ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಗುರುವಾರ ತಂಡ ರಾತ್ರಿ ಅಪಹರಣ ಮಾಡಲಾಗಿದೆ.
ನಾಗರಾಜ ಅವರು ಪಟ್ಟಣದ ಚೌಕಿಮಠ ದ ಬಳಿ ನಿಂತಾಗ, ಸ್ಕಾರ್ಪಿಯೊ ವಾಹನದಲ್ಲಿ ಬಂದ ಕೆಲವರು ಬಲವಂತವಾಗಿ ನಾಗರಾಜ ಅವರನ್ನು ಎಳೆದುಕೊಂಡು ಕೂಡ್ರಿಸಿ ಅಪಹರಣ ಮಾಡಿದರು ಎಂದು ಪ್ರತ್ಯಕ್ಷದರ್ಶಿ ಒಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಸೆ.3ರಂದು ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಸಮಬಲ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೆಸ್ಸಿಗರು ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
9 ಬಿಜೆಪಿ ಸದಸ್ಯರು, 5 ಕಾಂಗ್ರೆಸ್ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 4 ಪಕ್ಷೇತರ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಗಾದಿಗೆ ಏರಲು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಬಿಜೆಪಿ ಸದಸ್ಯನ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿಯ ಹತ್ತಾರು ಕಾರ್ಯಕರ್ತರು ತಡರಾತ್ರಿಯೇ ಕಿತ್ತೂರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು.