ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿಯಿಂದ ಹಸನಾದ ಬದುಕು

ಉಮರಾಣಿ ಗ್ರಾಮದ ರೈತರಿಗೆ ಅನುಕೂಲ
ಅಕ್ಷರ ಗಾತ್ರ

ಚಿಕ್ಕೋಡಿ: ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಗ್ರಾಮವದು. ನಾಲ್ಕೈದು ವರ್ಷಗಳ ಹಿಂದೆ ಎಕರೆಗೆ ಐದಾರು ಸಾವಿರ ರೂಪಾಯಿ ಆದಾಯ ಗಳಿಸುವುದೂ ಕಷ್ಟಸಾಧ್ಯವಾಗಿತ್ತು. ಆದರೆ, ಗ್ರಾಮದ 70 ಜನ ರೈತರು ಕೃಷ್ಣಾ ನದಿಯಿಂದ ಸಾಮೂಹಿಕ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿರುವ ಪರಿಣಾಮವಾಗಿ ಇಂದು ಪ್ರತಿ ಎಕರೆಗೆ ಕನಿಷ್ಠ ₹ 60ಸಾವಿರ ಆದಾಯ ಗಳಿಸುತ್ತಿದ್ದಾರೆ.

ಹೌದು. ತಾಲ್ಲೂಕಿನ ಉಮರಾಣಿ ಗ್ರಾಮದ 70 ಜನ ಕೃಷಿಕರು ಅಳವಡಿಸಿಕೊಂಡಿರುವ ಸಾಮೂಹಿಕ ಏತ ನೀರಾವರಿ ಯೋಜನೆಯಡಿ ಗ್ರಾಮದ ಕುಮಾರ ಮಾರುತಿ ಕಮತೆ ಅವರೂ ಒಬ್ಬರಾಗಿದ್ದಾರೆ. ಜೋಳ, ಹುರಳಿ ಬೆಳೆಯಲು ಸೀಮಿತವಾಗಿದ್ದ ಭೂಮಿಯಲ್ಲಿ ಅವರು ಈಗ ಕಬ್ಬು, ರೇಷ್ಮೆ ಕೃಷಿಯನ್ನೂ ಕೈಗೊಂಡಿದ್ದಾರೆ. ಆದಾಯ ಕಾಣುತ್ತಿದ್ದಾರೆ.

ಕುಮಾರ ಮಾಂಜರೆ ಅವರು ಒಟ್ಟು 4 ಎಕರೆ 36 ಗುಂಟೆ ಜಮೀನು ಹೊಂದಿದ್ದು, ಆ ಪೈಕಿ ಎರಡು ಎಕರೆಗೆ ಕೃಷ್ಣಾ ನದಿಯಿಂದ ಸಾಮೂಹಿಕ ಏತ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದಾರೆ. 21X21 ಆಕಾರದ ಕೃಷಿ ಹೊಂಡವನ್ನೂ ನಿರ್ಮಿಸಿಕೊಂಡಿದ್ದು, ಅದರಲ್ಲಿ ಮಳೆ ನೀರು ಸಂಗ್ರಹಿಸಿ ನೀರಾವರಿಗೆ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುರಿದ ಸಾಧಾರಣ ಮಳೆಯಿಂದಲೇ ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

‘ಎಕರೆಗೆ ಅಸಲು, ಬಡ್ಡಿ ಸೇರಿದಂತೆ ಸಿಂಡಿಕೇಟ್‌ ಬ್ಯಾಂಕ್‌ನಿಂದ ₹ 4 ಲಕ್ಷದಷ್ಟು ಸಾಲ ಪಡೆದಿದ್ದು, ಇದಕ್ಕೂ ಮೊದಲು ಬ್ಯಾಂಕ್‌ನಿಂದ ಸಾಲ ಪಡೆಯಲು ಠೇವಣಿ ಇಡಲಿಕ್ಕಾಗಿ ಸಹಕಾರಿ ವಲಯದ ಹಣಕಾಸು ಸಂಸ್ಥೆಯೊಂದರಿಂದ ₹ 43ಸಾವಿರ ಸಾಲ ಪಡೆದಿದ್ದಾರೆ. ನಾಲ್ಕು ವರ್ಷಗಳಿಂದ ಸಾಮೂಹಿಕ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ‘ಇಲ್ಲಿ ಜೋಳ, ಹುರಳಿ, ಗೋವಿನ ಜೋಳ ಮೊದಲಾದ ಬೆಳೆಗಳಿಂದ ಎಕರೆಯೊಂದರಲ್ಲಿ ಸರಾಸರಿ ₹ 5ಸಾವಿರದಷ್ಟು ಬರುತ್ತಿದ್ದ ಆದಾಯ ಈಗ 10 ಪಟ್ಟು ಹೆಚ್ಚಾಗಿದೆ’ ಎಂದು ಕುಮಾರ ಮಾಂಜರೆ ಹೇಳುತ್ತಾರೆ.

‘ಕುಮಾರ ಮಾಂಜರೆ ಅವರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ₹ 33ಸಾವಿರ ಅನುದಾನದಡಿ ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿ ನಿರ್ಮಿಸಿಕೊಡಲಾಗಿದೆ. ಮಣ್ಣಿನ ಸತ್ವ ಹೆಚ್ಚಿಸುವ ಯೋಜನೆಯಡಿ ₹ 60ಸಾವಿರ ಅನುದಾನದಡಿ ಬಯೋಡೈಜಸ್ಟ್‌ ಘಟಕವನ್ನೂ ನಿರ್ಮಿಸಲಾಗಿದ್ದು, ಅದರಡಿ ಶೇ. 50ರಷ್ಟು ಸಬ್ಸಿಡಿಯನ್ನು ಫಲಾನುಭವಿಗೆ ನೀಡಲಾಗಿದೆ. ಈ ಘಟಕದಲ್ಲಿ ಕೃಷಿ ತ್ಯಾಜ್ಯಗಳನ್ನು ಹಾಕಿ ಕೊಳೆಸುವುದರಿಂದ ಕೀಟ ನಿರೋಧಕ ದ್ರವ್ಯ ಹಾಗೂ ಗೊಬ್ಬರವೂ ತಯಾರಾಗುತ್ತದೆ. ಇದು ಬೆಳೆಗಳಿಗೆ ಹನಿ ನೀರಾವರಿ ಅಥವಾ ಸಿಂಪಡಿಸುವುದರಿಂದ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ’ ಎಂದು ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮೂಹಿಕ ಏತ ನೀರಾವರಿ ಯೋಜನೆ ಅಳವಡಿಸಿಕೊಂಡಿದ್ದೇವೆ. ಯೋಜನೆಗಾಗಿ ಪಡೆದುಕೊಂಡಿರುವ ಸಾಲ ಮತ್ತು ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿದೆ. ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದರೆ ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಸಾಲ ಮರು ಪಾವತಿ ಮಾಡಬಹುದಾಗಿದೆ. ಅದರ ನಂತರ ಹೆಚ್ಚಿನ ಆದಾಯ ಕೈಸೇರಲಿದೆ’ ಎಂದು ಕುಮಾರ ಮಾಹಿತಿ ನೀಡಿದರು. ಸಂಪರ್ಕಕ್ಕೆ ಮೊ: 9741935789.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT