ಭಾನುವಾರ, ಜೂನ್ 26, 2022
22 °C
ಕಡಲೆ: 3,508 ರೈತರ ನೋಂದಣಿ, ಈವರೆಗೆ 36,251 ಕ್ವಿಂಟಲ್‌ ಖರೀದಿ

ರೈತರ ಕೈ ಹಿಡಿದ ಬೆಂಬಲ ಬೆಲೆ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸರ್ಕಾರವು ಬೆಂಬಲ ಬೆಲೆ ಯೋಜನೆಯಲ್ಲಿ ಕಡಲೆಯನ್ನು ಉತ್ತಮ ಬೆಲೆಗೆ ಖರೀದಿ ಮಾಡುತ್ತಿರುವುದರಿಂದ ಅನುಕೂಲವಾಗಿದೆ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗಿದೆ.

ಕ್ವಿಂಟಲ್‌ ಕಡಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಸರಾಸರಿ ₹ 4,500 ಇದೆ. ಸರ್ಕಾರವು ₹ 5,230ಕ್ಕೆ ಖರೀದಿಸುತ್ತಿದೆ. ಅಲ್ಲದೇ, ಹಣ ದೊರೆಯುವ ಖಾತ್ರಿಯೂ ಇದೆ. ಹೀಗಾಗಿ, ಬೆಳೆಗಾರರು ಬೆಂಬಲ ಬೆಲೆ ಕೇಂದ್ರಗಳ ಮೂಲಕ ಮಾರುವುದಕ್ಕೆ ಮುಂದಾಗುತ್ತಿದ್ದಾರೆ. ನಿಯಮಗಳ ಪ್ರಕಾರ ಅಲ್ಲಿ ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್‌ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ರೈತರಿಂದ ಅಗತ್ಯ ದಾಖಲೆಗಳನ್ನು ಪಡೆಯಲಾಗಿದ್ದು, ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 2021ರಲ್ಲಿ 1.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿತ್ತು. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಸವದತ್ತಿ ಭಾಗದಲ್ಲಿ ಬೆಳೆ ಹಾನಿಯಾಗಿತ್ತು. ಈ ನಡುವೆ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದ್ದರಿಂದ ಬೆಂಬಲ ಬೆಲೆ ಯೋಜನೆಯಲ್ಲಿ ಕಡಲೆ ಖರೀದಿಸಬೇಕು ಎನ್ನುವ ಒತ್ತಾಯ ರೈತರಿಂದ ಕೇಳಿಬಂದಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, ಫೆಬ್ರುವರಿ ಹಾಗೂ ಬಳಿಕ ಕ್ರಮೇಣ ಖರೀದಿ ಪ್ರಕ್ರಿಯೆ ಶುರುವಾಗಿದೆ.

9 ಕೇಂದ್ರಗಳು:

ಜಿಲ್ಲೆಯಲ್ಲಿ ಕಡಲೆಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪ್ರದೇಶಗಳಾದ ಅಥಣಿ ತಾಲ್ಲೂಕಿನ ಕನ್ನಾಳ, ಅಥಣಿ ಹಾಗೂ ತೆಲಸಂಗ, ಸವದತ್ತಿ ತಾಲ್ಲೂಕಿನಲ್ಲಿ ಸವದತ್ತಿ, ಮುರಗೋಡ, ರಾಮದುರ್ಗ ತಾಲ್ಲೂಕಿನಲ್ಲಿ ರಾಮದುರ್ಗ, ಹುಲಕುಂದ, ಬೈಲಹೊಂಗಲ ತಾಲ್ಲೂಕಿನ ಬೈಲಹೊಂಗಲ ಹಾಗೂ ದೊಡ್ಡವಾಡ ಮತ್ತು ಗೋಕಾಕದಲ್ಲಿ ಸೇರಿ ಒಟ್ಟು 9 ಕೇಂದ್ರಗಳನ್ನು ತೆರೆಯಲಾಗಿದೆ. ನೋಂದಣಿ ಹಾಗೂ ಖರೀದಿ ಎಲ್ಲವೂ ಸೇರಿ 90 ದಿನಗಳ ಕಾಲಾವಕಾಶ ನೀಡಲಾಗಿದೆ. ರೈತರು ನೋಂದಣಿ ಮಾಡಿಕೊಂಡಿದ್ದು, ಉತ್ಪನ್ನದ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಏ.28ರವರೆಗೆ 3,508 ರೈತರು ನೋಂದಣಿ ಮಾಡಿಕೊಂಡಿದ್ದಾರೆ. 36,251 ಕ್ವಿಂಟಲ್‌ ಖರೀದಿಸಲಾಗಿದೆ. ಈವರೆಗೆ 2,956 ಮಂದಿ ಯೋಜನೆಯ ಉಪಯೋಗ ಪಡೆದಿದ್ದಾರೆ. 552 ಮಂದಿ ಇನ್ನೂ ಮಾರಬೇಕಿದೆ. ಈವರೆಗೆ ₹3.45 ಕೋಟಿ ಅನುದಾನ ದೊರೆತಿದ್ದು, ₹2.50 ಕೋಟಿಯನ್ನು ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಂಡಳಿಯ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಹಣ ಪಾವತಿ:

‘ನಮ್ಮ ವ್ಯಾಪ್ತಿಯ ಎಲ್ಲ ನಾಲ್ಕು ಕೇಂದ್ರಗಳಲ್ಲೂ ಕಡಲೆ ಖರೀದಿ ಪ್ರಕ್ರಿಯೆ ನಡೆದಿದೆ. 1,481 ಮಂದಿ ನೋಂದಣಿ ಮಾಡಿಕೊಂಡಿದ್ದು, ಈವರೆಗೆ 16ಸಾವಿರ ಕ್ವಿಂಟಲ್‌ ಖರೀದಿಸಲಾಗಿದೆ. ನೋಂದಣಿ ಪ್ರಕ್ರಿಯೆ ಏ.30 ಕಡೆಯ ದಿನವಾಗಿದ್ದು, ಖರೀದಿಗೆ ಮೇ 14ವರೆಗೆ ಅವಕಾಶವಿದೆ. ದಾಖಲೆಗಳನ್ನು ನೀಡಲಾಗಿದ್ದು, ಮಾರಿದವರಿಗೆ ಹಣವನ್ನು ನೇರವಾಗಿ ಪಾವತಿಸಲಾಗುತ್ತಿದೆ. ಇನ್ನೂ 500ಕ್ಕೂ ಹೆಚ್ಚಿನವರು ಮಾರಾಟ ಮಾಡಬೇಕಿದೆ’ ಎಂದು ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ಗೋಕಾಕ ಶಾಖೆಯ ವ್ಯವಸ್ಥಾಪಕಿ ಗಾಯತ್ರಿ ಪವಾರ ತಿಳಿಸಿದರು.

‘ನಮ್ಮದು ಮಳೆ ಆಶ್ರಿತ ಕಪ್ಪುಮಣ್ಣಿನ ಜಮೀನು. ಈ ಬಾರಿ ಕಡಲೆ ಉತ್ತಮ ಫಸಲು ಬಂದಿದೆ. ಸಹೋದರರೆಲ್ಲರದ್ದೂ ಸೇರಿ 40 ಎಕರೆಗೂ ಜಾಸ್ತಿ ಪ್ರದೇಶದಲ್ಲಿ ಕಡಲೆ ಬೆಳೆದಿದ್ದೇವೆ. ಹೊರಗೆ ಕ್ವಿಂಟಲ್‌ಗೆ ₹ 4,500 ಇತ್ತು. ಸರ್ಕಾರ ಬೆಂಬಲ ಬೆಲೆ ಯೋಜನೆಯಲ್ಲಿ ₹ 5,230 ನಿಗದಿಪಡಿಸಿದ್ದರಿಂದ ಅನುಕೂಲವಾಗಿದೆ. ಬ್ಯಾಂಕ್‌ ಖಾತೆಗೆ ಹಣ ಬಂದಿದೆ’ ಎಂದು ತೆಲಸಂಗದ ರೈತ ಈಶ್ವರ ಉಂಡೋಡಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು