50 ಗಣಪನ ಪ್ರತಿಮೆಗಳ ವಿಸರ್ಜನೆ

7
ಶನಿವಾರ ಸಂಜೆಯಿಂದ ಭಾನುವಾರ ನಸುಕಿನ ಜಾವದ ವರೆಗೆ ಮೆರವಣಿಗೆ

50 ಗಣಪನ ಪ್ರತಿಮೆಗಳ ವಿಸರ್ಜನೆ

Published:
Updated:
Deccan Herald

ಹೊಸಪೇಟೆ: ಗಣೇಶನ ಪ್ರತಿಮೆಗಳ ವಿಸರ್ಜನೆ ಶನಿವಾರ ಸಂಜೆಯಿಂದ ಭಾನುವಾರ ನಸುಕಿನ ಜಾವದ ವರೆಗೆ ನಗರದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು.

ಮೂರು ದಿವಸಗಳ ವರೆಗೆ ಪ್ರತಿಷ್ಠಾಪಿಸಿದ್ದ 50ಕ್ಕೂ ಹೆಚ್ಚು ಪ್ರತಿಮೆಗಳನ್ನು ಶ್ರದ್ಧಾ, ಭಕ್ತಿಯ ನಡುವೆ ಇಲ್ಲಿನ ರೈಲು ನಿಲ್ದಾಣ ರಸ್ತೆಯ ತುಂಗಭದ್ರಾ ಕೆಳಮಟ್ಟದ ಕಾಲುವೆಯಲ್ಲಿ ವಿಸರ್ಜಿಸಲಾಯಿತು.

ಚಿಕ್ಕ ಹಾಗೂ ಮಧ್ಯಮ ಗಾತ್ರದ ಪ್ರತಿಮೆಗಳನ್ನು ಯುವಕರೇ ನೀರಿಗಿಳಿದು ವಿಸರ್ಜನೆ ಮಾಡಿದರು. ಬೃಹತ್‌ ಗಾತ್ರದ ಪ್ರತಿಮೆಗಳನ್ನು ಕ್ರೇನ್‌ನಿಂದ ನೀರಿನಲ್ಲಿ ಬಿಡಲಾಯಿತು. ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ವಿವಿಧ ಕಡೆಗಳಿಂದ ಜನ ಬಂದಿದ್ದರು. ನಿದ್ರೆಗೆಟ್ಟು ಪ್ರತಿಮೆಗಳ ವಿಸರ್ಜನೆಯನ್ನು ವೀಕ್ಷಿಸಿದರು. ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು.

ಕಾಲುವೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಹಾಕಲಾಗಿತ್ತು. ಸುತ್ತಮುತ್ತಲಿನ ಪರಿಸರದಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿತ್ತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಆಯಾ ಗಣೇಶ ಮಂಡಳಿಯವರು ಒಬ್ಬೊಬ್ಬರೇ ಸರತಿ ಸಾಲಿನಲ್ಲಿ ಬಂದು, ಪ್ರತಿಮೆಗಳನ್ನು ವಿಸರ್ಜಿಸಿದರು.

ಸಂಜೆ ಆಯಾ ಬಡಾವಣೆಗಳಿಂದ ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಗಣಪನ ಪ್ರತಿಮೆ ಇಟ್ಟು, ಅದಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ತಮಟೆ, ಡೊಳ್ಳು ಕುಣಿತ, ಕಿವಿಗಡಚ್ಚಿಕ್ಕುವ ಸಂಗೀತದೊಂದಿಗೆ ಮೆರವಣಿಗೆ ಮಾಡಲಾಯಿತು. ಪಟಾಕಿ ಸುಡಲಾಯಿತು.

ರಾಣಿಪೇಟೆಯ ಮಿತ್ರವೃಂದ ಮಂಡಳಿಯ ಮೆರವಣಿಗೆಯಲ್ಲಿ ಮಹಿಳಾ ಕಲಾವಿದರು ಡೊಳ್ಳು ಬಾರಿಸಿ, ಹೆಜ್ಜೆ ಹಾಕಿ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಭಗವಾ ಧ್ವಜಗಳು ರಾರಾಜಿಸಿದವು. ಪ್ರಮುಖ ವೃತ್ತಗಳಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ನಿಂತು ಅಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಗುಲಾಲ್‌ ಎರಚಿಕೊಂಡರು. ‘ಗಣಪತಿ ಬೊಪ್ಪ ಮೋರ್‍ಯಾ, ಅಗ್ಲಿ ಬರಸ್‌ ತು ಜಲ್ದಿ ಆ’ ಘೊಷಣೆಗಳನ್ನು ಕೂಗಿದರು.

ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನ ಮೂರಂಗಡಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣ, ರೈಲು ನಿಲ್ದಾಣ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದರು. ಮಹಿಳೆಯರು ಮನೆಯ ಮಹಡಿ ಮೇಲೆ ನಿಂತು, ಗಣಪನ ಮೇಲೆ ಹೂಮಳೆಗರೆದರು. ಐದನೇ ದಿನದ ಗಣೇಶನ ಪ್ರತಿಮೆಗಳ ವಿಸರ್ಜನೆ ಸೋಮವಾರ ಸಂಜೆ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !