ಬುಧವಾರ, ನವೆಂಬರ್ 13, 2019
25 °C

ಕ್ರೀಡೆಯಲ್ಲಿ ‍ಪಾಲ್ಗೊಳ್ಳಲು ಅಂಗಡಿ ಸಲಹೆ

Published:
Updated:
Prajavani

ಬೆಳಗಾವಿ: ‘ಮಕ್ಕಳು ಸದೃಢ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಇಲ್ಲಿನ ಗೋವಾವೇಸ್ ಬಳಿಯ ರೋಟರಿ–ಪಾಲಿಕೆ ಸ್ಪೋರ್ಟ್ಸ್ ಅಕಾಡೆಮಿ ಈಜುಗೊಳದಲ್ಲಿ ಮರಾಠಾ ಯುವಕ ಸಂಘದ ವತಿಯಿಂದ ಭಾನುವಾರ ನಡೆದ ಜಿಲ್ಲಾಮಟ್ಟದ ಅಂತರಶಾಲಾ ಮತ್ತು ಅಂತರಕಾಲೇಜುಗಳ ಈಜು ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬದಲಾದ ಕಾಲಘಟ್ಟದಲ್ಲಿ ಮಕ್ಕಳು, ಯುವಕ, ಯುವತಿಯರು ಈಜು ಸ್ಪರ್ಧೆಯತ್ತ ಹೆಚ್ಚಿನ ಒಲವು ತೋರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

‘ನಗರದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು. ರೈಲ್ವೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಮರಾಠಾ ಬ್ಯಾಂಕ್‌ ಅಧ್ಯಕ್ಷ ಲಕ್ಷ್ಮಣ ಹೊನಗೇಕರ, ಮರಾಠಾ ಯುವಕ ಸಂಘದ ಅಧ್ಯಕ್ಷ ಬಾಳಾಸಾಹೇಬ ಕಾಕತಕರ, ಕಾರ್ಯಾಧ್ಯಕ್ಷ ರಘುನಾಥ ಭಾಂಡಗಿ, ಉಪಾಧ್ಯಕ್ಷ ಮಾರುತಿ ದೇವಗೇಕರ, ಕಾರ್ಯದರ್ಶಿ ಚಂದ್ರಕಾಂತ ಗುಂಡಕಲ್ಲ, ಮುಖಂಡರಾದ ಮೋಹನ ಸಪರೆ, ವಿಶ್ವಾಸ ಪವಾರ, ಶೇಖರ ಹಂಡೆ, ವಿಕಾಸ ಕಲಘಟಗಿ ಇದ್ದರು.

ಪ್ರತಿಕ್ರಿಯಿಸಿ (+)