ಸನದಿ ಹೆಸರಲ್ಲಿ ಸ್ಮಾರಕ ನಿರ್ಮಾಣವಾಗಲಿ: ಪ್ರೊ.ಜ್ಯೋತಿ ಹೊಸೂರ ಒತ್ತಾಯ

ಶನಿವಾರ, ಏಪ್ರಿಲ್ 20, 2019
31 °C

ಸನದಿ ಹೆಸರಲ್ಲಿ ಸ್ಮಾರಕ ನಿರ್ಮಾಣವಾಗಲಿ: ಪ್ರೊ.ಜ್ಯೋತಿ ಹೊಸೂರ ಒತ್ತಾಯ

Published:
Updated:

ಬೆಳಗಾವಿ: ‘ತಮ್ಮ ಬರಹಗಳಲ್ಲಿ ಮಾನವೀಯತೆಯನ್ನು ಪ್ರತಿಪಾದಿಸಿದ್ದ ಕವಿ ಬಿ.ಎ. ಸನದಿ ಅವರ ಹೆಸರಲ್ಲಿ ಸ್ಮಾರಕ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಚಿಂತಕಿ ಪ್ರೊ.ಜ್ಯೋತಿ ಹೊಸೂರ ಒತ್ತಾಯಿಸಿದರು.

ಇಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ನಾಡಿನ ಹಿರಿಯ ಕವಿಯಾಗಿದ್ದ ಅವರು, ಜಾತಿ, ಧರ್ಮ ಮೊದಲಾದ ಸಂಕುಚಿತತೆ ತೊರೆದು ವಿಶ್ವಮಾನವೀಯತೆಯನ್ನು ಪ್ರತಿಪಾದಿಸಿದ್ದರು. ಅದರಂತೆಯೇ ಬದುಕಿ ತೋರಿಸಿದರು. ಹೀಗಾಗಿ, ಅವರ ಹುಟ್ಟೂರಾದ ಶಿಂದೊಳ್ಳಿ ಗ್ರಾಮದಲ್ಲಿ, ಕಾರ್ಯನಿರ್ವಹಿಸಿದ ರಾಯಬಾಗ ಹಾಗೂ ಬೆಳಗಾವಿಯ ತಲಾ ಒಂದು ಮುಖ್ಯರಸ್ತೆಗಳಿಗೆ ಸನದಿ ಹೆಸರು ಇಡಬೇಕು. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸರ್ಕಾರ ತೆಗೆದುಕೊಂಡು ನಡೆಸಬೇಕು’ ಎಂದು ಹೇಳಿದರು.

ಸಾಹಿತಿ ಪ್ರೊ.ಬಿ.ಎಸ್. ಗವಿಮಠ ಮಾತನಾಡಿ, ‘ಹೋದಲ್ಲೆಲ್ಲಾ ಕನ್ನಡದ ಕಂಪು ಹರಡಿದ, ಅನೇಕ ಸಂಘ–ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಸನದಿ ಅವರದು. ಎಲ್ಲರಿಗೂ ಅವರು ಆದರ್ಶಪ್ರಾಯವಾಗಿದ್ದಾರೆ’ ಎಂದರು.

ಪ್ರೊ.ಗುರುಪಾದ ಮರಿಗುದ್ದಿ ಮಾತನಾಡಿ, ‘ಸನದಿ ಅವರ ಪ್ರಕಟಿತ ಹಾಗೂ ಅಪ್ರಕಟಿತ ಸಾಹಿತ್ಯವನ್ನೆಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 7–8 ಸಂಪುಟಗಳಲ್ಲಿ ಹೊರತರಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಲೇಖನ ಬಿ.ಬಿ. ಹೊಸಮನಿ, ‘ಸನದಿ ಅಪ್ಪಟ ಭಾರತೀಯ. ಬರಹದಂತೆಯೇ ಬದುಕಿದವರು. ನಾಡು ಕಂಡ ಅಪರೂಪದ ಕವಿ’ ಎಂದು ಸ್ಮರಿಸಿದರು.

ಪ್ರೊ.ಎಲ್.ವಿ. ಪಾಟೀಲ, ಶಿರೀಷ ಜೋಶಿ, ಹೇಮಾ ಸೋನೊಳ್ಳಿ, ಕೆ.ಡಿ. ರೋಗಣ್ಣವರ, ಪ್ರಕಾಶ ಗಿರಿಮಲ್ಲನವರ, ಸುನಂದಾ ಎಮ್ಮಿ, ಬಾಳೇಶ, ಜಿ.ಎಸ್. ಸೋನಾರ, ಸಿ.ಎಂ. ಬೂದಿಹಾಳ, ಎ.ಎ. ಸನದಿ ಮಾತನಾಡಿದರು.

ಜ್ಯೋತಿಬಾ ಅಗಸಿಮನಿ, ಅಕಬರ ಸನದಿ, ಮೋಹನ ಗುಂಡ್ಲೂರ, ಬಿ.ಎಸ್. ಜಗಾಪುರ, ಎಸ್. ತಳವಾರ, ಚಂದ್ರಶೇಖರ ತುರಮುರಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !