ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ–ದೆಹಲಿ ಮಧ್ಯೆ ವಿಮಾನಯಾನ ಮತ್ತೆ ಆರಂಭ

Published 5 ಅಕ್ಟೋಬರ್ 2023, 16:11 IST
Last Updated 5 ಅಕ್ಟೋಬರ್ 2023, 16:11 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ಹಾಗೂ ದೇಶದ ರಾಜಧಾನಿ ದೆಹಲಿ ಮಧ್ಯೆ ನೇರ ವಿಮಾನಯಾನ ಮತ್ತೆ ಆರಂಭವಾಗಿದೆ. ಇಂಡಿಗೋ ಸಂಸ್ಥೆಯ ಆರಂಭಿಸಿದ ವಿಮಾನ ಹಾರಾಟಕ್ಕೆ, ಸಮೀಪದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ದೆಹಲಿಯಿಂದ ಮೊದಲ ಬಾರಿಗೆ ಬಂದಿಳಿದ ವಿಮಾನದಲ್ಲಿ 116 ಪ್ರಯಾಣಿಕರು ಇದ್ದರು. ಅದೇ ವಿಮಾನದಲ್ಲಿ ಇಲ್ಲಿಂದ ದೆಹಲಿದೆ 135 ಮಂದಿ ಹಾರಿದರು. ಗುರುವಾರ ಮಧ್ಯಾಹ್ನ 3.45ಕ್ಕೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನಕ್ಕೆ ವಾಟರ್‌ ಕ್ಯಾನನ್ ಸೆಲ್ಯೂಟ್ ನೀಡಲಾಯಿತು.

ಈ ಮುಂಚೆಯೂ ಬೆಳಗಾವಿ– ದೆಹಲಿ ಮಧ್ಯೆ ನೇರ ವಿಮಾನ ಹಾರಾಟ ಇತ್ತು. ಕಾರಣಾಂತರಗಳಿಂದ ವಿಮಾನ ಸಂಸ್ಥೆಗಳು ಸಂಚಾರ ನಿಲ್ಲಿಸಿದ್ದವು. ಇದರಿಂದಾಗಿ ಜನರು ಹುಬ್ಬಳ್ಳಿ ಅಥವಾ ಗೋವಾ ವಿಮಾನ ನಿಲ್ದಾಣಗಳಿಗೆ ಹೋಗಿ ವಿಮಾನ ಏರಬೇಕಾದ ಅನಿವಾರ್ಯ ಬಂದಿತ್ತು.

ಈ ಸಮಸ್ಯೆ ನೀಗಿಸುವಂತೆ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಹಲವು ಪ್ರಯಾಣಿಕರು, ಉದ್ಯಮಿಗಳು, ಶಿಕ್ಷಣ ವಲಯದವರು ಒತ್ತಾಯ ಮಾಡುತ್ತಲೇ ಇದ್ದರು. ಹತ್ತಿ ತಿಂಗಳ ಬಳಿಕ ಜನರ ಬೇಡಿಕೆ ಈಡೇರಿದೆ.

ಸಮಯ ಹೇಗೆ?: ಪ್ರತಿ ದಿನ ದೆಹಲಿಯಿಂದ ಮಧ್ಯಾಹ್ನ 3.45ಕ್ಕೆ ಹೊರಡುವ ಈ ವಿಮಾನವು ಸಂಜೆ 6.05ಕ್ಕೆ ಸಾಂಬ್ರಾ ವಿಮಾನ ನಿಲ್ದಾಣ ತಲುಪುತ್ತದೆ. ಇಲ್ಲಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿ ತಲುಪಲಿದೆ.

ಇನ್‌ಸ್ಟ್ರುಮೆಂಟ್‌ ಲ್ಯಾಂಡಿಂಗ್‌ ಸಿಸ್ಟಂ (ಐಎಲ್ಎಸ್) ವ್ಯವಸ್ಥೆಯನ್ನು ಈ ವಿಮಾನಕ್ಕೆ ಅಳವಡಿದ್ದು ವಿಶೇಷ. ಮೋಡ ಕವಿದ ವಾತಾವರಣ, ಮಳೆಯಂಥ ವಿಷಮ ಸ್ಥಿತಿಗಳಲ್ಲೂ ಈ ವಿಮಾನ ಹಾರಾಟ ನಡೆಸುವುದಕ್ಕೆ ಐಎಲ್‌ಎಸ್‌ ವ್ಯವಸ್ಥೆ ನೆರವಾಗುತ್ತದೆ.

‘ಬೆಳಗಾವಿ- ದೆಹಲಿ ಸೆಕ್ಟರ್‌ನಲ್ಲಿ ಇಂಡಿಗೋದ ಮೊದಲ ವಿಮಾನವು ಬಂದಿಳಿದಿದೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ತ್ಯಾಗರಾಜನ್ ತಿಳಿಸಿದ್ದಾರೆ.

ಈ ವೇಳೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸೀಫ್‌ ಸೇಠ್‌, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್, ಪೈಲಟ್ ಅಕ್ಷಯ ಪಾಟೀಲ,  ಸಾಗರ ಏರ್ಪೋರ್ಟ್ ಅಥಾರಿಟಿ ಅಡ್ವೈಸರ್‌ ಸದಸ್ಯ ಸಂಜಯ ಬಂಡಾರಿ, ಈರಣ್ಣ ದಯಣ್ಣವರ, ಅನುಪ್‌ ಕಾಟಿ, ಗುರುದೇವ ಪಾಟೀಲ, ಪ್ರಿಯಾಂಕಾ ಹಜರೇಕರ, ಜ್ಯೋತಿ ಶೆಟ್ಟಿ, ಬಿಜೆಪಿ ಮಾಧ್ಯಮ ಪ್ರಮುಖ ಶರದ್‌ ಪಾಟೀಲ ಬಂಡಾರಿ ಇದ್ದರು.

ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿ

‘ಈಗ ರಾಜ್ಯದಲ್ಲಿ 9 ವಿಮಾನ ನಿಲ್ದಾಣಗಳಿವೆ. ಇನ್ನೂ ಮುರು ಸಿದ್ಧತೆಯಲ್ಲಿವೆ. ವಿಮಾನ ಹಾರಾಟದಲ್ಲೂ ಸ್ಪರ್ಧೆ ಏರ್ಪಟ್ಟಿದೆ. ಆದ್ದರಿಂದ ಸಾಂಬ್ರಾಮ ವಿಮಾನ ನಿಲ್ದಾಣ ಅಭಿವೃದ್ಧಿಗೆ ಬೇಕಾದ ಜಮೀನು ನೀಡಿ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮನವಿ ಮಾಡಿದ್ದೇವೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು. ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಬೆಳಗಾವಿ– ದೆಹಲಿ ವಿಮಾನ ಹಾರಾಟ ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದೆ. ಈ ವಿಮಾನ ನಿಲ್ದಾಣ ಲಾಭದಾಯಕ ಆಗಲು ಇನ್ನಷ್ಟು ಶ್ರಮ ಹಾಕಬೇಕಿದೆ. ಸದ್ಯ ಪ್ರತಿ ದಿನ ಕೇವಲ ಎರಡೂವರೆ ತಾಸಿನಲ್ಲಿ ದೆಹಲಿ ತಲುಪಲು ಸಾಧ್ಯವಾಗುತ್ತಿದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಹೆಜ್ಜೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT