ಭಾನುವಾರ, ಸೆಪ್ಟೆಂಬರ್ 22, 2019
27 °C
ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿಕೆ

ಎನ್‌ಎಸ್‌ಎಸ್‌ ಚುಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ

Published:
Updated:
Prajavani

ಬೆಳಗಾವಿ: ‘ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯ 160 ತಾಂತ್ರಿಕ ಕಾಲೇಜುಗಳಲ್ಲಿ ಎನ್‌ಎಸ್ಎಸ್ ಘಟಕಗಳನ್ನು  ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದರು.

ಇಲ್ಲಿನ ವಿಟಿಯುನಲ್ಲಿ ‘ಬದಲಾವಣೆಯಾಗುತ್ತಿರುವ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜ ಸೇವೆಯ ಪಾತ್ರ’ ವಿಷಯ ಕುರಿತು ಶುಕ್ರವಾರ  ಆಯೋಜಿಸಿದ್ದ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘‌ಇಂದಿನ ಯುವಜನರ ಮೇಲೆ ಗುರುತರವಾದ ಜವಾಬ್ದಾರಿಗಳಿವೆ. ಯುವಕರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಮಾಹಿತಿ ಸಂಗ್ರಹಿಸಿ, ನೀತಿ ನಿರೂಪಕರಿಗೆ ವಿನಿಮಯ ಮಾಡಿಕೊಳ್ಳುವಂತಹ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉದ್ಘಾಟಿಸಿದ ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ವಾಸ್ತವ ಪ್ರಪಂಚಕ್ಕೆ ಸ್ಪಂದಿಸುವಂತಹ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಮಾನವೀಯತೆ, ನೈತಿಕತೆ ಹಾಗೂ ಮಾನವ ಜೀವನದ ಶೈಲಿಯನ್ನು ನಿರ್ಮಿಸುವುದು ಶಿಕ್ಷಣದ ಉದ್ದೇಶವಾಗಬೇಕು. ಯುವಜನರು ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ಪುನರರೂಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್‌ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಗಣನಾಥ ಶೆಟ್ಟಿ ಯಕ್ಕರ, ಪಿ.ಎನ್. ಸಂತೋಷ ಇದ್ದರು.

ಪರೀಕ್ಷಾ ವಿಭಾಗದ ಕುಲಸಚಿವ ಡಾ.ಸತೀಶ ಅಣ್ಣಿಗೇರಿ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ.ಅಪ್ಪಾಸಾಬ ಎಲ್.ವಿ. ವಂದಿಸಿದರು.

ಸೆ. 7ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ದೇಶದ ವಿವಿಧ ಕಾಲೇಜುಗಳ 500 ಎನ್ಎಸ್‌ಎಸ್‌ ಸ್ವಯಂಸೇವಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

Post Comments (+)