ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೇ ನಲುಗುತ್ತಿರುವ ಕನ್ನಡ ಭವನ

Last Updated 21 ಅಕ್ಟೋಬರ್ 2017, 5:19 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಡಗಾವಿಯಲ್ಲಿ ರಾಜ್ಯ ಸರ್ಕಾರ ನಿರ್ಮಿಸಿರುವ ಗಡಿ ಕನ್ನಡ ಭವನ ಸಮರ್ಪಕ ನಿರ್ವಹಣೆ ಇಲ್ಲದೆ ನಲುಗುತ್ತಿದೆ. ಭವನ ನಿರ್ಮಿಸಿ ಹಾಗೂ ಲೋಕಾರ್ಪಣೆಗೊಂಡು ವರ್ಷಗಳೇ ಕಳೆದರೂ ಭವನವನ್ನು ಬಳಸುವ ಕೆಲಸ ನಡೆಯುತ್ತಿಲ್ಲ. ಇದರಿಂದಾಗಿ, ಈ ಭಾಗದ ಕನ್ನಡಿಗರ ಅಸ್ಮಿತೆಯನ್ನು ಗೌರವಿಸಿ ನಿರ್ಮಿಸಿದ್ದ ಭವನವೊಂದು ಇದ್ದೂ ಇಲ್ಲದಂತಾಗಿದೆ. ಇತ್ತ ಗಮನಹರಿಸಬೇಕಾದ ಜಿಲ್ಲಾಡಳಿತವೂ ನಿರ್ಲಕ್ಷ್ಯ ವಹಿಸಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2006ರಲ್ಲಿ ಭವನದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. 2015ರ ರಾಜ್ಯೋತ್ಸವ ದಿನದಂದು ಉದ್ಘಾಟನೆಯೂ ನೆರವೇರಿದೆ. ಸಮರ್ಪಕವಾಗಿ ನಿರ್ವಹಣೆ ಕಾಣದೆ ಇರುವುದರಿಂದ, ಇಲ್ಲಿ ಯಾವುದೇ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.

ಕಾರ್ಯಕ್ರಮ ಆಯೋಜಿಸುವುದಕ್ಕೆ ಬೇಕಾದ ಆಸನಗಳು ಮೊದಲಾದ ಮೂಲಸೌಲಭ್ಯಗಳೂ ಇಲ್ಲಿಲ್ಲ. ಗಡಿನಾಡಿನಲ್ಲಿ ಕನ್ನಡದ ಕಂಪು ಸೂಸಬೇಕಾಗಿದ್ದ ಭವನವೊಂದು ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಮಂಕಾಗಿ ನಿಂತಿದೆ. ಹಾಳು ಸುರಿಯುತ್ತಿದೆ. ಸಭಾಂಗಣ ದೂಳಿನ ಮಜ್ಜನ ಮಾಡುತ್ತಿದೆ.

ಕೇಳಿದ್ದರೂ ಕೊಟ್ಟಿಲ್ಲ: ಭವನದ ನಿರ್ವಹಣೆಯ ಹೊಣೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕಕ್ಕೆ ವಹಿಸುವಂತೆ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಅಧ್ಯಕ್ಷತೆಯಲ್ಲಿ ಕೆಲ ತಿಂಗಳುಗಳ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಅಲ್ಲಿ ಮೂಲಸೌಲಭ್ಯಗಳ ಕೊರತೆ ಇರುವುದರಿಂದ, ಸಮ ರ್ಪಕವಾಗಿ ಬಳಕೆಯಾಗುತ್ತಿಲ್ಲ. ಆಸನಗಳು, ವಿದ್ಯುತ್‌ ಸಂಪರ್ಕ, ಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿ ಕೊಳವೆಬಾವಿ ಇದ್ದು ಅದನ್ನು ಪುನಶ್ಚೇತನಗೊಳಿಸಬೇಕು.

ನೀರಿನ ಟ್ಯಾಂಕ್‌ ಅಳವಡಿಸಬೇಕು. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಗೇಟ್ ಹಾಗೂ ಕಾಂಪೌಂಡ್‌ ನಿರ್ಮಿಸಬೇಕು. ವಿದ್ಯುದ್ವೀಪಗಳನ್ನು ಅಳವಡಿಸಬೇಕು. ಇದಕ್ಕೆ ಕಸಾಪ ಸಿದ್ಧವಿದೆ ಎಂದು ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಎನ್‌. ಜಯರಾಮ್ ಜಿಲ್ಲಾಧಿಕಾರಿ ಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಸಭೆಯಲ್ಲಿ, ಈ ಭವನದ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸುವ ಕುರಿತೂ ನಿರ್ಧರಿಸಲಾಗಿತ್ತು.

ಅದೂ ಕೂಡ ಸಾಧ್ಯವಾಗಿಲ್ಲ. ಇದರಿಂದಾಗಿ, ಯಾರು ನಿರ್ವಹಣೆ ಮಾಡಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಭವನ ನಿರ್ಮಿಸುವಾಗಲೇ ಮಹಾ ರಾಷ್ಟ್ರ ಏಕೀಕರಣ ಸಮಿತಿಯವರು ಕ್ಯಾತೆ ತೆಗೆದಿದ್ದರು. ಎಂಇಎಸ್‌ ಬೆಂಬಲಿತ ಸಂಭಾಜಿ ಪಾಟೀಲ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ, ಭವನದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ ಎನ್ನುವ ಆರೋಪಗಳಿವೆ.

ನಿರ್ವಹಿಸುವವರು ಯಾರು?: ‘2006–07ರಲ್ಲಿ ಅಂದಿನ ಜಿಲ್ಲಾಧಿಕಾರಿ ಶಾಲಿನಿ ರಜನೀಶ್‌ ಅವರು ಮಂಜೂರು ಮಾಡಿದ್ದ ₹ 20 ಲಕ್ಷ ಹಣದಲ್ಲಿ ಕಟ್ಟಲಾದ ಗಡಿ ಭವನದ ಶಂಕುಸ್ಥಾಪನೆ ಸಂದರ್ಭದಲ್ಲಿ ಎಂಇಎಸ್‌ನವರು ಗಲಾಟೆ ಮಾಡಿದ್ದರು. 2008ರಲ್ಲಿ ಭವನದ ಛಾವಣಿ ಕುಸಿಯಿತು. ಇದರ ದುರಸ್ತಿಗೆ ಒತ್ತಾಯಿಸುತ್ತಲೇ ಬರಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ‘ಮುಖ್ಯಮಂತ್ರಿ’ ಚಂದ್ರು ಅವರು ಗಡಿಭವನಕ್ಕೆ ಭೇಟಿ ನೀಡುವಂತೆ ಮಾಡಿದ್ದೆವು.

ದುರಸ್ತಿಗೆ ಜಿಲ್ಲಾಡಳಿತದಿಂದ ಪ್ರಸ್ತಾವನೆಯು ಸರ್ಕಾರಕ್ಕೆ ಸಲ್ಲಿಕೆ ಯಾಗಿ ಆರೇಳು ವರ್ಷಗಳೇ ಕಳೆದಿವೆ. ಇದನ್ನು ಸರ್ಕಾರವಂತೂ ದುರಸ್ತಿ ಮಾಡಿಸುವುದಿಲ್ಲ. ಇದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದರೆ ಅದು ಚೆನ್ನಾಗಿ ನಡೆಯಬಹುದೇನೋ’ ಎನ್ನುವ ಅಭಿಪ್ರಾಯ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರದು.

‘ಸರ್ಕಾರ ಇಂತಹ ಭವನಗಳನ್ನು ನಿರ್ಮಿಸುತ್ತದೆ. ಆದರೆ, ಅದರ ನಿರ್ವಹಣೆ ಜವಾಬ್ದಾರಿ ಯಾರದು ಎಂದು ಹೇಳುವುದಿಲ್ಲ. ಇಲ್ಲಿಯೂ ಅದೇ ಆಗಿದೆ. ಈ ಭವನ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿರದೆ ಉತ್ತರದಲ್ಲಿದ್ದಿದ್ದರೆ ನೆಲಸಮಗೊಂಡು ಮತ್ತೊಂದು ಭವನ ತಲೆ ಎತ್ತುತ್ತಿತ್ತು’ ಎಂದು ಅವರು ‍ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT