ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸುವರ್ಣಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಹಾಕಿ ಕೆಲಸ ಕಳೆದುಕೊಂಡ ಮಹಿಳೆ

Last Updated 1 ಜೂನ್ 2022, 7:31 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಮೆಟ್ಟಿಲುಗಳನ್ನು ಶಾವಿಗೆ ಒಣಗಿಸಲು ಮಹಿಳಾ ಕಾರ್ಮಿಕರೊಬ್ಬರು ಬಳಸಿದ್ದು, ಅದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಹರಿದಾಡಿದವು.

ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲವ್ವ ಎಂಬುವವರು ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಟ್ಟೆ ಹಾಸಿ, ಶಾವಿಗೆ ಒಣಗಿಸಲು ಹಾಕಿದ್ದರು. ಬೆಳಿಗ್ಗೆ ಸೈಕ್ಲಿಂಗ್‌ ಹೋಗಿದ್ದ ಕೆಲವರು ಇದನ್ನು ಕಂಡು ಫೋಟೊ ತೆಗೆದು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟರು. ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ಹರಿದಾಡಿದವು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶಾವಿಗೆ ತೆಗೆಸಿದರು.

‘₹400 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಸೌಧಕ್ಕೆ ಕಾರ್ಯದರ್ಶಿಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಈ ಭಾಗದ ಜನರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಇಂದಿಗೂ ಅದು ಈಡೇರಿಲ್ಲ. ಸುವರ್ಣ ಸೌಧದಲ್ಲಿ ಈಗ ಜಿಲ್ಲಾಮಟ್ಟದ ಕೆಲವು ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಆದರೆ, ಶೇ 20ರಷ್ಟು ಕೂಡ ಬಳಕೆಯಲ್ಲಿ ಇಲ್ಲ. ಆದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾಗ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಜನ ಬೇಸರ ವ್ಯಕ್ತಪಡಿಸಿದರು.

‘ವರ್ಷಕ್ಕೋ, ಎರಡು ವರ್ಷಕ್ಕೋ ಒಮ್ಮೆ ಚಳಿಗಾಲದ ಅಧಿವೇಶನಕ್ಕಾಗಿ ಇದನ್ನು ಬಳಸುತ್ತಾರೆ. ಉಳಿದಂತೆ ಭೂತಬಂಗಲೆಯಂತೆ ಬಿಟ್ಟುಬಿಡುತ್ತಾರೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆ ಮಾಡಬೇಕು, ಇಡೀ ಸರ್ಕಾರ ಉತ್ತರ ಕರ್ನಾಟಕ ಜೊತೆಗೂ ಇದೆ ಎಂಬ ಭಾವನೆ ಮೂಡಬೇಕು ಎಂಬ ಉದ್ದೇಶದಿಂದ ಈ ಸೌಧ ನಿರ್ಮಿಸಲಾಗಿದೆ. ಆದರೆ, ಕೊಟ್ಟ ಮಾತಿನಂತೆ ಯಾವುದೇ ಸರ್ಕಾರ ನಡೆದುಕೊಳ್ಳಲಿಲ್ಲ. ಹೀಗಾಗಿ, ಅದು ಶಾವಿಗೆ ಒಣಗಿಸಲು ಬಳಕೆಯಾಗುತ್ತಿದೆ‘ ಎಂಬ ವ್ಯಂಗ್ಯವವನ್ನೂ ಜನ ಹೊರಹಾಕಿದ್ದಾರೆ.

ಅರಿಯದೇ ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡ ಮಲ್ಲವ್ವ:

ಮಲ್ಲವ್ವ ಅವರು ಸುವರ್ಣ ವಿಧಾನಸೌಧದಲ್ಲಿ ಏಜೆನ್ಸಿ ಮೂಲಕ ದಿನಗೂಲಿ ಕೆಲಸ ಮಾಡುತ್ತಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಶಾವಿಗೆ ಖರೀದಿಸಿದ್ದ ಅವರು, ತಂಪಿನ ವಾತಾವರಣದಿಂದ ಅವು ಕೆಡಬಾರದು ಎಂದು ಸೌಧದ ಮೆಟ್ಟಿಲುಗಳ ಮೇಲೆ ಒಣಗಿಸಲು ಹಾಕಿದ್ದರು. ವಿಷಯದ ಗಂಭೀರತೆ ಅರಿಯದ ಮಲ್ಲವ್ವ ಈ ರೀತಿ ಮಾಡಿದ್ದಾಗಿ ಮಾಧ್ಯಮದವರಿಗೆ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಲ್.ಭೀಮನಾಯ್ಕ, ‘ಈ ವಿಷಯ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ, ಒಣಗಿಸಲು ಹಾಕಿದ್ದ ಶಾವಿಗೆ ತೆಗೆದಿದ್ದೇವೆ. ಮಲ್ಲವ್ವ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT