅರ್ಧಭಾಗ ಬೆಳೆ ಪ್ರವಾಹ ಬಂದು ಹಾಳಾದರೆ, ಇನ್ನರ್ಧ ಭಾಗ ಬರದಿಂದ ಹಾಳಾಗುತ್ತದೆ. ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುವ ಕಾರಣ ನದಿ ದಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಇನ್ನೊಂದೆಡೆ, ಮಳೆಯ ಕೊರತೆ ಕಾಡುತ್ತದೆ.

ಈ ಬಾರಿ ನದಿಯಲ್ಲೂ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಹೀಗಾಗಿ, ನದಿ ದಡದ ಗ್ರಾಮಗಳಲ್ಲೂ ಬಿತ್ತನೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳ ಖರೀದಿಸಲು ರೈತರ ಮುಂದಾಗುತ್ತಿಲ್ಲ. ಸೋಯಾಬೀನ್, ಗೋವಿನಜೋಳ, ಉದ್ದು, ತೊಗರಿ ಮುಂತಾದ ಬೀಜಗಳನ್ನು ರೈತರು ಖರೀದಿಸಲು ಮುಂದಾಗಿಲ್ಲ.

‘ಜುಲೈ 13ರವರೆಗೆ ಸುಮಾರು 1,911 ಕ್ವಿಂಟಲ್‌ ಬೀಜಗಳ ಪೈಕಿ ಕೇವಲ 137 ಕ್ವಿಂಟಲ್ ಬೀಜಗಳು ಮಾತ್ರ ಮಾರಾಟವಾಗಿದೆ. ಕಳೆದ ಬಾರಿ ಇದೇ ಸಮಯಕ್ಕೆ ಸುಮಾರು 93,373 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತೆನೆಯಾಗಿತ್ತು. ಸುಮಾರು 2,200 ಕ್ವಿಂಟಲ್‌ ಬೀಜಗಳು ಮಾರಾಟವಾಗಿದ್ದವು’ ಎಂದು ಅಥಣಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಹುಪಾಲು ಕಬ್ಬು ಬಿತ್ತನೆ: ತಾಲ್ಲೂಕಿನಲ್ಲಿ ಸುಮಾರು 45,453 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದರಲ್ಲಿ ಸುಮಾರು 42,992 ಹೆಕ್ಟೇರ್‌ ಕೇವಲ ಕಬ್ಬು ಬೆಳೆಯನ್ನು ಮಾತ್ರ ಬಿತ್ತಲಾಗಿದೆ. ಉಳಿದ 2,461 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಇನ್ನಿತರ ಬೆಳೆಗಳನ್ನು ಬೆಳೆಯಲಾಗಿದೆ. ಕೃಷ್ಣೆಯ ಒಡಲಲ್ಲಿ ಇರುವ ರೈತರು ಕಬ್ಬು ಬಿಟ್ಟರೆ ಬೇರೆ ಯಾವುದೇ ಬೀಜ ಹಾಕುವುದಕ್ಕೂ ಮನಸ್ಸು ಮಾಡುತ್ತಿಲ್ಲ.

‘ಮುಂಗಾರು ಕೊರತೆಯಾದ ಕಾರಣ ಬಿತ್ತನೆಗೆ ಹಿನ್ನಡೆ ಆಗಿದೆ. ಆದರೆ, ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಕಾಲುವೆಗೆ ನೀರು ಹರಿಸಿದ್ದರಿಂದ ಇನ್ನಷ್ಟು ಬಿತ್ತೆನೆಯಾಗುವ ನೀರಿಕ್ಷೆ ಇದೆ. ಉದ್ದು ಹಾಗೂ ಸೋಯಾಬೀನ್ ಅನ್ನು ಇನ್ನುಮುಂದೆ ಬಿತ್ತನೆ ಮಾಡುವುದು ಸೂಕ್ತವಲ್ಲ. ಮಕ್ಕೆಜೋಳ ಹಾಗೂ ತೊಗರಿ ಬಿತ್ತನೆ ಮಾಡಲು ಇನ್ನು ಸಮಯವಿದೆ. ಹೀಗಾಗಿ, ನಿರೀಕ್ಷಿತ ಬಿತ್ತನೆಯಾಗುವ ಸಾಧ್ಯತೆ ಇದೆ’ ಎನ್ನುವುದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿಂಗಣಗೌಡ ಬಿರಾದರ ಅವರ ಹೇಳಿಕೆ.

ಅಥಣಿ ಹೊರವಲಯದ ಹೊಲದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ ಬಳಸಿ ಬಿತ್ತನೆ ಮಾಡುತ್ತಿದ್ದಾರೆ
ಅಥಣಿ ಹೊರವಲಯದ ಹೊಲದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ ಬಳಸಿ ಬಿತ್ತನೆ ಮಾಡುತ್ತಿದ್ದಾರೆ

ಮಳೆ ಕೊರತೆ ಕಬ್ಬಿಗೂ ಆತಂಕ ಜುಲೈ 12ರವರೆಗೆ ತಾಲ್ಲೂಕಿನ 17.5 ಸೆಂ.ಮೀ.ನಷ್ಟು ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ ಈವರೆಗೆ ಅತ್ಯಂತ ಕಡಿಮೆ ಅಂದರೆ 9.5 ಸೆಂ.ಮೀ ಮಾತ್ರ ಮಳೆಯಾಗಿದೆ. ಅಂದಾಜು ಶೇ 46ರಷ್ಟು ಮಳೆಯ ಕೊರತೆ ಕಾಡುತ್ತಿದೆ. ಈಗಾಗಲೇ ಹಾಕಿದ ಬೀಜಗಳಿಗೂ ನೀರಿಕ್ಷಿತ ಮಟ್ಟದಲ್ಲಿ ತೇವ ಸಿಗದ ಕಾರಣ ಸಸಿಗಳು ಮೇಲೆ ಏಳುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕಬ್ಬು ಒಣಗಿ ರವದಿಗಳು ಉದುರುವ ಹಂತ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT