ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಿತ್ತೂರು ಭಾಗದಲ್ಲಿ ಸಕ್ಕರೆ ಕಾರ್ಖಾನೆ

ಸಹಕಾರ ಸಂಘದ 46ನೇ ಶಾಖೆ ಉದ್ಘಾಟನೆ: ಪ್ರಭಾಕರ ಕೋರೆ ಹೇಳಿಕೆ
Last Updated 4 ಅಕ್ಟೋಬರ್ 2021, 3:15 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಕಿತ್ತೂರು ಭಾಗದಲ್ಲಿ ಕಬ್ಬು ಬೆಳೆ ಹೆಚ್ಚಾಗಿದೆ. ಇಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಆಸಕ್ತಿ ಹೊಂದಿದ್ದೇನೆ’ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ಬಾನಿ ಮಳಿಗೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಕೋರೆ ಸೌಹಾರ್ದ ಸಹಕಾರ ಸಂಘದ 46ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಕಾರದಡಿ ಅಥವಾ ಸ್ವಂತ ಮಾಲೀಕತ್ವದಡಿ ಕಾರ್ಖಾನೆ ಸ್ಥಾಪಿಸಲು ಸಿದ್ಧನಿದ್ದೇನೆ. ಅದಕ್ಕೆ ಬೇಕಾಗುವ ಸೂಕ್ತ ಸ್ಥಳ ನಿಗದಿ ಮಾಡುವ ಜವಾಬ್ದಾರಿಯನ್ನು ಶಾಸಕ ದೊಡ್ಡಗೌಡರ ಅವರಿಗೆ ನೀಡಿದ್ದೇನೆ’ ಎಂದರು.

‘ಕೋರೆ ಸೌಹಾರ್ದ ಸಂಸ್ಥೆ ಮೂರು ದಶಕದಲ್ಲಿ ₹ 1,100 ಕೋಟಿ ಠೇವಣಿ ಸಂಗ್ರಹಿಸಿದೆ. ₹ 860 ಕೋಟಿ ಸಾಲ ನೀಡಿದೆ. ಇದರಲ್ಲಿ ರೈತರಿಗೆ ನೀರಾವರಿ ಸೌಲಭ್ಯಕ್ಕಾಗಿಯೇ ಶೇ 85 ರಷ್ಟು ಸಾಲ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ‘ಕೋರೆ ಅವರು ರೈತರ ಜೊತೆ ಸನಿಹದ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಕಾರ್ಖಾನೆಯ ಭರವಸೆ ನಿಮಗೆ ನೀಡಿದ್ದಾರೆ’ ಎಂದರು.

‘ಸಹಕಾರ ಕ್ಷೇತ್ರಕ್ಕೂ ಹಾಗೂ ಬೆಳಗಾವಿಗೆ ಅವಿನಾಭಾವ ಸಂಬಂಧವಿದೆ. ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಜಿಲ್ಲೆ ಈ ರಂಗದಲ್ಲಿ ಕೆಲಸ ಮಾಡಿದೆ’ ಎಂದು ಹೇಳಿದರು.

ನೂತನ ಶಾಖೆ ಉದ್ಘಾಟಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಸಹಕಾರ ಸಂಘಗಳು ನೆರವಿಗೆ ಬರದೇ ಇದ್ದರೆ, ರಾಷ್ಟ್ರೀಕೃತ ಬ್ಯಾಂಕುಗಳ ಎದುರು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತಿತ್ತು’ ಎಂದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚನಬಸಪ್ಪ ಮೊಕಾಶಿ, ಅಪ್ಪಣ್ಣ ಪಾಗಾದ, ಡಾ. ಬಸವರಾಜ ಪರವಣ್ಣವರ, ವಿಜಯ ಮೆಟಗುಡ್ಡ, ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳೇಗಡ್ಡಿ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಸಾಣಿಕೊಪ್ಪ, ರವೀಂದ್ರ ಇನಾಮದಾರ, ಕಿರಣ ಪಾಟೀಲ, ಕಿರಣ ವಾಳದ, ಮೋದಿನಸಾಬ ಹವಾಲ್ದಾರ,ಸಂದೀಪ ಕಲಘಟಗಿ, ಶಿವಾನಂದ ಹನುಮಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT