ಮಲ್ಲಿಗೆ ನಾಡಲ್ಲಿ ಮತ್ತೆ ಬರ 

7
ಕ್ಷೀಣಿಸಿದ ಮಳೆ; ಬಾಡುತ್ತಿರುವ ಬೆಳೆ; ಅನ್ನದಾತನಿಗೆ ಮತ್ತೆ ಸಂಕಷ್ಟ

ಮಲ್ಲಿಗೆ ನಾಡಲ್ಲಿ ಮತ್ತೆ ಬರ 

Published:
Updated:
Deccan Herald

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಸುರಿಯದೇ ಬೆಳೆಗಳು ಬಾಡಲಾರಂಭಿಸಿವೆ.

ತೇವಾಂಶ ಕೊರತೆಯಿಂದ ಕುಂಠಿತಗೊಂಡಿರುವ ಬೆಳೆಗಳು ಸದ್ಯ ಮಳೆ ಬಿದ್ದರೂ ಚೇತರಿಸಿಕೊಳ್ಳಲಾರದ ಸ್ಥಿತಿಗೆ ತಲುಪಿವೆ. ಹೀಗಾಗಿ ಮಲ್ಲಿಗೆ ನಾಡಿನಲ್ಲಿ ಮತ್ತೆ ಬರದ ಛಾಯೆ ಆವರಿಸಿದಂತಾಗಿದೆ.

ಪ್ರಸಕ್ತ ಮುಂಗಾರು ಭರವಸೆ ಹುಟ್ಟಿಸಿದ್ದರಿಂದ ಹಡಗಲಿ, ಇಟ್ಟಿಗಿ, ಹಿರೇಹಡಗಲಿ ಹೋಬಳಿಯ ಮಳೆಯಾಶ್ರಿತ ಪ್ರದೇಶದ ರೈತರು ಬಹು ನಿರೀಕ್ಷೆಯಿಂದ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರು. ಇದೀಗ ಬೆಳೆಗಳು ಸಂದಿಗ್ದ ಸ್ಥಿತಿಯಲ್ಲಿರುವಾಗ ವರುಣನ ಅವಕೃಪೆ ಉಂಟಾಗಿ ಅನ್ನದಾತನ ಮುಖದಲ್ಲಿ ನಿರಾಸೆಯ ಭಾವ ಎದ್ದು ಕಾಣುತ್ತಿದೆ.

ಮೋಡ ಮುಸುಕಿದ ವಾತಾವರಣದ ನಡುವೆ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿದ್ದ ತುಂತುರು ಮಳೆಗೆ ಬೆಳೆಗಳು ಇಲ್ಲಿಯವರೆಗೆ ಜೀವ ಹಿಡಿದುಕೊಂಡಿದ್ದವು. ಕಳೆದ ಒಂದು ವಾರದಿಂದ ತುಂತುರು ಮಳೆಯೂ ಇಲ್ಲದೇ ಬಿಸಿಲಿನ ಪ್ರಖರತೆ ಹೆಚ್ಚಾಗತೊಡಗಿದೆ. ತೇವಾಂಶ ಕೊರತೆಯಿಂದ ಬಸವಳಿದಿರುವ ಬೆಳೆಗಳು ಇದೀಗ ಕಳೆಗುಂದಲು ಪ್ರಾರಂಭಿಸಿವೆ.

ತಾಲ್ಲೂಕಿನಲ್ಲಿ ಬಿತ್ತನೆಯ ನಂತರ ಒಮ್ಮೆಯೂ ಭೂಮಿ ತಂಪಾಗುವಂತಹ ಹದ ಮಳೆ ಸುರಿದಿಲ್ಲ. ತೇವಾಂಶ ಕೊರತೆಯಿಂದ ಎಲ್ಲ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ನೆಲ ಬಿಟ್ಟು ಈಗ ಮೇಲೆದ್ದಿರುವ ಮೆಕ್ಕೆಜೋಳದ ಬೆಳೆ ಅವಧಿಪೂರ್ಣ (ಸೂಲಂಗಿ) ಹೂವಾಡಿದೆ. ತೆನೆ ಮೂಡುವ ಹಂತದಲ್ಲಿರುವ ಜೋಳದ ಬೆಳೆ ಬಿಸಿಲಿನ ತಾಪಕ್ಕೆ ಒರಗಿಕೊಂಡಿದೆ. ‘ಸದ್ಯ ಮಳೆ ಸುರಿದರೂ ಬೆಳೆಗಳು ಚೇತರಿಸಿಕೊಳ್ಳಲಾರವು’ ಎಂಬುದು ರೈತರ ಅಭಿಪ್ರಾಯ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಅನುಭವಿಸಿರುವ ತಾಲ್ಲೂಕಿನ ರೈತರಿಗೆ ಆರಂಭಿಕ ಮುಂಗಾರು ಭರವಸೆ ಹುಟ್ಟಿಸಿತ್ತು. ಈ ಬಾರಿಯೂ ಮಳೆರಾಯ ಮುನಿದಿದ್ದರಿಂದ ಸಾಲ ಶೂಲ ಮಾಡಿ ಬಿತ್ತನೆ ಮಾಡಿರುವ ಮಳೆಯಾಶ್ರಿತ ಪ್ರದೇಶದ ರೈತರಿಗೆ ದಿಕ್ಕು ತೋಚದಂತಾಗಿದೆ.

‘ಸಾಲಶೂಲ ಮಾಡಿ ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿ ನಿಂತಿದೆ. ಬಾಡಿದ ಬೆಳೆಯನ್ನು ನೋಡಿದ್ರ ಕರುಳು ಹಿಂಡಿದಂಗ ಆಗತೈತಿ. ಸದ್ಯ ಮಳೆ ಆದ್ರ ನಮ್ಮ ಬದುಕು ಹಸನಾಗತೈತಿ, ಇಲ್ಲಾಂದ್ರ ಮನಿ ಮಂದಿಗೆಲ್ಲಾ ಕೂಲಿಯೇ ಗತಿ’ ಎಂದು ಮುದೇನೂರಿನ ರೈತ ಎಂ. ಮಂಜಪ್ಪ ಬೇಸರದಿಂದ ಹೇಳಿದರು.
–ಕೆ.ಸೋಮಶೇಖರ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !