ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪಾಲಿಕೆ ವ್ಯಾಪ್ತಿಯಲ್ಲಿವೆ 22 ಸಾವಿರಕ್ಕೂ ಅಧಿಕ ಬೀದಿನಾಯಿಗಳು

Published 25 ಮಾರ್ಚ್ 2024, 8:24 IST
Last Updated 25 ಮಾರ್ಚ್ 2024, 8:24 IST
ಅಕ್ಷರ ಗಾತ್ರ

ಬೆಳಗಾವಿ: ಕಳೆದ ವಾರ ಇಬ್ಬರು ಯುವತಿಯರು ರೈಲು ನಿಲ್ದಾಣಕ್ಕೆ ಹೊರಟಿದ್ದಾಗ ಬೀದಿನಾಯಿಗಳ ಹಿಂಡು ಬೆನ್ನಟ್ಟಿ ಬಂತು. ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರೂ ಯುವತಿಯರು ಬಿದ್ದು ಗಾಯ ಮಾಡಿಕೊಂಡರು.

* ಫೆ.26ರಂದು 12 ಬೀದಿನಾಯಿಗಳ ಹಿಂಡು ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿತು. ನಾಲ್ವರು ಕಂದಮ್ಮಗಳು ತೀವ್ರ ಗಾಯಗೊಂಡರು.

* ಶಾಹೂನಗರದ ಹಿರಿಯರೊಬ್ಬರು ವಾಯುವಿಹಾರಕ್ಕೆ ಹೊರಟಾಗ ನಾಯಿಗಳ ಹಿಂಡು ಅಟ್ಟಾಡಿಸಿ ಕಚ್ಚಿತು. ಪರಿಣಾಮ ಮಹಿಳೆ ಕೆಎಲ್‌ಇ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು.

* ಆಜಮ್‌ನಗರದಲ್ಲಿ ತರಕಾರಿ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯ ಬೈಕ್‌ ಬೆನ್ನಟ್ಟಿದ ನಾಯಿಗಳ ಹಿಂಡು ಅವರನ್ನು ಬೀಳಿಸಿ ಗಾಯಗೊಳ್ಳುವಂತೆ ಮಾಡಿದವು.

* ಎಂ.ಕೆ.ಹುಬ್ಬಳ್ಳಿ, ಚನ್ನಮ್ಮನ ಕಿತ್ತೂರು, ಚಿಕ್ಕೋಡಿ, ಮುಗಳಖೋಡ, ಕಾಕತಿ, ಹುಕ್ಕೇರಿ... ಹೀಗೆ ಒಂದಿಲ್ಲೊಂದು ಕಡೆ ನಾಯಿ ದಾಳಿಗೆ ಒಳಗಾದವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಇವೆಲ್ಲ ಒಂದೇ ವರ್ಷದಲ್ಲಿ ಸಂಭವಿಸಿದ ಘಟನೆಗಳು. ಮಾಧ್ಯಮಗಳಿಗೆ ತಿಳಿಯದೇ ಉಳಿದ ಪ್ರಕರಣಗಳು ಲೆಕ್ಕಕ್ಕೇ ಇಲ್ಲ.

ಬೀದಿನಾಯಿಗಳು ಇಷ್ಟೆಲ್ಲ ಕಷ್ಟ ತಂದೊಡ್ಡಿದರೂ ಮಹಾನಗರ ಪಾಲಿಕೆ ಮಾತ್ರ ಇವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರ ಆಕ್ರೋಶಗೊಂಡಾಗ ಮಾತ್ರ ‘ಆ‍‍ಪರೇಷನ್‌ ಡಾಗ್‌’ ಹೆಸರಲ್ಲಿ ಕೆಲವು ನಾಯಿಗಳನ್ನು ಹಿಡಿಯುತ್ತಾರೆ. ಕೆಲವೇ ದಿನಗಳಲ್ಲಿ ಈ ಆಪರೇಷನ್‌ ಕೂಡ ವಿಫಲವಾಗಿ ಮತ್ತೆ ನಾಯಿಗಳ ಉಪಟಳ ಹೆಚ್ಚಾಗುತ್ತದೆ.

2022ರಿಂದ ಮಹಾನಗರ ಪಾಲಿಕೆ ‘ಆಪರೇಷ್‌ ಡಾಗ್‌’ ಮುಂದುವರಿಸಿದೆ. ಈಗಲೂ ಪ್ರತಿವಾರ 200 ನಾಯಿಗಳ ಆಪರೇಷನ್‌ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಲೇ ಇದ್ದಾರೆ. ಇದು ಯಶಸ್ವಿಯಾಗಿದ್ದರೆ ನಾಯಿಗಳ ಸಂಖ್ಯೆ ಕಡಿಮೆ ಆಗಬೇಕಿತ್ತು. ಅದಕ್ಕೆ ವಿರುದ್ಧವಾಗಿ ಹೆಚ್ಚುತ್ತಲೇ ಆಗಿದೆ. ಇಲ್ಲಿನ ಜಿಲ್ಲಾಸ್ಪತ್ರೆ, ಕೆೆಎಲ್‌ಇ ಆಸ್ಪತ್ರೆಗಳಲ್ಲಿ ನಾಯಿ ನಂಜು ನಿವಾರಕ ಇಂಜೆಕ್ಷನ್‌ ಪಡೆದವರ ಸಂಖ್ಯೆಯೇ ಇದನ್ನು ದೃಢೀಕರಿಸುತ್ತದೆ.

2024ರ ಜನವರಿಯಿಂದಲೇ ಲೆಕ್ಕ ಹಾಕಿದರೆ ಬರೋಬ್ಬರಿ 22 ಸಾವಿರಕ್ಕೂ ಅಧಿಕ ಬೀದಿನಾಯಿಗಳು ನಗರದಲ್ಲಿ ಮಾತ್ರ ಇವೆ ಎನ್ನುವುದು ಪಾಲಿಕೆ ಅಧಿಕಾರಿಗಳೇ ನೀಡುವ ಮಾಹಿತಿ.

ಕಳೆದ ವರ್ಷ ಇದಕ್ಕಾಗಿ ಐದು ತಂಡಗಳನ್ನು ಸಿದ್ಧ ಮಾಡಲಾಗಿತ್ತು. ಒಂದು ವಾರ ಕಾರ್ಯಾಚರಣೆ ನಡೆಸಿದ ತಂಡಗಳು ಮಾಯವಾದವು. ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿತ್ತು. ‘ಪೆಟ್‌ ಟ್ರ್ಯಾಕರ್‌’ ಬಳಸಿ ನಾಯಿಗಳನ್ನು ಹಿಡಿಯಲಾಗುತ್ತು. ಸದ್ಯ ಈಗಲಾದರೂ ನಾಯಿ ಉಪಟಳ ತಪ್ಪಿತು ಎಂದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಆ ನೆಮ್ಮದಿ ಬಹಳ ದಿನ ಉಳಿಯಲಿಲ್ಲ.

ಬೆಳಗಾವಿ ನಗರದ ಬೀದಿಬೀದಿಯಲ್ಲೂ ಈಗ ನಾಯಿಗಳ ದೊಡ್ಡ ದಂಡೇ ಇದೆ. ಪಾದಚಾರಿ ಆಗಿದ್ದರೂ ಸರಿ ವಾಹನ ಸವಾರರಾಗಿದ್ದರೂ ಸರಿ; ಎಲ್ಲೆಂದರಲ್ಲಿ ಬೀಡುಬಿಟ್ಟ ನಾಯಿಗಳು ಬೆನ್ನಟ್ಟದೇ ಬಿಡಲಾರವು. ನಗರದ ಪ್ರತಿ ಗಲ್ಲಿಯಲ್ಲೂ ಈಗ ‘ಬೌಬೌ ಸಂಘಗಳು’ ಹೆಚ್ಚು ಕ್ರಿಯಾಶೀಲವಾಗಿವೆ.

ನಗರ ಮಾತ್ರವಲ್ಲ; ಜಿಲ್ಲೆಯ ಬಹುಪಾಲು ಪಟ್ಟಣಗಳಲ್ಲೂ ಜನ ಬೀದಿ ನಾಯಿಗಳ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಹಗಲಿನಲ್ಲಿ ಬೆನ್ನಟ್ಟಿ ಕಾಡುವ ನಾಯಿಗಳಿಂದ ಹೇಗೋ ತಪ್ಪಿಸಿಕೊಳ್ಳಬಹುದು. ಆದರೆ, ತಡರಾತ್ರಿಯಲ್ಲೂ ಎಡೆಬಿಡದೇ ಬೌಗುಡುವ ಆ ಹಿಂಡಿನ ಹಿಂಸೆ ತಾಳಲು ಸಾಧ್ಯವಿಲ್ಲ.

ನಗರದಲ್ಲಿ ಸಂತಾನಶಕ್ತಿ ನಿಯಂತ್ರಣ ಚಿಕಿತ್ಸೆ ಮಾಡಲು ಅನಿಮಲ್‌ ಬರ್ಥ್‌ ಕಂಟ್ರೋಲ್‌ ಸೆಂಟರ್‌ (ಎಬಿಸಿ) ಇದೆ. ಆದರೆ, ಪಾಲಿಕೆ ಆಚೆಗೆ ಇರುವ ನಾಯಿಗಳು ಹೇಳುವವರು, ಕೇಳುವವರೇ ಇಲ್ಲ. ಆಡಿದ್ದೇ ಆಟ– ಬೊಗಳಿದ್ದೇ ನಾದ ಎನ್ನುವಂತಾಗಿದೆ.

2023ನೇ ಸಾಲಿನಲ್ಲಿ 1900ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು ಪತ್ತೆಯಾಗಿವೆ. 2017ರಿಂದ ಇಲ್ಲಿಯವರೆಗೆ ಪಂತ ಬಾಳೇಕುಂದ್ರಿ, ಚಿಕ್ಕೋಡಿ ಸೇರಿ ಎರಡು ಸಾವು ಸಂಭವಿಸಿವೆ.

ಬೆಳಗಾವಿಯ ಕಾಮತ್‌ ಗಲ್ಲಿಯಲ್ಲಿ ಬೀದಿನಾಯಿಗಳ ಗುಂಪು
ಬೆಳಗಾವಿಯ ಕಾಮತ್‌ ಗಲ್ಲಿಯಲ್ಲಿ ಬೀದಿನಾಯಿಗಳ ಗುಂಪು
ಪಾಲಿಕೆ ವ್ಯಾಪ್ತಿಯಲ್ಲಿ 2022ರ ಜುಲೈನಿಂದ 2024ರ ಫೆಬ್ರುವರಿ ಅವಧಿಯಲ್ಲಿ 3795 ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆ ಮುಂದುವರಿದಿದೆ
ಡಾ.ಸಂಜೀವ ನಾಂದ್ರೆ ಆರೋಗ್ಯಾಧಿಕಾರಿ ಮಹಾನಗರ ಪಾಲಿಕೆ
ಈಚೆಗೆ ರೈಲು ನಿಲ್ದಾಣದ ಕಡೆಗೆ ಹೊರಟಿದ್ದೆ. ಬೆಳಿಗ್ಗೆ 6ರ ಸುಮಾರಿಗೆ ಕಾಂಗ್ರೆಸ್‌ ಬಾವಿಯ ಬಳಿ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು. ಓಡುವ ಭರದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದೇನೆ
ಮನಸ್ವಿ ಬಸ್ತವಾಡಕರ ಕಾಲೇಜು ವಿದ್ಯಾರ್ಥಿನಿ
ಶಾಹೂನಗರ ಉದ್ಯಾನದಲ್ಲಿ ಹೂವು ಕೀಳುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ಮಾಡಿ ಕಾಲಿಗೆ ಕಚ್ಚಿದವು. ನಾನು 7 ಇಂಜೆಕ್ಷನ್‌ ತೆಗೆದುಕೊಳ್ಳವುದು ಅನಿವಾರ್ಯವಾಯಿತು
ಈರವ್ವ ಶಾಹೂ ನಗರ ನಿವಾಸಿ
ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌
ಬೆಳಗಾವಿ ತಾಲ್ಲೂಕಿನ ಪಂಥಬಾಳೇಕುಂದ್ರಿ ಗ್ರಾಮದಲ್ಲಿ 2019ರಲ್ಲಿ ಬೀದಿ ನಾಯಿಗಳ ಹಿಂಡು ಒಂದೂವರೆ ವರ್ಷ ಮಗುವಿನ ಮೇಲೆ ದಾಳಿ ಮಾಡಿತ್ತು. ನಂಜಿನಿಂದ ಮಗು ಮೃತಪಟ್ಟಿತ್ತು. ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ ಮಗುವಿನ ಸಾವಿಗೆ ಪರಿಹಾರವಾಗಿ ಪಾಲಕರಿಗೆ ₹ 10 ಲಕ್ಷ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿಗೆ ಆದೇಶ ನೀಡಿತ್ತು. ಅಲ್ಲದೇ ಇಂಥ ಅಮಾನವೀಯ ದಾಳಿಗಳು ಆಗದಂತೆ ಕ್ರಮ ವಹಿಸಬೇಕು ಎಂದೂ ತಾಕೀತು ಮಾಡಿತ್ತು.
ಹಿಡಿದ ಸ್ಥಳದಲ್ಲೇ ತಂದು ಬಿಡಬೇಕು
2017ಕ್ಕೂ ಮುನ್ನ ಬೀದಿನಾಯಿಗಳನ್ನು ಹಿಡಿದು ಕಾಡಿನಲ್ಲೋ ಊರ ಹೊರಗೋ ಬಿಡಲಾಗುತ್ತಿತ್ತು. ಆದರೆ ಪ್ರಾಣಿಪ್ರಿಯರ ಹೋರಾಟದ ಪರಿಣಾಮ ನಾಯಿಗಳನ್ನು ಕೊಲ್ಲಲು ಬೇರೆಲ್ಲೋ ಬಿಟ್ಟು ಬರಲು ಅವಕಾಶವಿಲ್ಲ. ಅವುಗಳನ್ನು ಹಿಡಿದು ಸಂತಾನ ನಿಯಂತ್ರಣ ಚಿಕಿತ್ಸೆ ನೀಡಬೇಕು. ಬಳಿಕ ಹಿಡಿದ ಸ್ಥಳದಲ್ಲೇ ತಂದು ಬಿಡಬೇಕು ಎಂಬುದು ಕಾನೂನು. ಹೀಗಾಗಿ ಯಾವ ಪ್ರದೇಶದಲ್ಲಿ ನಾಯಿಗಳ ಹಿಂಡು ದೊಡ್ಡದಿದೆಯೋ ಅಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.
ರಾತ್ರಿಯಿಡೀ ನಿದ್ರೆಯಿಲ್ಲ ಕಣ್ಣಿಗೆ...
ಬೀದಿನಾಯಿಗಳ ಹಿಂಡು ರಾತ್ರಿಯಿಡೀ ಒಂದಕ್ಕೊಂದು ಜಿದ್ದಿಗೆ ಬಿದ್ದಂತೆ ಬೊಗಳುತ್ತವೆ. ಇದರಿಂದ ಶಾಲೆ– ಕಾಲೇಜು ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಡಕಾಗಿದೆ. ಅದರಲ್ಲೂ ಆಜಮ್‌ನಗರ ಶಾಹೂನಗರ ಸದಾಶಿವ ನಗರ ನೆಹರೂ ನಗರ ಶಹಾಪುರ ನಾನಾವಾಡಿ ಮುಂತಾದ ಕಡೆಗಳಲ್ಲಿ ಇವುಗಳ ಕಾಟ ಹೆಚ್ಚು. ನಗರದಲ್ಲಿರುವ ಮಾಂಸಾಹಾರಿ ಹೋಟೆಲ್‌ಗಳು ಫಾಸ್ಟ್‌ಫುಡ್‌ ಸೆಂಟರ್‌ಗಳು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದೇ ಇದಕ್ಕೆ ಕಾರಣ. ಮಾಂಸದ ತುಂಡುಗಳು ಬಿದ್ದ ಸ್ಥಳದಲ್ಲಿ ನಾಯಿಗಳ ದೊಡ್ಡ ‘ಸಂಘ’ವೇ ನಿರ್ಮಾಣವಾಗುತ್ತದೆ.
₹1.10 ಕೋಟಿ ಮೀಸಲು
ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ₹25 ಲಕ್ಷ ಅನುದಾನ ಮೀಸಲಿಟ್ಟಿದ್ದರೆ ಬೀದಿನಾಯಿಗಳ ನಿರ್ವಹಣೆಗೆ ₹1.10 ಕೋಟಿ ತೆಗೆದಿರಿಸಿದೆ! ನಗರದಲ್ಲಿ ಬೀದಿನಾಯಿಗಳ ಹಾವಳಿ ಎಷ್ಟು ಗಂಭೀರವಾಗಿ ಎಂಬುದನ್ನು ಈ ಅಂಕಿ–ಸಂಖ್ಯೆಗಳೇ ತೋರಿಸುತ್ತಿವೆ. ಪಾಲಿಕೆಯಲ್ಲಿ ನಡೆಯುವ ಪ್ರತಿ ಸಭೆಯಲ್ಲೂ ಬೀದಿನಾಯಿಗಳ ಹಾವಳಿ ವಿಚಾರ ಪ್ರಸ್ತಾಪವಾಗುತ್ತದೆ. ಆದರೆ ಇದಕ್ಕೆ ಇಂದಿಗೂ ಪರಿಹಾರ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT