ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ | ಸಂಚಾರ ದಟ್ಟಣೆಯಿಂದ ಹೈರಾಣದ ಜನ

ಪಟ್ಟಣದ ಮೂಲಕ ಹಾದುಹೋಗಿವೆ ಎರಡು ರಾಜ್ಯ ಹೆದ್ದಾರ; ಮೂಲೆ ಸೇರಿದ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ
Published 1 ಏಪ್ರಿಲ್ 2024, 4:41 IST
Last Updated 1 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ಅಥಣಿ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣ ಜನ ಬೇಸತ್ತು ಹೋಗಿದ್ದಾರೆ. ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಜನರೂ ಹೈರಾಣಾಗಿದ್ದಾರೆ. ಸಂಚಾರ ಪೊಲೀಸರು ಇದ್ದೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಒನ್‌ ವೇಗಳಲ್ಲಿ ಓಡಿಸುವುದು, ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡುವುದು ನಡೆದೇ ಇದೆ.

ಭಾರಿ ವಾಹನಗಳ ಪ್ರವೇಶ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ಸಂಚಾರಿ ಪೊಲೀಸ್ ಸಿಬ್ಬಂದಿಯ ಕೊರತೆ, ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ ಪಟ್ಟಣದ ಸಂಚಾರ ಶಿಸ್ತನ್ನು ಹಾಳು ಮಾಡಿದೆ.

ಪಟ್ಟಣ ಹೊರವಲಯದಲ್ಲಿ ಜೇವರ್ಗಿ– ಸಂಕೇಶ್ವರ ರಾಜ್ಯ ಹೆದ್ದಾರಿ ಕಾಮಗಾರಿಯೂ ಆಮೆ ಗತಿಯಲ್ಲಿ ಸಾಗಿದೆ. ತಾಲ್ಲೂಕು ಆಡಳಿತದ ಶಕ್ತಿಸೌಧ, ಮಿನಿ ವಿಧಾನಸೌಧಕ್ಕೆ ಹೋಗುವ ರಸ್ತೆ ತೀರ ಹದಗೆಟ್ಟಿರುವುದರಿಂದ ವಿಪರೀತ ದೂಳಿನಲ್ಲಿ ಸಂಚರಿಸುವುದು ದುರ್ಲಭವಾಗಿದೆ.

ಪಟ್ಟಣದ ಮಾರ್ಗವಾಗಿ ಜತ್ತ– ಜಾಂಬೋಟಿ ಮತ್ತು ಜೇವರ್ಗಿ– ಸಂಕೇಶ್ವರ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಸುಗಮ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ನಿರ್ಮಾಣವಾಗದ ಬೈಪಾಸ್‌:  ಎರಡು ರಾಜ್ಯ ಹೆದ್ದಾರಿಗಳಿಗೆ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂಬುದು ಪಟ್ಟಣದ ಜನತೆಯ ಬಹುದಿನಗಳ ಅಗ್ರಹವಾಗಿದೆ. ಆದರೆ, ಸರ್ಕಾರ  ಬೈಪಾಸ್ ರಸ್ತೆಗೆ  ಕೇವಲ ಸರ್ವೆ ಕಾರ್ಯ ನಡೆಸಿದ್ದು, ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.

ಇದರಿಂದ ಪಟ್ಟಣದ ಮೂಲಕವೇ ಸಾರಿಗೆ ಬಸ್‌ಗಳು, ಗೂಡ್ಸ್ ವಾಹನಗಳು, ಖಾಸಗಿ ವಾಹನಗಳು, ಮರಳು ತುಂಬಿದ ಲಾರಿಗಳು ಮತ್ತು ಸರಕು ಸಾಗಿಸುವ ಭಾರಿ ವಾಹನಗಳು ಕೂಡ ಒಂದೇ ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಗಳು ಕೂಡ ಬೇಗನೆ ಹಾಳಾಗುತ್ತಿವೆ. ಅಲ್ಲದೇ, ಆಗಾಗ ರಸ್ತೆ ಅಪಘಾತಗಳು, ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ.

ಪೊಲೀಸರಿಗೂ ಬೆಲೆ ಇಲ್ಲ: ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಅನೇಕ ಬಾರಿ ಜನಜಾಗೃತಿ ಸಭೆ ನಡೆಸಿ, ಎಚ್ಚರಿಕೆ ನೀಡಿದರೂ ಬೈಕ್‌ ಸವಾರರು, ಆಟೊ ಚಾಲಕರು, ಖಾಸಗಿ ವಾಹನದವರು ಬೆಲೆ ಕೊಡುತ್ತಿಲ್ಲ. ಯಾರು ಸಂಚಾರದ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮೇಲಿಂದ ಮೇಲೆ ಅಪಘಾತಗಳು ಕೂಡ ಹೆಚ್ಚಾಗುತ್ತಿವೆ.

ಖಾಸಗಿ ವಾಹನದವರು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗೂಡ್ಸ್ ವಾಹನ ಚಾಲಕರಿಗೆ ಪ್ರತ್ಯೇಕ ಸಮಯದಲ್ಲಿ ಅಂಗಡಿಕಾರರಿಗೆ ಸರಕುಗಳನ್ನು ಡೆಲಿವರಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಆದರೂ ಅನೇಕ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ, ರಸ್ತೆ ಬದಿಗೆ ಮತ್ತು ಮುಖ್ಯ ಬೀದಿಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸರಕುಗಳ ಡಿಲೆವರಿ ಮಾಡುವುದರಿಂದ, ಕಿರಿಕಿರಿ ಹೆಚ್ಚಾಗುತ್ತಿದೆ.

ವೈಯಕ್ತಿಕ ಕೆಲಸ– ಕಾರ್ಯಗಳಿಗೆ ಹೋಗುವ ಜನರಿಗೆ, ಶಾಲಾ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ವಯೋವೃದ್ಧರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.

260 ಅಪಘಾತ; 125 ಸಾವು

ಪೊಲೀಸ್‌ ಅಧಿಕಾರಿಗಳು ಹೇಳುವಂತೆ ಕಳೆದ ಒಂದು ವರ್ಷದ ಅವಧಿಯ ಅಥಣಿ ಸರ್ಕಲ್ ವೃತ್ತದ ಅಥಣಿ ಕಾಗವಾಡ ಹಾಗೂ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 260 ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಅದರಲ್ಲಿ 125 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.140ಕ್ಕೂ ಹೆಚ್ಚು ಜನ ಗಂಭೀರ ಸ್ವರೂಪದ ಗಾಯಗಳಾಗಿವೆ. ಇದರಲ್ಲಿ ಬಹಳಷ್ಟು ಮಂದಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಗಿದೆ ಎಂಬುದು ಆಘಾತಕಾರಿ ಸಂಗತಿ. ಪಟ್ಟಣದ ಮುಖ್ಯ ವೃತ್ತದಲ್ಲಿ ಹಾಗೂ ಅನೇಕ ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲಿದಿರುವುದು ದೊಡ್ಡ ಕಾರಣ. ಅಂಬೇಡ್ಕರ್ ವೃತ್ತ ಶಿವಯೋಗಿ ವೃತ್ತ ಮತ್ತು ಬಸವೇಶ್ವರ ವೃತ್ತಗಳಲ್ಲಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಕಂಡುಬರುತ್ತದೆ. ನ್ಯಾಯಾಲಯದ ಸಂಕೀರ್ಣ ರಸ್ತೆಯಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಯ ಎದುರಿನ ರಾಷ್ಟ್ರೀಕೃತ ಬ್ಯಾಂಕುಗಳ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಪ್ರತಿನಿತ್ಯ  ಜನಜಂಗುಳಿ ಮತ್ತು ವಾಹನಗಳ ಸವಾರರ ಅಬ್ಬರ ಜೋರಾಗಿರುತ್ತದೆ. ಪಟ್ಟಣದಲ್ಲಿನ ಪ್ರಮುಖ ರಸ್ತೆಗಳು ಅಗಲವಾಗಿದ್ದರೂ ಕೂಡ  ಅಂಗಡಿಕಾರರು ಫುಟ್ಪಾತ್ ಅತಿಕ್ರಮಣ ಮಾಡಿ ರಸ್ತೆಗಳ ಮೇಲೆ  ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಲಾರಿಗಳದ್ದೇ ಹಾವಳಿ

ಕೆಲ ತಿಂಗಳ ಒನ್‌ಸೈಡ್‌ ಪಾರ್ಕಿಂಗ್‌ ವ್ಯವಸ್ಥೆಯಿತ್ತು. ಇತ್ತಚೇಗೆ ಅದು ಕಾಣುತ್ತಿಲ್ಲ. ಈಗ ಎರಡು ಬದಿಗೆ ವಾಹನ ನಿಲ್ಲಿಸುವುದರಿಂದ ವಾಹನ ದಟ್ಟಣೆ ಉಟಾಂಗುತ್ತದೆ. ಭಾರಿ ವಾಹನಗಳು ದಿನ ಪೂರ್ತಿ ಒಳಗಡೆ ಬರುವುದರಿಂದ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಭಾರಿ ಗಾತ್ರದ ವಾಹನಗಳನ್ನು ಮುಂಜಾನೆ ಸಮಯ ಮಾತ್ರ ಸೀಮಿತ ಮಾಡಿದರೆ ಸಮಸ್ಯೆ ಬಗೆಹರಿಯಬಹುದು ಎನ್ನುವುದು ಸಾರ್ವಜನಿಕರ ಆಗ್ರಹ. ಸಂಚಾರ ವ್ಯವಸ್ಥೆ ಸುಗಮಗೊಳಿಸಬೇಕಾದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಕೊರತೆ ಕಾಡುತ್ತಿದೆ. ಎರಡು ರಾಜ್ಯ ಹೆದ್ದಾರಿಗಳಿಗೆ ಬೈಪಾಸ್ ರಸ್ತೆಯನ್ನು ನಿರ್ಮಿಸಬೇಕು. ಅಂಗಡಿ ಕಾರರಿಗೆ ಸರಕುಗಳನ್ನು ಹಂಚುವ ವಾಹನಗಳಿಗೆ ರಾತ್ರಿ ವೇಳೆಯಲ್ಲಿ ಇಲ್ಲವೇ ಮುಂಜಾನೆ ಮಾತ್ರ ಅವಕಾಶ ನೀಡಬೇಕು. ಇದರಿಂದ ಅರ್ಧದಷ್ಟು ಆದರೂ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂಬುದು ಅಥಣಿ ನಾಗರಿಕರ ಒತ್ತಾಸೆ.

ಇವರೇನಂತಾರೆ?

ಕಳೆದ ಸರ್ಕಾರದ ಅವಧಿಯಲ್ಲಿ ₹177 ಕೋಟಿ ಅನುದಾನದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಥಣಿ ಪಟ್ಟಣದ ಮಾರ್ಗವಾಗಿ ಎರಡು ಪ್ರಮುಖ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಭಾರಿ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತಿವೆ. ಇಂತಹ ವಾಹನಗಳ ಸಂಚಾರಕ್ಕಾಗಿ ಬೈಪಾಸ್ ರಸ್ತೆ ನಿರ್ಮಾಣ ಶೀಘ್ರ ಮಾಡಬೇಕು –ಪ್ರಶಾಂತ ತೋಡಕರ ಅಧ್ಯಕ್ಷ ಅಥಣಿ ಜಿಲ್ಲಾ ಹೋರಾಟ ಸಮಿತಿ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒನ್‌ಸೈಡ್‌ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು. ಪ್ರಮುಖ ವೃತ್ತಗಳಲ್ಲಿ ಎಲ್ಲ ಕಡೆ ‘ಪೇ ಪಾರ್ಕಿಂಗ್‌’ ವ್ಯವಸ್ಥೆಯಾಗಬೇಕು. ಇಲ್ಲವಾದಲ್ಲಿ ಸಂಚಾರ ಸಮಸ್ಯೆ ಮಾತ್ರವಲ್ಲದೇ ಅಫಘಾತಗಳಿಗೂ ಆಹ್ವಾನ ನೀಡಿದಂತೆ ಆಗುತ್ತದೆ –ಗೋವಿಂದ ಗಾಡಿವಡ್ಡರ್ ಸಾಮಾಜಿಕ ಕಾರ್ಯಕರ್ತ

ಅಥಣಿ ಪಟ್ಟಣದ ಹಲ್ಯಾಳ ವೃತ್ತದಲ್ಲಿ   ಸಂಚಾರ ದಟ್ಟಣೆ – ಪ್ರಜಾವಾಣಿ ಚಿತ್ರ
ಅಥಣಿ ಪಟ್ಟಣದ ಹಲ್ಯಾಳ ವೃತ್ತದಲ್ಲಿ   ಸಂಚಾರ ದಟ್ಟಣೆ – ಪ್ರಜಾವಾಣಿ ಚಿತ್ರ
ಅಥಣಿ ತಾಲ್ಲೂಕು ಆಸ್ಪತ್ರೆಯ ಎದುರಿಗೆ ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡಲಾದ ಬೈಕ್‌ಗಳು – ಪ್ರಜಾವಾಣಿ ಚಿತ್ರ
ಅಥಣಿ ತಾಲ್ಲೂಕು ಆಸ್ಪತ್ರೆಯ ಎದುರಿಗೆ ಬೇಕಾಬಿಟ್ಟಿ ಪಾರ್ಕಿಂಗ್‌ ಮಾಡಲಾದ ಬೈಕ್‌ಗಳು – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT