ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲದ ಬೆಳಕು ನೀಲಕಂಠ ಶ್ರೀಗಳು

Published 14 ಅಕ್ಟೋಬರ್ 2023, 5:44 IST
Last Updated 14 ಅಕ್ಟೋಬರ್ 2023, 5:44 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲೆಡೆ ಈಗ ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಅವರ 30ನೇ ಜನ್ಮದಿನದ (ಅಕ್ಟೋಬರ್ 14) ಸಂಭ್ರಮ ಮನೆ ಮಾಡಿದೆ.

ಪೂಜ್ಯರ ಜನ್ಮದಿನಕ್ಕೆ ಶುಭಕೋರಿ ಬೈಲಹೊಂಗಲ ನಾಡಿನಾದ್ಯಂತ ಬ್ಯಾನರ್, ಕಟೌಟು ರಾರಾಜಿಸುತ್ತಿವೆ. ಮೊದಲ ಬಾರಿಗೆ ಮಠದ ಭಕ್ತರ ಒತ್ತಾಯದ ಮೇರೆಗೆ ಶ್ರೀಗಳು ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಶನಿವಾರ ಬೆಳಿಗ್ಗೆ 9ಕ್ಕೆ ಸಸಿ ನೆಡುವುದು, ಸಂಜೆ 6ಕ್ಕೆ ಬೃಹತ್ ಗುರುವಂದನಾ ಸಮಾರಂಭ ಜರುಗಲಿದೆ.

ಪೂಜ್ಯರು ನಡೆದುಬಂದ ದಾರಿ

ಬಾಲಕ ನೀಲಕಂಠ ಅವರ ಆರಂಭಿಕ ಶಿಕ್ಷಣ ಗಂಗಾಧರ ಶ್ರೀಗಳು ಸ್ಥಾಪಿಸಿದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನೀಲಕಂಠರು ಮೂರನೇ ತರಗತಿಯಲ್ಲಿ ಇರುವಾಗಲೇ ಗುರುವಿನ ನೆರವಿಲ್ಲದೇ ವೇದಮಂತ್ರ, ಶೋಪಚಾರ ಕಲಿತರು.

ಆದರ್ಶ ನಡೆ–ನುಡಿಯ ತಿಳಿವಳಿಕೆ ನೀಡಿ ಬಾಲಕ ನೀಲಕಂಠ ಅವರ ಎಳೆಯ ಮೈ–ಮನಗಳನ್ನು ಹದಗೊಳಿಸಿ ಮಾನವೀಯ ಗುಣ ತುಂಬಿದವರು ಗಂಗಾಧರ ಶ್ರೀಗಳು.

ನಂತರ ಮಾಧ್ಯಮಿಕ ಶಿಕ್ಷಣಕ್ಕಾಗಿ ಮೈಸೂರಿನ ಸುತ್ತೂರು ಶ್ರೀಗಳ ಜೆ.ಎಸ್.ಎಸ್.ಪ್ರೌಢಶಾಲೆಗೆ ಕಳಿಸಿದರು. ಗುರುಕುಲ ಮಾದರಿಯ ವಸತಿ ನಿಲಯದಲ್ಲಿ ನಾಡಿನ ಏಳು ವಟುಗಳು ಇವರೊಂದಿಗೆ ಅಧ್ಯಯನ ಮಾಡುತ್ತಿದ್ದರು. ಯೋಗ, ಪೂಜೆ, ಪ್ರಾರ್ಥನೆ, ಕರ್ತೃ ಗದ್ದುಗೆ ಪೂಜೆ ಸೇರಿದಂತೆ ಎಲ್ಲವನ್ನೂ ರೂಢಿಸಿಕೊಂಡಿದ್ದರು. ಸಂಸ್ಕೃತ ಪಂಡಿತರಾದ ಶ್ರೀಧರ ಪಂಡಿತರು ವೇದ, ವ್ಯಾಕರಣ, ಛಂದಸ್ಸು, ಜ್ಯೋತಿಷ ಕಲೆ ಮುಂತಾದ ವಿಷಯಗಳನ್ನು ಶ್ರದ್ಧೆಯಿಂದ ಕಲಿಸುತ್ತಿದ್ದರು. ಈಗಲೂ ಅವರ ಬೋಧನಾ ಶೈಲಿಯನ್ನು ಎಲ್ಲರೂ ಹೃದಯದುಂಬಿ ಪ್ರಶಂಸಿಸುತ್ತಾರೆ.

ಶಿವಯೋಗ ಮಂದಿರಲ್ಲಿ ವೀರಶೈವ ಸಂಸ್ಕಾರ: ನೀಲಕಂಠ ಅವರನ್ನು ಗಂಗಾಧರ ಶ್ರೀಗಳು ಬೈಲಹೊಂಗಲಕ್ಕೆ ಕರೆಸಿಕೊಂಡರು.

‘ಮಗು ನಿನ್ನಲ್ಲಿ ಮಠಾಧಿಪತಿ ಆಗುವ ಎಲ್ಲ ಅರ್ಹತೆಗಳಿವೆ. ಇನ್ನು ಮೇಲೆ ಸಮಾಜವೇ ನಿನ್ನ ತಾಯಿ, ತಂದೆ, ಬಂಧುಬಳಗ. ಅವರ ಚಿಂತನೆಯಲ್ಲೇ ನೀನು ಸದಾ ಇರಬೇಕು. ನಿನ್ನ ನಡೆ ನುಡಿ ಪಾರದರ್ಶಕವಾಗಿರಬೇಕು. ಸಮಾಜೋದ್ಧಾರದ ಸಂದರ್ಭದಲ್ಲಿ ತೊಂದರೆ ಆತಂಕಗಳು, ಲೋಕನಿಂದೆ ಸಹಜ. ಧೃತಿಗೆಡಬೇಡ. ಒಳ್ಳೆಯದನ್ನು ಮಾಡಲು ಸಂಕಲ್ಪ ತೊಡು. ವಿರಾಗಿಯಾದ ನಿನಗೆ ಯಾವ ಅಳುಕೂ ಬೇಡ. ಧೈರ್ಯದಿಂದ ಇರು. ಶರಣ ಸಂಸ್ಕೃತಿ, ಶಿಕ್ಷಣ ಸಂಸ್ಕಾರವನ್ನು ಪಡೆದಿರುವ ನೀನು ಗುರು ಹಿರಿಯರ, ಸಮಾಜ ಬಾಂಧವರೊಂದಿಗೆ ಹೊಂದಿಕೊಂಡು ಮಠವನ್ನು ಬೆಳಗುವ ಜ್ಯೋತಿಯಾಗು’ ಎಂದು ಆಶೀರ್ವದಿಸಿದರು.

ನೀಲಕಂಠ ದೇವರು ತಮ್ಮ ಗುರುವಿನ ಉಪದೇಶದ ಪ್ರತಿ ಅಕ್ಷರವನ್ನು ನೆನಪಿನಲ್ಲಿಟ್ಟು ಆಲಿಸುತ್ತ ಸುತ್ತೂರು ಮಠದ ಜೆ.ಎಸ್.ಎಸ್.ಮಹಾವಿದ್ಯಾಲಯದಲ್ಲಿ ಕನ್ನಡ, ಅರ್ಥಶಾಸ್ತ್ರ ಮತ್ತು ಭೂಗೋಳಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳನ್ನು ಅವಶ್ಯಕ ವಿಷಯಗಳನ್ನಾಗಿ ಆಯ್ದುಕೊಂಡು ಬಿ.ಎ ಪದವಿ ಮುಗಿಸಿದರು.

ಪಟ್ಟಾಧಿಕಾರ: ಸುತ್ತೂರಿನಿಂದ ಬೈಲಹೊಂಗಲಕ್ಕೆ ಬಂದ ನೀಲಕಂಠ ದೇವರಿಗೆ ಹಿಂದೆ ಗುರುವಿನ ಉಪದೇಶ, ಆಶೀರ್ವಾದವಿತ್ತು. ಶ್ರೀಮಠದ ಪೂಜ್ಯ ಗಂಗಾಧರ ಅಪ್ಪನವರು ಲಿಂಗೈಕ್ಯರಾದ ನಂತರ ನೀಲಕಂಠ ದೇವರಿಗೆ ಪಟ್ಟಾಧೀಕಾರ ಜರುಗಿ ಪ್ರಭುನೀಲಕಂಠ ಸ್ವಾಮೀಜಿ ಎಂದು ನೂರಾರು ಚರಮೂರ್ತಿಗಳ ಮಧ್ಯೆ ನಾಮಕರಣ ಮಾಡಲಾಯಿತು.

ಸದಾಶಯಕ್ಕೆ ಯುವಜನರ ವೇದಿಕೆ

ನೀಲಕಂಠ ಸ್ವಾಮೀಜಿ ಸದಾಚಾರ ಸಮೃದ್ಧಿಯಿಂದ ಕೂಡಿದ ಸಮಾಜ ನಿರ್ಮಾಣಕ್ಕೆ ‘ನೀಲಕಂಠೇಶ್ವರ ಯುವ ವೇದಿಕೆ’ ಸಂಸ್ಥಾಪಿಸಿ ಯುವ ಪೀಳಿಗೆಗೆ ಸಮಾಜ ಕಲ್ಯಾಣ ಯೋಜನೆಗಳ ನೀಲನಕ್ಷೆಯನ್ನು ನೀಡಿ ಆ ಯೋಜನೆಗಳ ಅನುಷ್ಠಾನಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಮಠದಲ್ಲಿ ಬಸವಪುರಾಣ ಪ್ರವಚನ ನಡೆದಿವೆ. ಭಕ್ತರ ಮನೆ ಮನೆಗೆ ಜಾತಿ ಮತ ಪಂಥದ ಭೇದವಿಲ್ಲದೆ ಪೂಜ್ಯರು ಭೇಟಿ ನೀಡಿ ಸಾಮರಸ್ಯ ಮೂಡಿಸುತ್ತಿದ್ದಾರೆ. ಮಠದಿಂದ ನಡೆಯುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಶ್ರೀಗಳು ಲಿಂಗೈಕ್ಯ ಗಂಗಾಧರ ಸ್ವಾಮಿಗಳ ಮಾರ್ಗದಲ್ಲಿ ಮಠದ ಭವ್ಯ ಪರಂಪರೆಯನ್ನು ಬೆಳೆಸುತ್ತ ಮತ್ತು ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾಗಿ ಎಲ್ಲ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತುಕೊಂಡು ಮುನ್ನಡೆಸಿದ್ದಾರೆ. ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT