ಕಾರ್ಮಿಕರ ಮುಷ್ಕರ; ಬಸ್‌, ಆಟೊ ಬಂದ್‌

7

ಕಾರ್ಮಿಕರ ಮುಷ್ಕರ; ಬಸ್‌, ಆಟೊ ಬಂದ್‌

Published:
Updated:

ಬೆಳಗಾವಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಜ. 8, 9ರಂದು ‘ಭಾರತ್‌ ಬಂದ್‌’ಗೆ ಕರೆ ನೀಡಿವೆ. ಜಿಲ್ಲೆಯಲ್ಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಸಾರಿಗೆ ಬಸ್‌ಗಳ ಸಂಚಾರ, ಆಟೊ ಸಂಚಾರ ವ್ಯತ್ಯಯ ಉಂಟಾಗಲಿದೆ. ಕೆಲವು ಖಾಸಗಿ ಶಾಲಾ– ಕಾಲೇಜುಗಳು ಅನಧಿಕೃತ ರಜೆ ಘೋಷಣೆ ಮಾಡಿವೆ. ಬ್ಯಾಂಕ್‌ಗಳ ಸೇವೆಯಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯುನಿಯೂನ್‌, ಎಲ್‌ಐಸಿ ನೌಕರರ ಸಂಘ ಅಂಗನವಾಡಿ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಆಟೊ ರಿಕ್ಷಾ ಮಾಲೀಕರು ಹಾಗೂ ಚಾಲಕರ ಸಂಘ, ಗ್ರಾಮ ಪಂಚಾಯ್ತಿ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಬ್ಯಾಂಕ್‌ ಕ್ಲರ್ಕ್‌ ಅಂಡ್‌ ಅಟೆಂಡರ್‌ ಯುನಿಯೂನ್‌ ಸೇರಿದಂತೆ ವಿವಿಧ ಸಂಘಗಳ ಸ್ಥಳೀಯ ಮಟ್ಟದ ಘಟಕಗಳು ಬೆಂಬಲ ವ್ಯಕ್ತಪಡಿಸಿವೆ.

ಮೆರವಣಿಗೆ:

‘ನಗರದ ಬೋಗಾರವೇಸ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ. ನಂತರ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಯೂನಿಯನ್‌ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಸಿ.ಎಸ್. ಬಿಡ್ನಾಳ ಹೇಳಿದರು.

‘ಕಾರ್ಮಿಕರ ಹಿತಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ತರಲು ಹೊರಟಿದೆ. ಭಾರಿ ಮೊತ್ತದ ದಂಡ ವಿಧಿಸಲು ಮೋಟಾರ್‌ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಬ್ಯಾಂಕ್‌ಗಳನ್ನು ವಿಲೀನ ಮಾಡುತ್ತಿದೆ. ಇವೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿದ್ದೇವೆ’ ಎಂದು ತಿಳಿಸಿದರು.

ರಜೆ ಇಲ್ಲ– ಡಿ.ಸಿ:

‘ಜಿಲ್ಲೆಯ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಅವು ಕಾರ್ಯನಿರ್ವಹಿಸಲಿವೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !