ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತೆ ಸೇರಿ ಮೂವರ ಬಂಧನ

Last Updated 20 ಏಪ್ರಿಲ್ 2017, 9:47 IST
ಅಕ್ಷರ ಗಾತ್ರ

ಬೆಳಗಾವಿ: ಮಾದಕ ವಸ್ತು ಬೆರೆಸಿದ್ದ ಎಳನೀರು ಕುಡಿಸಿ ಸ್ನೇಹಿತೆಯನ್ನು ಅಪಹರಿಸಿದ್ದ ಯುವತಿ ಮತ್ತು ಆಕೆಯ ಸಂಗಡಿಗರನ್ನು ಪೊಲೀಸರು ಬುಧವಾರ ಗದಗದಲ್ಲಿ ಬಂಧಿಸಿದ್ದಾರೆ.ಅಪಹರಣಕ್ಕೀಡಾಗಿದ್ದ ಯುವತಿ ಅರ್ಪಿತಾ ನಾಯ್ಕ್‌ ಬೆಳಗಾವಿಯ ಜಿಐಟಿ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ. ಅವರ ತಂದೆ ಗೋವಿಂದ ಪಾಂಡಪ್ಪ ನಾಯ್ಕ್‌ ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದಾರೆ. ಅವರಿಂದ ₹ 5 ಕೋಟಿ ವಸೂಲು ಮಾಡುವ ಉದ್ದೇಶದಿಂದ ಸಂಚು ರೂಪಿಸಿ, ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಡಿಸಿಪಿ ರಾಧಿಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಧಿತ ಯುವತಿ ದಿವ್ಯಾ ಮಲಘಾಣ, ಬಾಗಲಕೋಟೆ ಜಿಲ್ಲೆಯ ಮುಧೋಳದವಳಾಗಿದ್ದು ಓದನ್ನು ಅರ್ಧಕ್ಕೇ ನಿಲ್ಲಿಸಿದ್ದಳು. ಈಕೆಯ ಸ್ನೇಹಿತ ಗದಗಿನ ಕೇದಾರಿ ಪಾಟೀಲ ಹಾಗೂ ಕಾರು ಚಾಲಕ ಬಬ್ಲು ಅಲಿಯಾಸ್‌ ಸಮೀತ ನಭಾಪುರ ಮೂವರೂ ಸೇರಿ ಸೋಮವಾರ ಅರ್ಪಿತಾಳನ್ನು ಅಪಹರಿಸಿದ್ದರು.

ಇಬ್ಬರೂ ಸ್ನೇಹಿತೆಯರು:  ಅರ್ಪಿತಾ ಹಾಗೂ ದಿವ್ಯಾ ಸ್ನೇಹಿತೆಯರಾಗಿದ್ದರು. ದಿವ್ಯಾ ಎಂಜಿನಿಯರಿಂಗ್‌ ವ್ಯಾಸಂಗವನ್ನು ಅರ್ಧಕ್ಕೇ ನಿಲ್ಲಿಸಿದ್ದರೆ, ಅರ್ಪಿತಾ ಮುಂದುವರಿಸಿದ್ದರು. ಅವರ ತಂದೆ ಸದ್ಯ ಧಾರವಾಡದ ಗಾಂಧಿನಗರದಲ್ಲಿ ನೆಲೆಸಿದ್ದರಿಂದ ಬೆಳಗಾವಿಯಲ್ಲಿದ್ದ ಫ್ಲ್ಯಾಟ್‌ನಲ್ಲಿ ಅರ್ಪಿತಾ ವಾಸವಾಗಿದ್ದರು.ಆರೋಪಿಗಳಾದ ದಿವ್ಯಾ, ಗದಗಿನ ಕೇದಾರಿ ಪಾಟೀಲ ಒಟ್ಟಿಗೇ ವಾಸಿಸುತ್ತಿದ್ದರು. ಕೇದಾರಿ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾಗಿದ್ದಾನೆ. ಅರ್ಪಿತಾ ತಂದೆಯ ಬಳಿ ಸಾಕಷ್ಟು ಹಣವಿದೆ ಎಂದು ಲೆಕ್ಕಾಚಾರ ಹಾಕಿದ ಇವರು, ಅಪಹರಣಕ್ಕೆ ತಂತ್ರ ರೂಪಿಸಿದ್ದರು.

ಎಳನೀರಲ್ಲಿ ಮತ್ತು ಬರಿಸುವ ಪದಾರ್ಥ:  ನಗರದ ಬಸ್‌ ನಿಲ್ದಾಣದ ಬಳಿಯ ಹೋಟೆಲ್ಲೊಂದಕ್ಕೆ ಸೋಮವಾರ ಅರ್ಪಿತಾ ಅವರನ್ನು ಊಟಕ್ಕೆಂದು ಕರೆದುಕೊಂಡು ಹೋಗಿದ್ದ
ದಿವ್ಯಾ ಹಾಗೂ ಸಂಗಡಿಗರು, ಊಟದ ನಂತರ, ಮತ್ತು ಬರಿಸುವ ಪದಾರ್ಥ ಸೇರಿಸಿದ್ದ ಎಳನೀರನ್ನು ಕುಡಿಸಿದ್ದಾರೆ. ಆನಂತರ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡು ಗದಗಿಗೆ ಬಂದಿದ್ದಾರೆ. ಅಲ್ಲಿ ಕೇದಾರಿ ವಾಸವಿದ್ದ ಮನೆಯಲ್ಲಿ ಕೂಡಿಹಾಕಿದ್ದಾರೆ. ಮಂಗಳವಾರ ಬೆಳಿಗ್ಗೆ ಎಚ್ಚರಗೊಂಡ ಅರ್ಪಿತಾ, ಧಾರವಾಡದಲ್ಲಿರುವ ತಮ್ಮ ತಂದೆ–ತಾಯಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದರು.

ಆಗ ಅವರಿಂದ ಫೋನ್‌ ಕಸಿದುಕೊಂಡ ಕೇದಾರಿ, ‘ನೀನು ನನ್ನ ತಾಯಿಯನ್ನು ಕೊಂದಿದ್ದೀಯಾ, ಇದರ ಸೇಡು ತೀರಿಸಿಕೊಳ್ಳುತ್ತೇನೆ, ನಾನು ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕಡೆಯವನು’ ಎಂದು ಸುಳ್ಳು ಹೇಳಿ ದಬಾಯಿಸಿದ್ದಾನೆ.ಇದರಿಂದ ಹೆದರಿದ ಪಾಲಕರು ಮಂಗಳವಾರ ಸಂಜೆ ಬೆಳಗಾವಿಯ ಟಿಳಕವಾಡಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು.

ನಾಲ್ಕು ತಂಡ ರಚನೆ: ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ಕು ತಂಡಗಳಲ್ಲಿ ಗದಗಿಗೆ ತೆರಳಿ, ಬುಧವಾರ ಬೆಳಿಗ್ಗೆ ಅಲ್ಲಿಯ ರೈಲು ನಿಲ್ದಾಣದಲ್ಲಿ ಕೇದಾರಿಯನ್ನು ಬಂಧಿಸಿದರು. ನಂತರ ಆತನ ಮನೆಗೆ ತೆರಳಿ, ಇನ್ನಿಬ್ಬರು ಆರೋಪಿಗಳಾದ ದಿವ್ಯಾ ಹಾಗೂ ಕಾರು ಚಾಲಕ ಬಬ್ಲುನನ್ನು ಬಂಧಿಸಿ, ಅರ್ಪಿತಾ ಅವರನ್ನು ರಕ್ಷಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT