ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳು, ಬೆಂಬಲಿಗರಲ್ಲಿ ತಳಮಳ

ಶುಭ–ಸಮಾರಂಭಗಳಲ್ಲಿ ಭಾಗಿ; ಕಾರ್ಯಕರ್ತರೊಂದಿಗೆ ಚರ್ಚೆ
Last Updated 14 ಮೇ 2018, 7:15 IST
ಅಕ್ಷರ ಗಾತ್ರ

ಕಲಬುರ್ಗಿ: ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಣದಲ್ಲಿರುವ ಅಭ್ಯರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಆದಾಗ್ಯೂ, ಅಭ್ಯರ್ಥಿಗಳು, ಅವರ ಬೆಂಬಲಿಗರು ಮತ್ತು ಕಾರ್ಯಕರ್ತರಲ್ಲಿ ತಳಮಳ, ಆತಂಕ ಮನೆಮಾಡಿದೆ.

ಕೆಲವು ಅಭ್ಯರ್ಥಿಗಳು ಕಳೆದ ಆರು ತಿಂಗಳಿನಿಂದ ನಿರಂತರವಾಗಿ ಪಕ್ಷ ಸಂಘಟನೆ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕೆಲವರು ನೀತಿ ಸಂಹಿತೆ ಜಾರಿಯಾದ ದಿನದಿಂದ ಪ್ರಚಾರ, ತಂತ್ರ–ರಣತಂತ್ರದಲ್ಲಿ ತೊಡಗಿಸಿಕೊಂಡಿದ್ದರು. ಹಲವು ಅಭ್ಯರ್ಥಿಗಳು ಟಿಕೆಟ್ ಘೋಷಣೆ ಬಳಿಕ ಪ್ರಚಾರ ಕಾರ್ಯ ಆರಂಭಿಸಿದ್ದರು. ಇದೀಗ ಮತದಾನ ಮುಗಿದಿದೆ.

ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಬಹುತೇಕ ಅಭ್ಯರ್ಥಿಗಳು ದಿನವಿಡೀ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಮತಗಟ್ಟೆ ವಾರು ಮತಗಳು, ಚಲಾವಣೆಯಾದ ಮತಗಳ ಬಗ್ಗೆ ಮಾಹಿತಿ ಪಡೆದರು. ಯಾವ ಗ್ರಾಮಗಳಲ್ಲಿ ತಮ್ಮ ಪರವಾಗಿ ಮತದಾನವಾಗಿದೆ, ಯಾವ ಗ್ರಾಮಗಳಲ್ಲಿ ನೀರಸವಾಗಿದೆ ಎಂಬುದುರ ಮಾಹಿತಿ ಪಡೆದುಕೊಂಡರು. ಕಾರ್ಯಕರ್ತರು ಉತ್ಸಾಹದಿಂದಲೇ ‘ಲೆಕ್ಕ’ ಒಪ್ಪಿಸಿದ್ದಾರೆ.

‘ಜೇವರ್ಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಅವರು ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದಾರೆ. ಅವರ ತಾಯಿ ಪ್ರಭಾವತಿ ಅವರು ಮನೆಯಲ್ಲಿ ಪೂಜೆ ಕೈಗೊಂಡಿದ್ದಾರೆ. ಹೀಗಾಗಿ ಅಜಯಸಿಂಗ್ ಒಬ್ಬರೇ ಶಿರಡಿಗೆ ತೆರಳಿದ್ದಾರೆ’ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿವಾಹ 50ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು. ತಮ್ಮ ನಿವಾಸದಲ್ಲಿ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿದರು.

ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಅವರು ಸೇಡಂನಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ನಂತರ ವಾಡಿಯ ತಮ್ಮ ನಿವಾಸದಲ್ಲಿದ್ದು, ಕಾರ್ಯಕರ್ತರೊಂದಿಗೆ ಮಾತು ಕತೆ ನಡೆಸಿದರು.

‘ಬೆಳಿಗ್ಗೆ ಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿದೆ. ಬಳಿಕ ಆಳಂದ ತಾಲ್ಲೂಕು ಕೊರಹಳ್ಳಿಯಲ್ಲಿ ಆಯೋಜಿಸಿದ್ದ ತಮ್ಮನ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದೆ’ ಎಂದು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರೇವುನಾಯಕ ಬೆಳಮಗಿ ತಿಳಿಸಿದರು. ಇದೇ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಕೂಡ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಅವರು ಕುಟುಂಬದ ಸದಸ್ಯ ರೊಂದಿಗೆ ಕಾಲ ಕಳೆದರು. ಕಲಬುರ್ಗಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನೀಜ್ ಫಾತಿಮಾ ಅವರು ಕೆಲಹೊತ್ತು ಪತ್ರಿಕೆ ಓದಿದರು. ಆ ಬಳಿಕ ತಾವೇ ಅಡುಗೆ ಸಿದ್ಧಪಡಿಸಿಕೊಂಡು ಪುತ್ರ ಫರಾಜುಲ್ ಇಸ್ಲಾಂ ಹಾಗೂ ಕುಟುಂಬದ ಸದಸ್ಯರೊಡನೆ ಸೇರಿ ಊಟ ಮಾಡಿದರು. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇವರ ನಿವಾಸದ ಬಳಿ ಜಮಾವಣೆಗೊಂಡಿದ್ದರು.

ಕಲಬುರ್ಗಿ ಉತ್ತರ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ 3ಗಂಟೆಯವರೆಗೂ ಕಾರ್ಯಕರ್ತರು ಜಮಾಯಿಸಿದ್ದರು. ಬೂತ್ ಮಟ್ಟದಲ್ಲಿ ಎಷ್ಟು ಮತದಾನ ವಾಗಿದೆ, ಕಾರ್ಯಕರ್ತರು ಹೇಗೆ ಕೆಲಸ ಮಾಡಿದ್ದಾರೆ ಎಂಬುದರ ಕುರಿತು ನಾಸಿರ್ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT