ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಕೊನೆಯ ಗ್ರಾಮ ಹಿರೇತಡಸಿ ಕಡೆಗಣನೆ

ಶೌಚಾಲಯ ಬಳಸದೆ ಬಯಲು ಬಹಿರ್ದೆಸೆ ನೆಚ್ಚಿಕೊಂಡ ಜನ
Published 29 ನವೆಂಬರ್ 2023, 4:24 IST
Last Updated 29 ನವೆಂಬರ್ 2023, 4:24 IST
ಅಕ್ಷರ ಗಾತ್ರ

ರಾಮದುರ್ಗ: ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಪ್ರತಿಯೊಂದು ಗ್ರಾಮಗಳನ್ನು ಸಮನಾಗಿ ಕಾಣಬೇಕು ಎಂಬ ನಿಯಮ ಇದ್ದರೂ ತಾಲ್ಲೂಕಿನ ಕೊನೆಯ ಹಳ್ಳಿ ಎನ್ನುವ ಕಾರಣಕ್ಕೆ ಹಿರೇತಡಸಿ ಗ್ರಾಮವನ್ನು ಕಡೆಗಣಿಸಲಾಗಿದೆ.

ಹೊಸಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಹಿರೇತಡಸಿ ಗ್ರಾಮವು ಹೊಸಕೇರಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಹೆಸರಿಗೆ ಮಾತ್ರ ಮೂಲ ಸೌಲಭ್ಯಗಳು ಲಭ್ಯವಾಗಿದ್ದರೂ ಪರಿಪೂರ್ಣವಾಗಿ ಪೂರೈಕೆಯಾಗಿಲ್ಲ. ಕೊನೆಯ ಹಳ್ಳಿ ಎನ್ನುವುದರಿಂದ ಇಲ್ಲಿ ಸೌಲಭ್ಯಗಳು ಲಭಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿಸಿದೆ.

ಹಿರೇತಡಸಿ ಗ್ರಾಮವು ಮಾತ್ರ ಶುಚಿತ್ವ ಕಾಯ್ದುಕೊಳ್ಳುವಲ್ಲಿ ಅತ್ಯಂತ ಹಿಂದೆ ಬಿದ್ದಿದೆ. ಗ್ರಾಮದಲ್ಲಿ ನಿರ್ಮಿಸಿಕೊಂಡಿರುವ ಶೌಚಾಲಯದ ಬಳಕೆಗೆ ಜನ ಮುಂದಾಗದೇ ಬಯಲು ಬಹಿರ್ದೆಸೆಗೆ ವಾಲಿಕೊಂಡಿದ್ದಾರೆ. ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ಮಲ ವಿಸರ್ಜನೆಯ ದುರ್ವಾಸನೆ ಮೂಗಿಗೆ ತಾಗುತ್ತದೆ.

ಗ್ರಾಮದಲ್ಲಿ ಹೊಸಕೇರಿ ಗ್ರಾಮದ ಕೊಳವೆ ಬಾವಿಯಿಂದ ಫ್ಲೋರೈಡ್‌ ಮಿಶ್ರಿತ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇಲ್ಲಿಯ ತನಕವೂ ಬಹುಗ್ರಾಮ, ಜಲ ಜೀವನ್‌ ಮಷಿನ್‌ ಯೋಜನೆಗಳು ಜಾರಿಯಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಆರಂಭಗೊಂಡಿಲ್ಲ. ಹೀಗಾಗಿ ಜನ ಲಭ್ಯವಿರುವ ನೀರನ್ನು ಕುಡಿದು ರೋಗಕ್ಕೆ ತುತ್ತಾಗುತ್ತಿದ್ದಾರೆ. ಈಗೀಗ ಆರಂಭಗೊಂಡಿರುವ ಜಲ ಜೀವನ್‌ ಮಷಿನ್‌ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ರಸ್ತೆ ಮೇಲೆ ನಿಂತಿರುವ ಗಲೀಜು ನೀರು ಸೊಳ್ಳೆಗಳ ಕಾಟ ಒಂದೆಡೆಯಾದರೆ ಮುಖ್ಯ ರಸ್ತೆ ಪಕ್ಕದಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಗಿಡಗಳಿಂದ ಆಕ್ರಮಿಸಿಕೊಂಡು ವಿಷ ಜಂತುಗಳ ತಾಣವಾಗಿದೆ. ಬರುವ ಬೆರಳಣಿಕೆಯಷ್ಟು ಬಸ್‌ಗಳನ್ನು ತಪ್ಪಿಸಿಕೊಂಡರೆ ಪಕ್ಕದ ಗ್ರಾಮಗಳಿಗೆ ಹೋಗಲು ಇಲ್ಲಿನವರು ಪರದಾಡಬೇಕಿದೆ.

ಮೂರು ವರ್ಷದ ಮುಂಚೆ ಪ್ರವಾಹ ಬಂದಾಗ ಬಹುತೇಕ ರಸ್ತೆಗಳು ಹಾಳಾಗಿ ಇನ್ನೂ ದುರಸ್ತಿ ಕಂಡಿಲ್ಲ. ಗ್ರಾಮಗಳಲ್ಲಿ ಇನ್ನೂವರೆಗೆ ಕಾಂಕ್ರೀಟ್‌ ರಸ್ತೆಗಳ ನಿರ್ಮಾಣವೇ ಆಗಿಲ್ಲ. ಪಂಚಾಯ್ತಿ ಇಲ್ಲಿನವರ ಗೋಳಿಗೆ ಕ್ಯಾರೆ ಎನ್ನುತ್ತಿಲ್ಲ. ಗ್ರಾಮದಲ್ಲಿ ಪಂಚಾಯ್ತಿಯ ಚುನಾಯಿತ ಪ್ರತಿನಿಧಿಗಳು ಇಲ್ಲದೆ ಸೌಲಭ್ಯಗಳು ಸೋರಿಹೋಗುತ್ತಿವೆ. ಹೀಗಾದರೆ ಕೊನೆಯ ಹಳ್ಳಿಯ ಜನ ಪಾಡೇನು ಎಂದು ಕೆಲವರು ಪ್ರಶ್ನಿಸಿದರು.

ಗ್ರಾಮದಲ್ಲಿ ಒಟ್ಟು 1200 ಕುಟುಂಬಗಳಿವೆ. ಗ್ರಾಮವು ತೀರ ಇಕ್ಕಟ್ಟಾಗಿದ್ದರಿಂದ ವಿಶಾಲವಾದ ರಸ್ತೆಗಳಿಲ್ಲ. ಕೆಲವು ಕಡೆ ಡಾಂಬರ್‌ ಇಲ್ಲವೇ ಕಾಂಕ್ರೀಟ್‌ ಕಾಣದ ರಸ್ತೆಗಳು ಗ್ರಾಮ ವಾಸಿಗಳಿಗೆ ಶಾಪವಾಗಿ ಪರಿಣಮಿಸಿವೆ.

ಕೊನೆಯ ಹಳ್ಳಿ ಎಂಬ ಹಣೆಪಟ್ಟಿಯಿಂದ ಗ್ರಾಮದಲ್ಲಿ ಸೌಲಭ್ಯಗಳು ಇಲ್ಲದಾಗಿದೆ. ಪಂಚಾಯ್ತಿ ಇತ್ತ ಇಣುಕಿ ನೋಡುತ್ತಿಲ್ಲ. ರಸ್ತೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಿದೆ
ಬಸವರಾಜ ಜಾಧವ ಹಿರೇತಡಸಿ ಗ್ರಾಮಸ್ಥ
ಪಂಚಾಯ್ತಿ ಕ್ರಿಯಾಯೋಜನೆಯಡಿ ಕಾಮಗಾರಿ ಕೈಗೊಂಡು ಶೀಘ್ರದಲ್ಲಿ ಹಿರೇತಡಸಿ ರಸ್ತೆಯಲ್ಲಿನ ತೊಂದರೆಗಳನ್ನು ನಿವಾರಿಸಲಾಗುವುದು. ರೋಗ ಹರಡದಂತೆ ಜಾಗೃತಿ ವಹಿಸಲಾಗುವುದು
ಬಲರಾಮ ನಾಯಕ ಪಿಡಿಒ ಹೊಸಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT