ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿಯೊಂದಿಗೆ ನದಿಗಳನ್ನೂ ರಕ್ಷಿಸಿಕೊಳ್ಳಬೇಕು’

ನಾಡೋಜ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ನ್ಯಾ.ಕೆ.ಎಲ್. ಮಂಜುನಾಥ್
Last Updated 9 ಡಿಸೆಂಬರ್ 2018, 13:43 IST
ಅಕ್ಷರ ಗಾತ್ರ

ಬೆಳಗಾವಿ: ‘ನದಿ ನೀರು ಬಳಕೆ ವಿವಾದಗಳ ನಿರ್ವಹಣೆಯನ್ನು ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿತ್ತು’ ಎಂದು ಗಡಿ ಕಾನೂನು ಸಲಹಾ ಸಮಿತಿ ಅಧ್ಯಕ್ಷ ನ್ಯಾ.ಕೆ.ಎಲ್. ಮಂಜುನಾಥ ಹೇಳಿದರು.

ನಾಡೋಜ ಪ್ರತಿಷ್ಠಾನದಿಂದ ಭಾನುವಾರ ನಡೆದ 16ನೇ ಸಮ್ಮಾನಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಬಾರದೆಂಬ ಉದ್ದೇಶದಿಂದ ಮುಖ್ಯಮಂತ್ರಿಗೆ ನಾನೇ ಪತ್ರ ಬರೆದಿದ್ದೆ. ಗಡಿ ಕಾನೂನು ಸಲಹಾ ಸಮಿತಿ ವ್ಯಾಪ್ತಿಯನ್ನು ವಿಸ್ತರಿಸಿ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗ ರಚಿಸುವಂತೆ ಕೋರಿದ್ದೆ. ಅದು ಈಗ ಸಾಧ್ಯವಾಗಿದೆ. ಗಡಿ ಹಾಗೂ ನದಿಗಳ ರಕ್ಷಣೆಗೆ ದುಡಿಯುವ ಕೆಲಸ ನನ್ನದಾಗಿದೆ. ಇದಕ್ಕಾಗಿ ನಾನು ಶುಲ್ಕ ಪಡೆಯುತ್ತಿಲ್ಲ. ನಾಡು, ನುಡಿಗೆ ಕೊಡುಗೆ ನೀಡುವ ಕೆಲಸವನ್ನು ವಕೀಲನಾಗಿದ್ದಾಗಿನಿಂದಲೂ ಮಾಡಿದ್ದೇನೆ. ಈಗಲೂ ಮುಂದುವರಿಸಿದ್ದೇನೆ. ಸಾಹಿತಿಗಳಿಗೆ ಸಂಬಂಧಿಸಿದ ಹಲವು ವ್ಯಾಜ್ಯಗಳಲ್ಲಿ ಹಲವು ವರ್ಷಗಳವರೆಗೆ ಉಚಿತವಾಗಿ ಕಾನೂನು ಸೇವೆ ನೀಡಿದ್ದೇನೆ’ ಎಂದು ತಿಳಿಸಿದರು.

ಘೋಷಿಸಬೇಕು:ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ ಮಾತನಾಡಿ, ‘ಮಹಾರಾಷ್ಟ್ರ ಸರ್ಕಾರವು ನಾಗಪುರವನ್ನು 2ನೇ ರಾಜಧಾನಿ ಎಂದು ಘೋಷಿಸಿದಂತೆ ಕರ್ನಾಟಕ ಸರ್ಕಾರವೂ ಕ್ರಮ ಕೈಗೊಳ್ಳಬೇಕು. ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಘೋಷಿಸಬೇಕು. ವಿಧಾನಸೌಧದಲ್ಲಿರುವ ಪ್ರಮುಖ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಇಂದಿನ ಕಾಲಮಾನಕ್ಕೆ ತಕ್ಕಂತೆ ಪರಿಷ್ಕರಿಸಲಾಗಿರುವ ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಹಿಡಿಯಾಗಿ ಸ್ವೀಕರಿಸಬೇಕು ಹಾಗೂ ಕನ್ನಡಿಗರಿಗೆ ಸರ್ಕಾರಿ ಉದ್ಯೋಗ ದೊರೆಯುವಂತೆ ನೋಡಿಕೊಳ್ಳಬೇಕು. ವರದಿಗೆ ಕಾನೂನಿನ ಬಲ ಸಿಗುವಂತೆಯೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತು 10 ವರ್ಷಗಳಾಗಿವೆ. ಆದರೆ, ತಮಿಳುನಾಡಿನಲ್ಲಿ ಆಗಿರುವಷ್ಟು ಕೆಲಸಗಳು ಇಲ್ಲಿ ಆಗಿಲ್ಲ. ಸರ್ಕಾರವು ಕೂಡಲೇ ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಾಪನೆ ಸ್ಥಳವನ್ನು ಅಂತಿಮಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಸ್ತುತ ದಿನಗಳಲ್ಲಿ ಕೆಲವರ ಹೋರಾಟಗಳನ್ನು ಗಮನಿಸಿದಾಗ, ಪ್ರದರ್ಶನವೋ ಅಥವಾ ತೋರಿಕೆಯೋ ಎನಿಸುತ್ತದೆ. ಆದರೆ, ಮರಾಠಿಯ ಪ್ರಭಾವವಿದ್ದ ಬೆಳಗಾವಿಯಲ್ಲಿ ದಶಕಗಳ ಹಿಂದೆ ನಡೆದ ಹೋರಾಟಗಳಿಗೆ ಮೌಲ್ಯವಿದೆ. ಅವು ಆದರ್ಶದ ಹೋರಾಟಗಳು’ ಎಂದು ಹೇಳಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಶ್ರೀವಾಸ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಧ್ಯಕ್ಷ ರಾಘವೇಂದ್ರ ಜೋಶಿ ಪರಿಚಯಿಸಿದರು. ಗೌರವಾಧ್ಯಕ್ಷ ಎಂ.ಜಿ. ಗಲಗಲಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT