ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಂಕ್ರಮಣಕ್ಕೆ ಸಜ್ಜೆ ರೊಟ್ಟಿ ಘಮಲು

ಖಡಕ್ ರೊಟ್ಟಿಯಿಂದ ಸ್ವಾವಲಂಬಿಗಳಾದರು
Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ಸಂಕ್ರಮಣ ಬರುತ್ತಿದ್ದಂತೆ ಇಲ್ಲಿನ ಜಾನುವಾರ ಪೇಟೆಯ ಸುತ್ತಲೂ ಇರುವ ಸಾಲು ಸಾಲು ಮನೆಗಳಲ್ಲಿ ಟಪ್‌ ಟಪ್‌ ಎಂದು ಲಯಬದ್ಧವಾಗಿ ಮಹಿಳೆಯರು ರೊಟ್ಟಿ ತಟ್ಟುವ ಸದ್ದು ಕೇಳಿಬರುತ್ತದೆ.

ಇಲ್ಲಿ 15ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು ಅವರೆಲ್ಲ ಉತ್ತರ ಕರ್ನಾಟಕದ ಪ್ರಮುಖ ಖಾದ್ಯವಾಗಿರುವ ರೊಟ್ಟಿ ಮಾಡುವ ಕಾಯಕ ಮಾಡಿಕೊಂಡು ಬಂದಿದ್ದಾರೆ.

ಸಂಕ್ರಮಣ ಹಬ್ಬದ ‘ಬೋಗಿ’ ದಿನ ಮತ್ತು ನದಿಯ ಪುಣ್ಯಸ್ನಾನದ ನಂತರ ಊಟಕ್ಕೆ ಸಜ್ಜೆ ರೊಟ್ಟಿ ಇರಲೇಬೇಕು. ಅಂತೆಯೇ ಸಂಕ್ರಮಣ ಬರುವ ಎರಡು ವಾರಗಳ ಮುಂಚೆಯಿಂದ ಸಾವಿರಾರು ರೊಟ್ಟಿಗಳನ್ನು ಸಿದ್ಧಗೊಳಿಸಿ ಒಪ್ಪವಾಗಿ ಸೇರಿಸಿ ಇಡುತ್ತಾರೆ.

‘ಸಂಕ್ರಮಣದ ಟೈಮದಾಗ್ರೀ ದಿನಕ್ಕ ಸಾವಿರ ರೊಟ್ಟಿ ಮಾಡತ್ತೀವಿರ್ರೀ. ಉಳಿದ ದಿನದಾಗ 200ರಿಂದ 300 ರೊಟ್ಟಿ ಮಾಡತ್ತೀವ್ರೀ’ ಎಂದು ಮೂರು ದಶಕದಿಂದ ರೊಟ್ಟಿ ಮಾಡುವ ಕಾಯಕದಲ್ಲಿರುವ 70 ವಯಸ್ಸಿನ ಕಸ್ತೂರಿ ನಿರ್ವಾಣಿ ಹೇಳಿದರು.

‘ಇವತ್ತು ಒಂದು ಸಾವಿರ ರೊಟ್ಟಿ ಮಾರಾಟ ಆಗ್ಯಾವರೀ’ ಎಂದು ಅಂಗಡಿಯಲ್ಲಿ ಇಟ್ಟು ಮಾರಾಟ ಮಾಡುವ ಪ್ರೇಮಾ ಕಲಾಲ ತಿಳಿಸಿದರು.

ರೊಟ್ಟಿ ಮಾಡುವ ಕಾಯಕದಲ್ಲಿ ಮಹಿಳೆಯರೇ ಇದ್ದು ಸ್ವಾವಲಂಬನೆಗೆ ಉತ್ತಮ ನಿದರ್ಶನವೂ ಆಗಿದೆ.

ಸಜ್ಜೆ ರೊಟ್ಟಿ, ಬಿಳಿಜೋಳದ ರೊಟ್ಟಿ ಮತ್ತು ಗೋವಿನಜೋಳದ ರೊಟ್ಟಿ ಹೀಗೆ ತರಾವರಿಯ ಖಡಕ ರೊಟ್ಟಿಗಳು ವರ್ಷದ ಎಲ್ಲ ದಿನಗಳಲ್ಲಿ ಇಲ್ಲಿ ದೊರೆಯುವುದು ವಿಶೇಷ.

ಕೈಯಿಂದ ಹದವಾಗಿ ಲಟ್ಟಿಸಿ, ಸೌದೆ ಒಲೆಯ ಮೇಲೆ ಮಾಡುವುದರಿಂದ ದೇಸಿ ಸ್ವಾದ ಇಲ್ಲಿಯ ರೊಟ್ಟಿಗಳಿಗೆ ಇದೆ.

ಎಳ್ಳು ಹಚ್ಚಿ ತೆಳ್ಳಗೆ ರೊಟ್ಟಿ ಮಾಡುವುದರಿಂದ ರೊಟ್ಟಿಗಳು ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೆ ಇಷ್ಟವಾಗುತ್ತವೆ.

ಮದುವೆ, ಸೀಮಂತ ಕಾರ್ಯಗಳಿಗೆ 1ಸಾವಿರದಿಂದ 2-3 ಸಾವಿರದವರೆಗೆ ರೊಟ್ಟಿಗಳನ್ನು ಇಲ್ಲಿ ಆರ್ಡರ್‌ ಕೊಡುತ್ತಾರೆ. ಪಟ್ಟಣದಲ್ಲಿ ಎಲ್ಲ ಖಾನಾವಳಿಗಳು, ಬೇರೆ, ಬೇರೆ ಊರುಗಳಿಂದಲೂ ಇಲ್ಲಿಯ ರೊಟ್ಟಿಗಳಿಗೆ ಬೇಡಿಕೆ ಇದೆ.

‘ಸಜ್ಜೆಕಾಳು ಎಳ್ಳು, ಕಟ್ಟಗಿ ಖರ್ಚು ಐತ್ರೀ. ಒಂದು ರೊಟ್ಟಿಗೆ ₹ 3.50 ಇದ್ದು ನೂರು ರೊಟ್ಟಿಗೆ ನೂರು ರೂಪಾಯಿ ಸಿಗತೈತ್ರೀ’ ಎಂದು ಶಾಂತಾ ಪವಾಡಯ್ಯ ನಿರ್ವಾಣಿ ತಿಳಿಸಿದರು.

‘ಹೊಲಕ್ಕ ಕೂಲಿ ಕೆಲಸಕ್ಕ ಹೋಗೋ ಬದಲು ಮನೆಯಲ್ಲಿ ರೊಟ್ಟಿ ಮಾಡುವ ಕೆಲಸ ಮಾಡಾಕತ್ತೈದಿವಿರೀ. ಇದ ಬದುಕಿಗೆ ಆಸರೆ ಆಗೈತ್ರೀ’ ಎನ್ನುತ್ತಾರೆ. ಸಂಪರ್ಕಕ್ಕೆ ಮೊ. ಸಂಖ್ಯೆ: 6363071820.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT